ಪುತ್ತೂರು: ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ|ಜೆರಾಲ್ಡ್ ಡಿ’ಸೋಜರವರಿಗೆ ತಮ್ಮ ಗುರುದೀಕ್ಷೆ(ಯಾಜಕಾ ದೀಕ್ಷೆ)ಯ 40ರ ಸಂಭ್ರಮವಾಗಿದ್ದು, ಉಪ್ಪಿನಂಗಡಿ ಚರ್ಚ್ ಪಾಲನಾ ಸಮಿತಿ ಹಾಗೂ ಚರ್ಚ್ ಕ್ರೈಸ್ತ ಬಾಂಧವರಿಂದ ವಂ|ಜೆರಾಲ್ಡ್ ಡಿ’ಸೋಜರವರ ಗುರುದೀಕ್ಷೆಯ ಸಂಭ್ರಮದ ದಿವ್ಯ ಬಲಿಪೂಜೆ ಹಾಗೂ ಅಭಿನಂದನಾ ಕಾರ್ಯಕ್ರಮ ಮೇ 25 ರಂದು ಚರ್ಚ್‌ನಲ್ಲಿ ನೆರವೇರಿತು.

ಭಕ್ತಾಭಿಮಾನಿಗಳ ಆಶೀರ್ವಾದ ನನ್ನ ಮೇಲಿರಲಿ-ವಂ|ಜೆರಾಲ್ಡ್ ಡಿ’ಸೋಜ:
ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜರಗಿದ ಅಭಿನಂದನಾ ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಪರಿಷತ್ ಹಾಗೂ ಚರ್ಚ್ ಕ್ರೈಸ್ತ ಬಾಂಧವರಿಂದ 40 ವರ್ಷಗಳ ಗುರುದೀಕ್ಷೆಯ ಸಂಭ್ರಮವನ್ನು ಆಚರಿಸುತ್ತಿರುವ ವಂ|ಜೆರಾಲ್ಡ್ ಡಿ’ಸೋಜರವರಿಗೆ ಶಾಲು ಹೊದಿಸಿ, ಅಭಿನಂದಿಸಿ, ಸನ್ಮಾನಿಸಲಾಯಿತು. ಅಭಿನಂದನಾ ಸನ್ಮಾನ ಸ್ವೀಕರಿಸಿದ ವಂ|ಜೆರಾಲ್ಡ್ ಡಿ’ಸೋಜರವರು ಮಾತನಾಡಿ, ನನ್ನ ಈ ಸುದೀರ್ಘ ಧರ್ಮಗುರು ಪಯಣದಲ್ಲಿ ಆಶೀರ್ವದಿಸಿದ ದೇವರಿಗೆ ಸ್ತೋತ್ರ ಹಾಗೂ ಮಹಿಮೆಯನ್ನು ಸಲ್ಲಿಸುತ್ತೇನೆ. ಗುರುದೀಕ್ಷೆ ಪಡೆದ ಬಳಿಕ ನಾನು ಹಲವು ಚರ್ಚ್‌ಗಳಲ್ಲಿ ಸಹಾಯಕ ಧರ್ಮಗುರುವಾಗಿ, ಪ್ರಧಾನ ಧರ್ಮಗುರುವಾಗಿ, ಕಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್ ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ನನ್ನ ಈ ಪಯಣದಲ್ಲಿ ಭಕ್ತಾಭಿಮಾನಿಗಳು, ಹಿತೈಷಿಗಳು ನನ್ನನ್ನು ಹರಸಿರುತ್ತಾರೆ ಎಂದ ಅವರು ನಾನು ನನ್ನ ಜೀವಿತದಲ್ಲಿ ಹಲವಾರು ಬಾರಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ, ದೇವರು ನನ್ನನ್ನು ಉಳಿಸಿದ್ದಾರೆ. ಧಾರ್ಮಿಕ ಸೇವೆಯು ಕ್ರೈಸ್ತ ಪವಿತ್ರಸಭೆಯು ನನಗೆ ನೀಡಿದ ಪ್ರೀತಿಯ ಕಾಣಿಕೆಯಾಗಿದ್ದು ಮುಂದಿನ ನನ್ನ ಜೀವಿತದಲ್ಲಿ ಭಕ್ತಾಭಿಮಾನಿಗಳ ಆಶೀರ್ವಾದವನ್ನು ನಾನು ಸದಾ ಆಶಿಸುತ್ತಿದ್ದೇನೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ಆತ್ಮೀಯತೆ, ನಿಷ್ಕಳಂಕ ಮನಸ್ಸು, ಸರಳತೆ ಅವರಲ್ಲಿ ಮೈಗೂಡಿಸಿಕೊಂಡಿದೆ-ವಂ|ವಿನ್ಸೆಂಟ್ ಸಲ್ದಾನ್ಹಾ:
ಮಂಗಳೂರು ಕೊಡಿಯಾಲ್‌ಬೈಲ್ ಪ್ರೆಸ್‌ನಲ್ಲಿ ಮ್ಯಾನೇಜರ್ ಆಗಿರುವ ವಂ|ವಿನ್ಸೆಂಟ್ ವಿನೋದ್ ಸಲ್ದಾನ್ಹಾರವರು ಮಾತನಾಡಿ, 40 ವರ್ಷದ ಹಿಂದೆ ವಂ|ಜೆರಾಲ್ಡ್ ಡಿ’ಸೋಜರವರನ್ನು ಕ್ರೈಸ್ತ ಪವಿತ್ರಸಭೆಯಲ್ಲಿ ಓರ್ವ ಧರ್ಮಗುರುವಾಗಿ ನೇಮಿಸಲಾಯಿತು. ಕಳೆದ 40 ವರ್ಷಗಳಲ್ಲಿ ವಂ|ಜೆರಾಲ್ಡ್ ಡಿ’ಸೋಜರವರು ಕ್ರೈಸ್ತ ಪವಿತ್ರಸಭೆಯಲ್ಲಿ ಧರ್ಮಗುರುವಾಗಿ ಉತ್ತಮ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರಲ್ಲಿನ ದೂರದೃಷ್ಟಿತ್ವ, ಎಲ್ಲರನ್ನು ಆತ್ಮೀಯತೆಯಿಂದ ನೋಡುವ ಗುಣ, ನಿಷ್ಕಳಂಕ ಮನಸ್ಸು, ಸರಳತೆ ಇವೆಲ್ಲವೂ ಅವರಲ್ಲಿ ಮೈಗೂಡಿಸಿಕೊಂಡಿದೆ ಎಂದು ಹೇಳಿ ಅವರ ಮುಂದಿನ ಧಾರ್ಮಿಕ ಜೀವನಕ್ಕೆ ಶುಭ ಹಾರೈಸಿ, ವೈಯಕ್ತಿಕ ನೆಲೆಯಲ್ಲಿ ವಂ|ಜೆರಾಲ್ಡ್ ಡಿ’ಸೋಜರವರನ್ನು ಶಾಲು ಹೊದಿಸಿ ಗೌರವಿಸಿದರು.
ಪ್ರಾಯ ಆಗುವುದು ದೇಹಕ್ಕೆ, ಮನಸ್ಸಿಗೆ, ಚಿಂತನೆಗೆ ಅಲ್ಲ-ನವೀನ್ ಬ್ರ್ಯಾಗ್ಸ್:
ಚರ್ಚ್‌ನ 21 ಆಯೋಗಗಳ ಸಂಚಾಲಕ ನವೀನ್ ಬ್ರ್ಯಾಗ್ಸ್‌ರವರು ಚರ್ಚ್ ಕ್ರೈಸ್ತ ಬಾಂಧವರ ಪರವಾಗಿ ಮಾತನಾಡಿ, ಕೃಷಿ ಕುಟುಂಬದಿಂದ ಬಂದಂತಹ ವಂ|ಜೆರಾಲ್ಡ್ ಡಿ’ಸೋಜರವರು ಹಲವಾರು ಚರ್ಚ್‌ಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಅವರಿಗೆ ಪೂಜೆ ಸಲ್ಲಿಸುವುದು ಎಂದರೆ ಬಹಳ ಪ್ರೀತಿ ಜೊತೆಗೆ ಪೂಜಾ ಸಂದರ್ಭದಲ್ಲಿ ಅವರು ಬೈಬಲಿನ ವಾಕ್ಯದ ಮೇಲೆಯೇ ಪ್ರವಚನ ನುಡಿಯುವುದು ಅವರ ಹೆಗ್ಗಳಿಕೆ. ಪ್ರಾಯ ಆಗುವುದು ದೇಹಕ್ಕೆ ಆದರೆ ಮನಸ್ಸಿಗೆ ಮತ್ತು ಚಿಂತನೆಗೆ ಅಲ್ಲ ಎಂದು ವಂ|ಜೆರಾಲ್ಡ್‌ರವರು ಹೇಳಿದ್ದಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಚರ್ಚ್ ಶತಮಾನೋತ್ಸವವನ್ನು ಆಚರಿಸುತ್ತಿದ್ದು ಇದಕ್ಕೆ ಪೂರಕವಾಗಿ ಚರ್ಚ್ ಅಭಿವೃದ್ಧಿಯತ್ತ ವಂ|ಜೆರಾಲ್ಡ್‌ರವರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಹೇಳಿ ಅವರ ಹಾಗೂ ಅವರ ಸಹೋದರನ ಮುಂದಿನ ಧಾರ್ಮಿಕ ಸೇವೆಯು ಯಶಸ್ಸಿನತ್ತ ಮುಂದುವರೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಎಲ್ಲೆಲ್ಲಿ ಸೇವೆ:
ಅಜೆಕಾರ್ ಮಾರ್ಸೆಲ್ ಡಿ’ಸೋಜ ಹಾಗೂ ಎವ್ಲಿನ್ ಆಳ್ವ ದಂಪತಿ ಪುತ್ರರಾಗಿರುವ ವಂ|ಜೆರಾಲ್ಡ್ ಡಿ’ಸೋಜರವರು 1985, ಎಪ್ರಿಲ್ 16ರಂದು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದಲ್ಲಿ ಗುರುದೀಕ್ಷೆಯನ್ನು ಪಡೆದುಕೊಂಡಿದ್ದು ಅವರು ಆಗ್ರಾರ್(1985-87) ಚರ್ಚ್ನಲ್ಲಿ ಸಹಾಯಕ ಧರ್ಮಗುರುಗಳಾಗಿ ಧಾರ್ಮಿಕ ಸೇವೆಯನ್ನು ಆರಂಭಿಸಿದ್ದರು. ಬಳಿಕ ಬೆಳ್ಮಣ್ಣು(1987-88) ಚರ್ಚ್ನಲ್ಲಿ ಸಹಾಯಕ ಧರ್ಮಗುರುಗಳಾಗಿ, ಕಡಬ(1988-1995) ಚರ್ಚ್ ನಲ್ಲಿ ಪ್ರಧಾನ ಧರ್ಮಗುರುಗಳಾಗಿ, ತಾಕೋಡೆ(1995-2002) ಚರ್ಚ್ ನಲ್ಲಿ ಪ್ರಧಾನ ಧರ್ಮಗುರುಗಳಾಗಿ, ಬೆಳ್ತಂಗಡಿ(2002-2007) ಚರ್ಚ್ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಹಾಗೂ ಬೆಳ್ತಂಗಡಿ ವಲಯ ಚರ್ಚ್ಗಳ ಪ್ರಧಾನ ಧರ್ಮಗುರುಗಳಾಗಿ, ಪುತ್ತೂರು ಮಾಯಿದೆ ದೇವುಸ್ ಚರ್ಚ್(2007-2014) ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಹಾಗೂ ಪುತ್ತೂರು ವಲಯದ ಚರ್ಚ್ಗಳ ಪ್ರಧಾನ ಧರ್ಮಗುರುಗಳಾಗಿ, ಮಂಗಳೂರು ಕಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್(2014-2018) ಇದರ ಕಾರ್ಯದರ್ಶಿಯಾಗಿ, ಶಕ್ತಿನಗರ(2018-2024) ಚರ್ಚ್ನ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯಕ್ಕೆ ಆಗಮಿಸಿದ್ದರು.
ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯ ಸಂಚಾಲಕರೂ ಆಗಿರುವ ವಂ|ಜೆರಾಲ್ಡ್ ಡಿ’ಸೋಜರವರನ್ನು ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕ ಹಾಗೂ ಆಡಳಿತ ಸಿಬ್ಬಂದಿ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಚರ್ಚ್ ಗಾಯನ ಮಂಡಳಿಯ ನೇತೃತ್ವದಲ್ಲಿ 40ರ ಸಂಭ್ರಮವನ್ನು ಆಚರಿಸುತ್ತಿರುವ ವಂ|ಜೆರಾಲ್ಡ್ ಡಿ’ಸೋಜರವರ ಕುರಿತು ಅಭಿನಂದನಾ ಗೀತೆಯನ್ನಾಡಿದರು.
ಜೆರೋಸಾ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಗ್ರೇಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮ್ಯಾಕ್ಸಿಂ ಲೋಬೊ ಸ್ವಾಗತಿಸಿ, ಡಾ.ಸುಪ್ರೀತ್ ಲೋಬೊ ವಂದಿಸಿದರು. ಕಾರ್ಯದರ್ಶಿ ವಿಲ್‌ಫ್ರೆಡ್ ಡಿ’ಸೋಜ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಬೆಳ್ಳಿಪ್ಪಾಡಿ ವಾಳೆಯ ಪ್ರತಿನಿಧಿ ಸಿಲ್ವೆಸ್ತರ್ ವೇಗಸ್, ಸಂತ ವಿನ್ಸೆಂಟ್ ದೇ ಪಾವ್ಲ್ ಸಭಾದ ಅಧ್ಯಕ್ಷ ಪಾವ್ಲ್ ಪಿಂಟೊ, ಬಾರ್ಯ ವಾಳೆಯ ಪ್ರತಿನಿಧಿ ಮನೋಜ್ ಡಾಯಸ್, ಉಪ್ಪಿನಂಗಡಿ ವಾಳೆಯ ಪ್ರತಿನಿಧಿ ಫ್ಲೋರಾ ಲಸ್ರಾದೊ, ಬಿಳಿಯೂರು ವಾಳೆಯ ಪ್ರತಿನಿಧಿ ಪಾವ್ಲಿನ್ ನೊರೊನ್ಹಾ, ಎನ್ಮಾಡಿ ವಾಳೆಯ ಪ್ರತಿನಿಧಿ ಗ್ರೇಸಿ ಲೋಬೊರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಧರ್ಮಭಗಿನಿಯರು, ವಂ|ಜೆರಾಲ್ಡ್ ಡಿ’ಸೋಜರವರ ಹುಟ್ಟೂರಾದ ಅಜೆಕಾರ್ ಚರ್ಚ್‌ನ ಧರ್ಮಗುರುಗಳು ಹಾಗೂ ಕುಟುಂಬಿಕರು, ಹಿತೈಷಿಗಳು ಉಪಸ್ಥಿತರಿದ್ದರು. ಉಪ್ಪಿನಂಗಡಿ ಚರ್ಚ್‌ನ ಧರ್ಮಗುರು ಪ್ರಸ್ತುತ ಮೂಡುಬೆಳ್ಳೆ ರೀಜ್ಹನಲ್ ಸೆಮಿನರಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ವಂ|ಭೊನಿಪಾಸ್ ಪಿಂಟೊರವರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಭೋಜನ ವ್ಯವಸ್ಥೆ ನೆರವೇರಿತು.
ದಿವ್ಯ ಬಲಿಪೂಜೆ..
