ಪುತ್ತೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಿಲ್ಲೆ ಮೈದಾನದ ಮುಂಭಾಗದಲ್ಲಿರುವ ನಗರ ಸಭಾ ಕಾರ್ಯಾಲಯದ ತಡೆಗೋಡೆಯು ಮೇ.25ರಂದು ಮಧ್ಯಾಹ್ನ ಕುಸಿದು ಬಿದ್ದಿದೆ. ಘಟನೆಯಿಂದ ಎರಡು ಆಟೋ ರಿಕ್ಷಾಗಳಿಗೆ ಹಾನಿಯುಂಟಾಗಿದೆ.
ನಗರ ಸಭಾ ಕಚೇರಿ ಮುಂಭಾಗದಲ್ಲಿ, ಗ್ರಾಮ ಚಾವಡಿಯ ಹಿಂಬದಿಯ ಕಾಂಪೌಂಡ್ ಕುಸಿದು ಬಿದ್ದಿದೆ. ಇದರಿಂದಾಗಿ ಕೆಲ ಭಾಗದಲ್ಲಿ ನಿಲ್ಲಿಸಿದ್ದ ಎರಡು ಆಟೋ ರಿಕ್ಷಾಗಳಿಗೆ ಹಾನಿಯುಂಟಾಗಿದೆ. ಚಾಲಕರು ಅದೇ ರಿಕ್ಷಾದಲ್ಲಿ ಕುಳಿತಿದ್ದು, ಘಟನೆ ನಡೆಯುವ ಕೆಲ ಕ್ಷಣದ ಹಿಂದೆಯಷ್ಟೇ ಹೊರಗಡೆ ಬಂದಿದ್ದು ಅಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.

ಬಲ್ನಾಡು ಸರ್ವೀಸ್ ಆಟೋ ರಿಕ್ಷಾಗಳು ನಗರ ಸಭಾ ಕಚೇರಿ ಮುಂಭಾಗದಲ್ಲಿ ಪಾರ್ಕಿಂಗ್‌ನಲ್ಲಿ ಪ್ರತಿದಿನ ನಿಲ್ಲುತ್ತಿರುತ್ತದೆ. ಆದಿತ್ಯವಾರವಾದ ಕಾರಣ ಎರಡೇ ರಿಕ್ಷಾಗಳು ಅಲ್ಲಿ ಪಾರ್ಕಿಂಗ್ ಮಾಡಿತ್ತು. ಉಳಿದ ದಿನಗಳಲ್ಲಿ ಇನ್ನಷ್ಟು ರಿಕ್ಷಾಗಳು ಘಟನೆ ನಡೆದ ಜಾಗದಲ್ಲಿ ಪಾರ್ಕಿಂಗ್ ಮಾಡುತ್ತಿದ್ದವು. ಅಲ್ಲದೆ ಸೋಮವಾರವಾದರೆ ಸಂತೆಯ ದಿನ ಸಾಕಷ್ಟು ಜನ ಜಂಗುಲಿಯಿಂದ ಕೂಡಿರುತ್ತಿದ್ದ ರಸ್ತೆಯಲ್ಲಿ ಸಂಭಾವ್ಯ ಅನಾಹುತವೊಂದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕುಸಿದ ಕಾಂಪೌಂಡ್ ಬಳಿ ನಗರ ಸಭೆಯಿಂದ ಇಂಗು ಗುಂಡಿಯೊಂದನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಕಟ್ಟಡದ ಮಳೆ ನೀರನ್ನು ಇಂಗಿಸಲಾಗುತ್ತಿತ್ತು. ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರು ಇಂಗು ಗುಂಡಿಯಲ್ಲಿ ಭರ್ತಿಯಾಗಿ ಮೇಲ್ಬಾಗದಿಂದ ನೀರು ಹೊರಬರುತ್ತಿದ್ದು ಕಾಂಪೌಂಡ್ ಕುಸಿಯಲು ಕಾರಣ ಎನ್ನಲಾಗುತ್ತಿದೆ.
ಉಪಾಧ್ಯಕ್ಷ ಬಾಲಚಂದ್ರ ಮರೀಲ್ ಹಾಗೂ ಸದಸ್ಯರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಪೌರಕಾರ್ಮಿಕರ ಮುಖಾಂತರ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ.