ಕೂಳೂರು ಘಟಕ ಚಾಂಪಿಯನ್, ಸುರತ್ಕಲ್ ಘಟಕ ರನ್ನರ್ಸ್

ಪುತ್ತೂರು: ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯವಾಕ್ಯದಡಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ, ಯುವವಾಹಿನಿ ಪುತ್ತೂರು ಘಟಕದ ಆತಿಥ್ಯದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಸಹಯೋಗದಲ್ಲಿ ಮೇ.25 ರಂದು ನೆಹರುನಗರ ಸುದಾನ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆದ ಅಂತರ್ ಘಟಕದ ಜಾನಪದ ಸಾಂಸ್ಕೃತಿಕ ವೈಭವ “ಡೆನ್ನಾನ ಡೆನ್ನನ” ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಸ್ಪರ್ಧೆಯಲ್ಲಿ ಕೂಳೂರು ಘಟಕವು 2025ರ ಚಾಂಪಿಯನ್ ಎನಿಸಿಕೊಂಡು ರೂ.25 ಸಾವಿರ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.
ಸುರತ್ಕಲ್ ಘಟಕವು ರನ್ನರ್ಸ್ ಪ್ರಶಸ್ತಿ ಪ್ರಶಸ್ತಿಯೊಂದಿಗೆ ರೂ.20 ಸಾವಿರ ನಗದು ಹಾಗೂ ಟ್ರೋಫಿ, ಬೆಳ್ತಂಗಡಿ ಘಟಕವು ತೃತೀಯ ಸ್ಥಾನಿಯಾಗಿ ರೂ.15 ಸಾವಿರ ನಗದು ಹಾಗೂ ಟ್ರೋಫಿ, ಪಣಂಬೂರು ಕುಳಾಯಿ ಘಟಕವು ಚತುರ್ಥ ಸ್ಥಾನಿಯಾಗಿ ರೂ.10 ಸಾವಿರ ನಗದು ಹಾಗೂ ಟ್ರೋಫಿ, ಪಂಚಮ ಸ್ಥಾನಿಯಾಗಿ ಬಜ್ಪೆ ಘಟಕವು ರೂ.7 ಸಾವಿರ ನಗದು ಹಾಗೂ ಟ್ರೋಫಿ ಪಡೆಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಇತರ ತಂಡಗಳಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಉತ್ತಮ ಕಾರ್ಯಕ್ರಮ ನಿರೂಪಣೆ, ಉತ್ತಮ ನಟ, ಉತ್ತಮ ನಟಿ, ಉತ್ತಮ ಡ್ಯಾನ್ಸ್, ಉತ್ತಮ ಪ್ರಹಸನ(ಒಟ್ಟು 10 ನಿಮಿಷದ ಸ್ಪರ್ಧೆ) ಹೀಗೆ ಪ್ರತ್ಯೇಕ ಬಹುಮಾನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಪುತ್ತೂರಿನ ಯುವವಾಹಿನಿ ಸಂಘಟನೆ ಅದ್ಭುತವಾಗಿ ಕಾರ್ಯನಿರ್ವಹಿಸಿದೆ-ಲೋಕೇಶ್ ಕೋಟ್ಯಾನ್:
ಅಧ್ಯಕ್ಷತೆ ವಹಿಸಿದ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಮಾತನಾಡಿ, ಡೆನ್ನಾನ ಡೆನ್ನನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಕಾರ್ಯಕ್ರಮದ ಸಂಚಾಲಕ ