ಕುಂಬ್ರ: ಹಿಟ್ ಆಂಡ್ ರನ್, ಅರಿಯಡ್ಕ ಗ್ರಾ.ಪಂ ಮಾಜಿ ಅಧ್ಯಕ್ಷೆಗೆ ಗಾಯ

0

ಪುತ್ತೂರು: ಹಿಟ್ ಆಂಡ್ ರನ್‌ನಲ್ಲಿ ಅರಿಯಡ್ಕ ಗ್ರಾ.ಪಂ ಮಾಜಿ ಅಧ್ಯಕ್ಷೆ ಸವಿತಾ ಎಸ್.ರವರು ಗಾಯಗೊಂಡ ಘಟನೆ ಮೇ.21 ರಂದು ಎನ್‌ಎಚ್ 275 ರಲ್ಲಿ ಕುಂಬ್ರ ಸಮೀಪದ ಶೇಖಮಲೆಯಲ್ಲಿ ನಡೆದಿದೆ.

ಸವಿತಾರವರು ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಶೇಖಮಲೆ ಮಸೀದಿ ಹತ್ತಿರ ಟೆಂಪೋ ಟ್ರಾವೆಲ್ಲರ್‌ವೊಂದು ಎದುರಿನಿಂದ ಬರುತ್ತಿದ್ದ ವಾಹನವನ್ನು ತಪ್ಪಿಸುವ ಭರದಲ್ಲಿ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಪಲ್ಟಿಯಾಗಿದ್ದು ಸವಾರೆ ರಸ್ತೆಗೆ ಎಸೆಯಲ್ಪಟ್ಟಿದ್ದರು.

ಗಾಯಾಳುವನ್ನು ತಕ್ಷಣವೇ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ಪ್ರವೀಣ್ ಮಡ್ಯಂಗಳರವರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕರೆದುಕೊಂಡು ಬರಲಾಗಿದೆ. ಅಪಘಾತದ ದೃಶ್ಯ ಶೇಖಮಲೆ ಮಸೀದಿಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಲ್ಲುಗುಂಡಿಯಲ್ಲಿ ಟೆಂಪೋ ಟ್ರಾವೆಲ್ಲರ್ ವಶಕ್ಕೆ
ಅಪಘಾತದ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಬರುತ್ತಿದ್ದ ಅರುಣಾ ಬಸ್‌ನ ಮಾಲಕರ ಅಣ್ಣ ಆನಂದ ಕೌಡಿಚ್ಚಾರುರವರು ಟೆಂಪೋ ಟ್ರಾವೆಲ್ಲರ್ ನಂಬರ್ ನೋಟ್ ಮಾಡಿಕೊಂಡಿದ್ದು ತಕ್ಷಣವೇ ಆ ನಂಬರ್ ಅನ್ನು ಇಕ್ಬಾಲ್ ಹುಸೈನ್ ಕೌಡಿಚ್ಚಾರುರವರಿಗೆ ನೀಡಿದ್ದರು. ಇಕ್ಭಾಲ್ ಹುಸೈನ್ ಕೌಡಿಚ್ಚಾರ್‌ರವರು ಆ ನಂಬರ್ ಅನ್ನು ಅಶೋಕ್ ಪೂಜಾರಿ ಬೊಳ್ಳಾಡಿಯವರಿಗೆ ಕೊಟ್ಟಿದ್ದರು. ಅಶೋಕ್ ಪೂಜಾರಿ ಬೊಳ್ಳಾಡಿಯವರು ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಎಸ್‌ಐಗೆ ಟ್ರಾವೆಲ್ಲರ್ ನಂಬರ್ ಸಮೇತ ಮಾಹಿತಿ ನೀಡಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಸಂಪ್ಯ ಪೊಲೀಸರು ಜಾಲ್ಸೂರು ಹಾಗೂ ಸಂಪಾಜೆ ಚೆಕ್‌ಪೋಸ್ಟ್‌ಗಳಿಗೆ ಮಾಹಿತಿ ನೀಡಿದ್ದರು. ಅದರಂತೆ ಕಲ್ಲುಗುಂಡಿಯಲ್ಲಿ ಟೆಂಪೋ ಟ್ರಾವೆಲ್ಲರ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here