ಅಭಿನಂದನಾ ಕಾರ್ಯಕ್ರಮದ ಮೊದಲು ಚರ್ಚ್‌ನಲ್ಲಿ ಸುದೀರ್ಘ 40 ವರ್ಷಗಳ ಯಾಜಕಾ ದೀಕ್ಷೆಯ ಪಯಣದಲ್ಲಿ ಆಶೀರ್ವದಿಸಿದ ದೇವರಿಗೆ ಯಾಜಕಾ ದೀಕ್ಷೆಯ ಸಂಭ್ರಮವನ್ನು ಆಚರಿಸುತ್ತಿರುವ ವಂ|ಜೆರಾಲ್ಡ್ ಡಿ’ಸೋಜರವರು ಕೃತಜ್ಞತಾ ಬಲಿಪೂಜೆಯನ್ನು ಅರ್ಪಿಸಿದರು. ಈ ದಿವ್ಯ ಬಲಿಪೂಜೆ ಸಂದರ್ಭದಲ್ಲಿ ಧರ್ಮಗುರುಗಳಾದ ವಂ|ಅಬೆಲ್ ಲೋಬೊ, ವಂ|ವಿನ್ಸೆಂಟ್ ಸಲ್ದಾನ್ಹಾ, ವಂ|ವಿನ್ಸೆಂಟ್ ಸಿಕ್ವೇರಾ, ವಂ|ಅಶೋಕ್ ರಾಯನ್ ಕ್ರಾಸ್ತಾ, ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾ, ವಂ|ಭೊನಿಪಾಸ್ ಪಿಂಟೊರವರು ದಿವ್ಯ ಬಲಿಪೂಜೆಯಲ್ಲಿ ಭಕ್ತಾಧಿಗಳೊಂದಿಗೆ ಪಾಲ್ಗೊಂಡರು.
ಕೇಕ್/ಸನ್ಮಾನ..
ವಂ|ಜೆರಾಲ್ಡ್ ಡಿ’ಸೋಜರವರ ಗುರುದೀಕ್ಷೆಯ 40 ರ ಸಂಭ್ರಮದ ಸವಿನೆನಪಿಗೆ ವಂ|ಜೆರಾಲ್ಡ್ ಡಿ’ಸೋಜ ಹಾಗೂ ಅವರ ಸಹೋದರ ತನ್ನ ಗುರುದೀಕ್ಷೆಯ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ವಂ|ರೊನಾಲ್ಡ್ ಪ್ರಕಾಶ್ ಡಿ’ಸೋಜರವರು ಜೊತೆಗೂಡಿ ಸಿಹಿಯ ಪ್ರತೀಕವಾಗಿರುವ ಕೇಕ್ ಅನ್ನು ಕತ್ತರಿಸಿ ಬಳಿಕ ಕೇಕ್ ಅನ್ನು ಹಾಜರಿದ್ದವರಿಗೆ ಹಂಚಿ ಪರಸ್ಪರ ಸಂತೋಷವನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಗುರುದೀಕ್ಷೆಯ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ವಂ|ಜೆರಾಲ್ಡ್ ಡಿ’ಸೋಜರವರ ಸಹೋದರ ಮೂಡಬಿದ್ರೆ ಗಂಟಾಲ್‌ಕಟ್ಟೆ ಚರ್ಚ್‌ನಲ್ಲಿ ಧರ್ಮಗುರುವಾಗಿರುವ ವಂ|ರೊನಾಲ್ಡ್ ಡಿ’ಸೋಜರವರನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ..
ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲಾ ಇತಿಹಾಸದಲ್ಲಿ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 622 ಅಂಕ ಪಡೆದು ರಾಜ್ಯಕ್ಕೆ 4ನೇ ರ‍್ಯಾಂಕ್ ಹಾಗೂ ಪುತ್ತೂರು ತಾಲೂಕಿನಲ್ಲಿ 3ನೇ ಸ್ಥಾನ ಪಡೆದಿರುವ ಕಡಬ ತಾಲೂಕಿನ ಕೊಲ ನಿವಾಸಿ ಮಹಮ್ಮದ್ ಹುಸೈನ್ ಹಾಗೂ ಸಪ್ನತ್ ಬಾನು ದಂಪತಿ ಪುತ್ರಿಯಾಗಿರುವ ಆಸಿಯಾ ಶಹಮಾರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಮೀರಾ ರೊಡ್ರಿಗಸ್‌ರವರು ರ‍್ಯಾಂಕ್ ವಿಜೇತರ ಬಗ್ಗೆ ಮಾಹಿತಿ ನೀಡಿದರು.