ಪುತ್ತೂರು: ಮಂಗಳೂರು ಲೋಕಾಯುಕ್ತ ವಿಭಾಗದ ವಿಶೇಷ ಸರಕಾರಿ ಅಭಿಯೋಜಕರಾಗಿದ್ದ ಕೆ.ಎಸ್.ಎನ್. ರಾಜೇಶ್ ವಿರುದ್ಧ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ಮಂಗಳೂರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸರಕಾರದ ಪರ ವಾದ ಮಂಡಿಸಲು ವಿಶೇಷ ಸರಕಾರಿ ಅಭಿಯೋಜಕರಾಗಿ ಕೆ. ಶಿವಪ್ರಸಾದ್ ಆಳ್ವ ನೇಮಕಗೊಂಡಿದ್ದಾರೆ.
ಮಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದ ಸಂತ್ರಸ್ತ ಯುವತಿ ವಕೀಲ ಕೆ.ಎಸ್.ಎನ್ ರಾಜೇಶ್ ಅವರ ಮಂಗಳೂರು ಕರಂಗಲ್ಪಾಡಿಯ ಕಚೇರಿಯಲ್ಲಿ ತರಬೇತಿಗಾಗಿ ಸೇರಿದ್ದರು. ಈ ವೇಳೆ ರಾಜೇಶ್ ಅವರು ಯುವತಿಯನ್ನು ಪುಸಲಾಯಿಸಿ ಸೆಕ್ಸ್ ನಡೆಸಲು ಒತ್ತಾಯಿಸುತ್ತಿದ್ದರು. ತನ್ನ ಚೇಂಬರ್ ಒಳಗೆ ಕರೆದು ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಯುವತಿ ನೀಡಿದ ದೂರಿನಂತೆ ರಾಜೇಶ್ ವಿರುದ್ಧ ಐಪಿಸಿ 376, 376-2, 376(2)-8, 376 2, 511, 354(2), 354(2), 354 (2), 354 (8), 506, 34, 384, 388, 389 ಅಡಿ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಮೂಲತಃ ಸುಳ್ಯದವರಾದ ಕೆ.ಎಸ್.ಎನ್ ರಾಜೇಶ್ ಲೋಕಾಯುಕ್ತದಲ್ಲಿ ದಾಖಲಾಗುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕಳೆದ ಕೆಲವು ವರ್ಷಗಳಿಂದ ಸೇವೆ ನಡೆಸುತ್ತಿದ್ದರು. ಲೋಕಾಯುಕ್ತ ಪ್ರಕರಣಗಳಲ್ಲಿ ಸಂತ್ರಸ್ತರ ಪರವಾಗಿ ವಾದಿಸಲು ಸರಕಾರದಿಂದ ನೇಮಕಗೊಂಡ ವಕೀಲರಾಗಿದ್ದರು. ಹೀಗಾಗಿ ರಾಜೇಶ್ ಮಂಗಳೂರಿನಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. ರಾಜೇಶ್ ಮತ್ತು ಸಂತ್ರಸ್ತ ವಿದ್ಯಾರ್ಥಿನಿ ಮಾತನಾಡಿದ್ದು ಎನ್ನಲಾದ ಫೋನ್ ಕರೆ ಆಡಿಯೋ ಹರಿದಾಡಿತ್ತು. ಆಕೆಯನ್ನು ಕಚೇರಿಗೆ ಬಾ ಮತ್ತು ಮುಂದೆಂದೂ ಈ ರೀತಿ ನಡೆದುಕೊಳ್ಳಲ್ಲ. ಇಲ್ಲಿಗೇ ಬಿಟ್ಟು ಬಿಡು ಎಂದು ವಕೀಲ ರಾಜೇಶ್ ಮನವಿ ಮಾಡುವ ಆಡಿಯೋ ಅದರಲ್ಲಿ ಇತ್ತು. ಈ ಬಗ್ಗೆ ಅಂದು ಪ್ರತಿಕ್ರಿಯೆ ನೀಡಿದ್ದ ರಾಜೇಶ್ ಅವರು ಇದು ನನ್ನ ಇಮೇಜ್ ಹಾಳು ಮಾಡಲು ಯತ್ನಿಸುವ ಪ್ರಯತ್ನ. ನನ್ನನ್ನು ಲೋಕಾಯುಕ್ತ ಹುದ್ದೆಯಿಂದ ತೆರವುಗೊಳಿಸಲು ಕೆಲವು ವಕೀಲರೇ ಸೇರಿಕೊಂಡು ಈ ಕೆಲಸ ಮಾಡಿದ್ದಾರೆ. ಆಡಿಯೋ ತನ್ನದಲ್ಲ. ಯಾರೋ ಕ್ರಿಯೇಟ್ ಮಾಡಿದ್ದಾರೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಎಫ್‌ಐಆರ್ ದಾಖಲಾಗಿದ್ದು ರಾಜೇಶ್ ಕಚೇರಿಯಲ್ಲಿ ಸಹೋದ್ಯೋಗಿ ಆಗಿದ್ದ ಮಹಾಲಕ್ಷ್ಮಿ ಹೆಗ್ಡೆ ಮತ್ತು ಧ್ರುವ ಎಂಬವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ೬ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ಸರಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ವಿಶೇಷ ಸರಕಾರಿ ಅಭಿಯೋಜಕರಾಗಿ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಕೆ. ಶಿವಪ್ರಸಾದ್ ಆಳ್ವ ಅವರನ್ನು ಸರಕಾರ ನೇಮಕ ಮಾಡಿದೆ. ಪುತ್ತೂರು ತಾಲೂಕಿನ ದರ್ಬೆ ಸಮೀಪದ ಕಾವೇರಿಕಟ್ಟೆ ನಿವಾಸಿಯಾಗಿರುವ ಶಿವಪ್ರಸಾದ್ ಆಳ್ವ ಅವರು ಹಲವು ವಿಶೇಷ ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ್ದು ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ದಕ್ಷ ಕಾರ್ಯನಿರ್ವಹಣೆಗಾಗಿ ಆಳ್ವ ಅವರು ಇತ್ತೀಚೆಗಷ್ಟೇ ರಾಜ್ಯ ಸರಕಾರ ನೀಡುವ ಸರ್ವೋತ್ತಮ ಪ್ರಶಸ್ತಿಗೆ ಭಾಜರಾಗಿದ್ದರು.