ಯಶಸ್ಸಿಗೆ ಕಠಿಣ ಪರಿಶ್ರಮವೇ ರಾಜಮಾರ್ಗ: ನ್ಯಾ. ಎಂ. ಜಿ. ಉಮಾ
ಪುತ್ತೂರು: ನೆಹರುನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ 37ನೇ ವರ್ಷದ ಮಹಾವಿದ್ಯಾಲಯದ ವಾರ್ಷಿಕೋತ್ಸವ ಬುಧವಾರ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮಕ್ಕಿಮನೆ ಗಣೇಶಯ್ಯ ಉಮಾ ಭಾಗವಹಿಸಿ ಮಾತನಾಡಿದರು.

ಕಾನೂನು ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಬೇಕು. ಗೆದ್ದೇ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗಬೇಕು. ನಾವು ಓದಲು ಬಂದಿದ್ದೇನೆ, ಓದಬೇಕು ಎನ್ನುವ ಪ್ರಜ್ಞೆಯೊಂದಿಗೆ ನಿರಂತರ ಅಧ್ಯಯನ ನಡೆಸಿದಲ್ಲಿ ಯಶಸ್ಸಿನ ದಾರಿ ಸುಗಮವಾಗಲಿದೆ. ಅವಕಾಶಗಳು ಬಂದಾಗ ಪರಿಸ್ಥಿತಿ ಕಠಿಣವಾಗಿದ್ದರೂ ಮುನ್ನುಗ್ಗಿ ಗುರಿ ಸಾಧಿಸುವ ಛಲ ಇರಬೇಕು. ಆಗ ಮಾತ್ರ ಗೆಲುವು ಸಾಧ್ಯವಾಗುತ್ತದೆ. ಯಶಸ್ಸಿಗೆ ಕಠಿಣ ಪರಿಶ್ರಮವೇ ರಾಜಮಾರ್ಗವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಾವು ಗೆಲುವಿಗಾಗಿ ಪಡುವ ಶ್ರಮದಲ್ಲಿ ಒಂದು ವೇಳೆ ಸೋತರೂ ಅದು ನಮಗೆ ದೊಡ್ಡ ಪಾಠವನ್ನೇ ಕಲಿಸಿರುತ್ತದೆ. ದೊಡ್ಡ ಸಾಧನೆ ಮಾಡಬೇಕು ಎನ್ನುವ ಕನಸು ಹೊತ್ತ ಆಕಾಂಕ್ಷಿಗಳಿಗೆ ಆತ್ಮವಿಶ್ವಾಸವೇ ಪ್ರಮುಖ ಅಸ್ತ್ರ ಎಂದು ಹೇಳಿದ ಅವರು, ತಾನು ಬೆಳೆದು ಬಂದ ಸಾಧನೆಯ ಹಾದಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಕಾರ್ಯದರ್ಶಿಗಳಾದ ಡಾ. ಕೆ. ಎಂ. ಕೃಷ್ಣ ಮಾತನಾಡಿ, ಶಿಕ್ಷಣ ಓದು-ಬರಹಕ್ಕೆ ಮಾತ್ರವೇ ಸೀಮಿತಗೊಳ್ಳದೇ ಒಟ್ಟಾರೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೆಲವೊಂದು ಸಮಾಜಮುಖಿ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಸ್ವಾಮಿ ವಿವೇಕಾನಂದರ ಆಶಯದಂತೆ ಆರಂಭವಾದ ವಿವೇಕಾನಂದ ವಿದ್ಯಾವರ್ಧಕ ಸಂಘದ 80ಕ್ಕಿಂತಲೂ ಅಧಿಕ ವಿದ್ಯಾಸಂಸ್ಥೆಗಳು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ವಿವಿಧ ವಿಶಿಷ್ಟ ಕಾರ್ಯಕ್ರಮಗಳನ್ನು ಸತತವಾಗಿ ನಡೆಸುತ್ತಿದೆ. ಅದಕ್ಕಾಗಿ ನ್ಯಾಯಾಧಾರ, ಯಶಸ್, ಭವಿಷ್, ವಿಕಾಸ್ ನಂತಹ ಹಲವು ವಿದ್ಯಾರ್ಥಿಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಸರಿದಾರಿಯಲ್ಲಿ ಹೋದಾಗ ಮಾತ್ರ ಬದುಕಿಗೆ ಒಂದು ಅರ್ಥ ಬರುತ್ತದೆ. ಅಂತಹ ಉತ್ತಮ ಜೀವನ ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಯದ್ದಾಗಲಿ ಎಂದು ಶುಭ ಹಾರೈಸಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ.