ಧರ್ಮದ ನೆಲೆವೀಡಾದ ತುಳುನಾಡಿನ ಮಣ್ಣು ಅನೇಕ ದೈವ ದೇವರುಗಳ ಕಾರಣಿಕತೆಯ ಬೀಡು.. ಇಲ್ಲಿನ ಒಂದೊಂದು ಕ್ಷೇತ್ರವೂ ಅದರದ್ದೇ ಆದ ಕಾರಣಿಕತೆ, ಮಹಿಮೆಯಿಂದ ನಾನಾ ಊರಿನ ಭಕ್ತರ ಆರಾಧ್ಯ ಕೇಂದ್ರಗಳಾಗಿವೆ. ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಮಂದಿರವೂ ವಿಶೇಷ ಕಾರಣಿಕತೆಯಿಂದ ಪ್ರಸಿದ್ಧಗೊಳ್ಳುತ್ತಿದೆ. ಕಷ್ಟ ಕಾರ್ಪಣ್ಯಗಳು ಬಂದಾಗ ಭಕ್ತಿಯಿಂದ ಭಜನಾ ಸೇವೆ ಹರಕೆ ಹೇಳಿಕೊಂಡರೆ ಸಂಕಷ್ಟಹರ ಸಿದ್ಧಿವಿನಾಯಕ ದೇವರು ವರಪ್ರಸಾದ ಕರುಣಿಸಿ ಕಷ್ಟ ಕಾರ್ಪಣ್ಯಗಳು ದೂರವಾದ, ಇಷ್ಟಾರ್ಥ ಸಿದ್ಧಿಸಿದ ನೂರಾರು ಉದಾಹರಣೆಗಳಿರುವ ಪರಮ ಪಾವನ ಪುಣ್ಯಕ್ಷೇತ್ರವಾಗಿ ಬೆಳಗುತ್ತಿದೆ. ಸುಮಾರು 24 ವರ್ಷಗಳ ಹಿಂದೆ ಧಾರ್ಮಿಕತೆಯ ಆಚರಣೆಯಡಿಯಲ್ಲಿ ಹಿಂದು ಸಮಾಜವನ್ನು ಒಗ್ಗೂಡಿಸುವ ಪ್ರಯತ್ನವಾಗಿ ಪ್ರಕೃತಿ ಮಾತೆಯ ಸೌಂದರ್ಯ ಒಡಲಲ್ಲಿ, ಬೆಟ್ಟದ ತುದಿಯಲ್ಲಿ ವಿಘ್ನವಿನಾಯಕನ ಸುಂದರ ಮಂದಿರ ನಿರ್ಮಾಣಗೊಂಡು ಇಂದು ಭಕ್ತ ಸಮೂಹಕ್ಕೆ ವಿಶೇಷ ಧ್ಯಾನಮಂದಿರವೂ, ಭಜಕರ ಭಜನಾ ಮಂದಿರವೂ ಆಗಿ ನಿರಂತರವಾಗಿ ಹಿಂದು ಸಮಾಜದ ಅಸ್ಮಿತೆಯನ್ನು ಉಳಿಸಿಕೊಳ್ಳುವಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿದೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಈ ಹಿಂದಿನ ಮಂದಿರ ಶಿಥಿಲಾವಸ್ಥೆಗೆ ತಲುಪಿದ ಕಾರಣ ದೈವಜ್ಞರ ಮುಖೇನ ಪ್ರಶ್ನಾಚಿಂತನೆ ನಡೆಸಿದಾಗ ʻದೇವಾಲಯದ ವಿಧಿʼಯಲ್ಲಿ ನೂತನ ಭಜನಾ ಮಂದಿರವನ್ನು ದೇವರು ಬಯಸಿದ್ದಾರೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಹಿಂದಿನ ಮಂದಿರವನ್ನು ಸಂಪೂರ್ಣ ಕೆಡಹಿ ನೂತನ ಭಜನಾ ಮಂದಿರವನ್ನು ನಿರ್ಮಿಸಲಾಗಿದೆ. ಇದೀಗ ಪುನರ್ ನಿರ್ಮಾಣಗೊಂಡ ಭಜನಾ ಮಂದಿರದ ಲೋಕಾರ್ಪಣೆ ಮತ್ತು ಶ್ರೀ ದೇವರ ಛಾಯಾ ಬಿಂಬ ಪ್ರತಿಷ್ಠಾ ಮಹೋತ್ಸವಕ್ಕೆ ಇಲ್ಲಿನ ಭಜಕರು ಸರ್ವ ಸಿದ್ಧತೆಯಲ್ಲಿದ್ದಾರೆ. 2025ನೇ ಮೇ 28 ರಿಂದ 30 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆ ಕಾರ್ಯಕ್ರಮವು ವೇ.ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ.
ಮೇ.28ರಂದು ಸಂಜೆ ವೈದಿಕರಿಗೆ ಪೂರ್ಣಕುಂಭ ಸ್ವಾಗತ, ಮಹಾಸುದರ್ಶನ ಹೋಮ, ಬಾಧಾ ಉಚ್ಛಾಟನೆ, ಶ್ರೀ ದುರ್ಗಾಪೂಜೆ ನಡೆಯಲಿದೆ. ರಾತ್ರಿ ʻಶ್ರೀ ವಿನಾಯಕ ಮಂಟಪʼ ವೇದಿಕೆ ಉದ್ಘಾಟನೆ ನಡೆಯಲಿದೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಸಭಾಧ್ಯಕ್ಷತೆ ವಹಿಸಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೇ.29ರಂದು ಬೆಳಿಗ್ಗೆ ಗಣಪತಿ ಹೋಮ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಸಿದ್ದಿವಿನಾಯಕ ದೇವರ ಛಾಯಾಬಿಂಬ ಮೆರವಣಿಗೆ ಹೊರಟು ಹಸಿರುವಾಣಿ ಮೆರವಣಿಗೆಯೊಂದಿಗೆ ರೆಂಜ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಮೆರವಣಿಗೆ ಸಾಗಿ ಮಂದಿರಕ್ಕೆ ಆಗಮಿಸಲಿದೆ. ಸಂಜೆ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಲಿವೆ. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಮತ್ತಿತರರು ಭಾಗವಹಿಸಲಿದ್ದಾರೆ. ಆ ದಿನ ಸಂಜೆ ಭಕ್ತಿ ಸಂಗೀತ, ರಾತ್ರಿ ಪಡ್ರೆ ಚಂದ್ರು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಮಕ್ಕಳ ಮೇಳದವರಿಂದ ʻಸುದರ್ಶನ ವಿಜಯ ಮತ್ತು ಅಗ್ರಪೂಜೆʼ ಯಕ್ಷಗಾನ ನಡೆಯಲಿದೆ.
ಮೇ.30ರಂದು ಬೆಳಿಗ್ಗೆ 9.07 ಗಂಟೆಯ ವೃಷಭ ಲಗ್ನದಲ್ಲಿ ಶ್ರೀ ಸಿದ್ಧಿವಿನಾಯಕ ದೇವರ ಛಾಯಾಬಿಂಬ ಪ್ರತಿಷ್ಠೆ ನಡೆಯಲಿದೆ. ಸಂಜೆ ಸಾರ್ವಜನಿಕ ಶ್ರೀ ಸಿದ್ಧಿವಿನಾಯಕ ವೃತ ಕಲ್ಪೋಕ್ತ ಪೂಜೆ, ರಂಗಪೂಜೆ ನೆರವೇರಲಿದೆ. ಬೆಳಿಗ್ಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತಿತರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಕೇಸರಿ ಕಲಾ ತಂಡ ಕೇಸರಿನಗರ ಮಿತ್ತಡ್ಕ ಸದಸ್ಯರು ಮತ್ತು ಅತಿಥಿ ಕಲಾವಿದರಿಂದ ʻಶ್ರೀ ದೇವಿ ಶಾಂಭವಿʼ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಆ ದಿನ ರಾತ್ರಿ ʻಶಿವದೂತೆ ಗುಳಿಗೆʼ ನಾಟಕ ತಂಡದವರ ಮತ್ತೊಂದು ಚಾರಿತ್ರಿಕ ನಾಟಕ ʻಛತ್ರಪತಿ ಶಿವಾಜಿʼ ನಾಟಕ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರಗಲಿದೆ ಎಂದು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ, ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಅಧ್ಯಕ್ಷ ಶ್ರೀಕುಮಾರ್ ಭಟ್ ಅಡ್ಯೆತ್ತಿಮಾರು ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.