ನೆಲ್ಯಾಡಿ: ಶಿಶಿಲದಿಂದ ಅರಸಿನಮಕ್ಕಿ, ನೆಲ್ಯಾಡಿ ಮೂಲಕ ಉಪ್ಪಿನಂಗಡಿಗೆ ಬರುವ ಕೆಎಸ್ ಆರ್ ಟಿಸಿ ಬಸ್ ನೆಲ್ಯಾಡಿ ತಲುಪುತ್ತಿದ್ದಂತೆ ಬಸ್ಸಿನೊಳಗೆ ಹೊಗೆ ಕಾಣಿಸಿಕೊಂಡು ಪ್ರಯಾಣಿಕರು ಭಯಭೀತರಾದ ಘಟನೆ ಮೇ 24 ರಂದು ಬೆಳಿಗ್ಗೆ ನಡೆದಿದೆ.
ಬೆಳಿಗ್ಗೆ ಶಿಶಿಲದಿಂದ 7 ಗಂಟೆಗೆ ಹೊರಡುವ ಈ ಬಸ್ಸಿನಲ್ಲಿ ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರು ದಿನ ನಿತ್ಯ ಪ್ರಯಾಣಿಸುತ್ತಾರೆ. ಬಸ್ಸಿನಲ್ಲಿ ಜನ ತುಂಬಿ ತುಳುಕುತ್ತಾರೆ. ಇಂದು (ಮೇ 24) ಸಹ ಬಸ್ಸಿನಲ್ಲಿ ಸಾಕಷ್ಟು ಜನ ಪ್ರಯಾಣಿಸುತ್ತಿದ್ದರು. ಬಸ್ ನೆಲ್ಯಾಡಿ ತಲುಪುತ್ತಿದ್ದಂತೆ ಬಸ್ಸಿನೊಳಗೆ ಹೊಗೆ ಕಾಣಿಸಿಕೊಂಡಿದ್ದು ಪ್ರಯಾಣಿಕರು ಭಯಭೀತರಾಗಿ ಕೆಳಗೆ ಇಳಿದಿದ್ದಾರೆ.
ಈ ಮಾರ್ಗದಲ್ಲಿ ಈ ವೇಳೆ ಬೇರೆ ಬಸ್ಸುಗಳ ಓಡಾಟವೂ ಇಲ್ಲದೇ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾದರು. ಜೀಪು ಸೇರಿದಂತೆ ಇತರೆ ವಾಹನಗಳಲ್ಲಿ ಪ್ರಯಾಣಿಕರು ಕಷ್ಟ ಪಟ್ಟು ಪ್ರಯಾಣಿಸಿದರು. ಬಳಿಕ ಬಸ್ಸನ್ನು ಚಾಲಕ ಡಿಪೋ ಗೆ ಕೊಂಡೊಯ್ದಿರುವುದಾಗಿ ವರದಿಯಾಗಿದೆ.