ಪಿ. ವಾರ್ಷಿಕ ವರದಿಯನ್ನು ವಾಚಿಸಿದರು. ಇದೇ ವೇಳೆ ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷರಾದ ಗಣೇಶ್ ಜೆ. ಬಾಳಿಗ ವಿದ್ಯಾರ್ಥಿ ಪರಿಷತ್ ನ ವರದಿಯನ್ನು ವಾಚಿಸಿದರು. ವೇದಿಕೆಯಲ್ಲಿದ್ದ ಗಣ್ಯರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಾರ್ಷಿಕ ಸಂಚಿಕೆ ‘ವಿವೇಕ’ ಬಿಡುಗಡೆ ಮಾಡಿದರು. ಜೊತೆಗೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ನಡೆಸಿದ ಪರೀಕ್ಷೆಯಲ್ಲಿ ರಾಂಕ್ ಪಡೆದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ಸಾಧಕ ವಿದ್ಯಾರ್ಥಿನಿ ಬಿ. ಪೂರ್ಣಿಮಾ ಅವರಿಗೆ ಸನ್ಮಾನವನ್ನು ನಡೆಸಲಾಯಿತು. ಜೊತೆಗೆ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುರೇಂದ್ರ ಕಿಣಿ ಜಿ., ಸಂಚಾಲಕರಾದ ವಿಜಯನಾರಾಯಣ ಕೆ. ಎಂ., ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ, ವಿದ್ಯಾರ್ಥಿ ಪರಿಷತ್ ನ ಕಾರ್ಯದರ್ಶಿ ಪ್ರದೀಪ್ ಹಾಗೂ ಜೊತೆ ಕಾರ್ಯದರ್ಶಿ ಶ್ರುತಿ ಟಿ. ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀರಕ್ಷಾ ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ವಂದಿಸಿದರು. ಕಾರ್ಯಕ್ರಮವನ್ನು ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ ಪಿ. ಎಂ. ಹಾಗೂ ಕಾನೂನು ಸಹಾಯಕ ಪ್ರಾಧ್ಯಾಪಕಿ ಶ್ವೇತಾ ವಿಶ್ವೇಶ್ವರ ಹೆಗಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ವಕೀಲರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅತ್ಯುತ್ತಮ ನಾಗರಿಕರಾಗಿ ಬದುಕುವ ಕರ್ತವ್ಯ ಯುವಜನರದಾಗಿದೆ
ಇಂದಿನ ವಿದ್ಯಾರ್ಥಿಗಳೇ ನಾಳೆಯ ಭವ್ಯ ಪ್ರಜೆಗಳು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳೇ ಈ ದೇಶದ ಸಂಪತ್ತಾಗಿದ್ದಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಗಮನಹರಿಸಿ ಮುಂದಿನ ಭವಿಷ್ಯವನ್ನು ಉಜ್ವಲವನ್ನಾಗಿ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕು ನಡೆಸುವಂತಾಗಲಿ. ಮುಂದೆ ವೃತ್ತಿ ಜೀವನದಲ್ಲಿ ಯಾವುದೇ ಭ್ರಷ್ಟಾಚಾರದಂತಹ ಕೃತ್ಯದಲ್ಲಿ ಭಾಗಿಯಾಗದೇ ಸಮಾಜಮುಖಿಯಾಗಿ ಬದುಕುವ ಮೂಲಕ ಅತ್ಯುತ್ತಮ ನಾಗರಿಕರಾಗಿ ಗುರುತಿಸಿಕೊಳ್ಳುವ ಕರ್ತವ್ಯ ಇಂದಿನ ಯುವಜನರ ಮುಂದಿದೆ.
ಎಂ. ಜಿ. ಉಮಾ, ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಛ ನ್ಯಾಯಾಲಯ