ಕ್ಷುಲ್ಲಕ ಕಾರಣಗಳ ಆಧಾರದಲ್ಲಿ ಕಾನೂನು ಬದ್ಧವಾದ ಜನೋಪಯೋಗಿ ಯೋಜನೆ ನಿಷೇಧಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ -ನ್ಯಾಯಪೀಠ
ಪುತ್ತೂರು:500 ಮೀಟರ್ ಅಂತರದಲ್ಲಿ ಎರಡು,ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಗಳನ್ನು ತೆರೆಯಲು ಅನುಮತಿಸಬಾರದು ಎಂದು ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ,ಕ್ಷುಲ್ಲಕ ಕಾರಣಗಳ ಆಧಾರದಲ್ಲಿ ಕಾನೂನುಬದ್ದ ಜನೋಪಯೋಗಿ ಕಾರ್ಯಕ್ರಮವನ್ನು ನಿಷೇಧಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಮಾಡಿದಂತೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಪದ್ಯಾಣ ‘ಗಂಧರ್ವ ಮನೆ’ಶೀಲಾ ಭಟ್ ಅವರಿಗೆ ಜನೌಷಧ ಕೇಂದ್ರ ತೆರೆಯಲು ಅನುಮತಿಸಿರುವುದನ್ನು ಪ್ರಶ್ನಿಸಿ, ಇನ್ನೋರ್ವ ಅರ್ಜಿದಾರೆ ಕೆಯ್ಯೂರುನ ಸವಿನಯ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.ಸವಿನಯ ಅವರು ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಜನೌಷಧಿ ಕೇಂದ್ರ ಆರಂಭಿಸುವ ಸಂಬಂಧ ಅರ್ಜಿ ಸಲ್ಲಿಸಿ, ಪ್ರಕ್ರಿಯೆ ಪ್ರಗತಿಯಲ್ಲಿರುವ ಮಧ್ಯೆ,ಕುಂಬ್ರದ ಸುವರ್ಣ ಕಾಂಪ್ಲೆಕ್ಸ್ನಲ್ಲಿ ಶೀಲಾ ಭಟ್ ಅವರ ಮಾಲಕತ್ವದಲ್ಲಿ ಜನೌಷಧಿ ಕೇಂದ್ರ ಪ್ರಾರಂಭಗೊಂಡಿತ್ತು.ಇದರ ವಿರುದ್ಧ ಸವಿನಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರತಿವಾದಿಯಾಗಿರುವ ಶೀಲಾ ಭಟ್ ಅವರಿಗೆ ಜನೌಷಧ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ.ಆದರೆ,ಅರ್ಜಿದಾರರಿಗೆ ಜನೌಷಧ ಕೇಂದ್ರ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ಮಾತ್ರ ನೀಡಲಾಗಿದೆ.ತನಗೆ ಮಂಜೂರಾಗಿರುವ ಕೇಂದ್ರ ಮತ್ತು ಪ್ರತಿವಾದಿಯವರಿಗೆ ಮಂಜೂರಾಗಿರುವ ಕೇಂದ್ರದ ನಡುವಿನ ಅಂತರ 500 ಮೀಟರ್ ಮಾತ್ರ ಇದೆ ಎಂದು ವಾದಿಸುವ ಹಕ್ಕು ಅರ್ಜಿದಾರರು ಹೊಂದಿಲ್ಲ.ಅತ್ಯಂತ ಕಡಿಮೆ ಅಂತರದಲ್ಲಿ ಮತ್ತೊಂದು ಜನೌಷಧ ಕೇಂದ್ರ ತೆರೆಯಲು ಅನುಮತಿಸಿದರೆ ಉದ್ಯಮಕ್ಕೆ ಹೊಡೆತ ಬೀಳುತ್ತದೆಂದು ಅರ್ಜಿದಾರರು ಬಿಂಬಿಸಿದ್ದಾರೆ.ಆದರೆ, ವಾಸ್ತವಿಕ ಚಿತ್ರಣ ಅದಲ್ಲ,ಹಲವರಿಗಾಗಿ ರೂಪಿಸಿರುವ ಕಲ್ಯಾಣ ಕಾರ್ಯಕ್ರಮದ ಭಾವನೆಯನ್ನು ನ್ಯಾಯಾಲಯ ರಕ್ಷಿಸಬೇಕೇ ವಿನಃ ಕೆಲವರ ಭಾವನೆಯನ್ನಲ್ಲ.ಉದ್ಯಮಕ್ಕೆ ಹೊಡೆತ ಬೀಳುತ್ತದೆಂಬ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು’ ಎಂದು ನ್ಯಾಯಪೀಠ ಹೇಳಿದೆ.ಎರಡು ಕೇಂದ್ರಗಳ ನಡುವಿನ ಭೌಗೋಳಿಕ ಪ್ರದೇಶದ ಅಂತರ ಕಡಿಮೆ ಎಂದು ಅರ್ಜಿದಾರರು ವಾದಿಸಿದ್ದಾರೆ.ಆ ನೆಲೆಯಲ್ಲಿ ಅರ್ಜಿಯು ಅನೂರ್ಜಿತವಾಗಿದ್ದು ಕ್ಷುಲ್ಲಕ ಕಾರಣಗಳ ಆಧಾರದಲ್ಲಿ ಕಾನೂನು ಬದ್ಧವಾದ, ಜನೋಪಯೋಗಿ ಯೋಜನೆ ನಿಷೇಧಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಮಾಡಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ
ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಜನೌಷಧ ಕೇಂದ್ರ ಆರಂಭಕ್ಕೆ ಅಧಿಸೂಚನೆ ಪ್ರಕಟವಾದಾಗ ಕೆಯ್ಯೂರಿನ ಸವಿನಯ ಎಂಬವರು 2023ರ ನ.20ರಂದು ಮಹಿಳಾ ಉದ್ಯಮಿ ವಿಭಾಗದಡಿ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ನೆಲಮಹಡಿಯಲ್ಲಿ ಜನೌಷಧ ಕೇಂದ್ರ ಆರಂಭಿಸುವ ಸಂಬಂಧ ಅರ್ಜಿ ಹಾಕಿದ್ದು, ಅದಕ್ಕೆ ತಾತ್ವಿಕ ಒಪ್ಪಿಗೆ ದೊರೆತಿತ್ತು.ಅಲ್ಲದೆ,ಸಂಬಂಽತ ದಾಖಲೆ ಒದಗಿಸಿ, ಒಪ್ಪಿಗೆ ನೀಡಿ ಸ್ಟೋರ್ ಕೋಡ್ ನೀಡುವಂತೆ ಅವರು ಕೋರಿದ್ದರು.ಈ ಪ್ರಕ್ರಿಯೆ ಪ್ರಗತಿಯಲ್ಲಿರುವಾಗಲೇ, ಕಲ್ಮಡ್ಕ ಪದ್ಯಾಣದ ಶೀಲಾ ಭಟ್ ಸಹ ಅರ್ಜಿ ಹಾಕಿದ್ದು,ಅವರಿಗೆ ಜನೌಷಧ ಅಂಗಡಿ ಮಂಜೂರಾತಿ ದೊರೆತು,ಸ್ಟೋರ್ ಕೋಡ್ ನೀಡಲಾಗಿತ್ತು.ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಸವಿನಯ ಅವರು, ಶೀಲಾಭಟ್ ಅವರಿಗೆ ಸ್ಟೋರ್ ಕೋಡ್ ನೀಡಿರುವುದನ್ನು ರದ್ದು ಪಡಿಸಬೇಕು ಎಂದು ಕೋರಿದ್ದರು.ಆದರೆ, ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿದೆ.
ನನಗೆ ಮಾಹಿತಿ ಇಲ್ಲ
ಹೈಕೋರ್ಟ್ ಸವಿನಯ ಅವರನ್ನು ವಜಾಗೊಳಿಸಿರುವ ಕುರಿತು ಅವರನ್ನು ಸಂಪರ್ಕಿಸಿದಾಗ, ‘ಈ ಕುರಿತು ನನಗೆ ನ್ಯಾಯಾಲಯದಿಂದ ಯಾವುದೇ ಆದೇಶ ಬಂದಿಲ್ಲ ಮತ್ತು ನನಗೆ ಯಾವುದೇ ಮಾಹಿತಿಯೂ ಇಲ್ಲ.ಮಾಧ್ಯಮದ ಮೂಲಕವಷ್ಟೇ ತಿಳಿದಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.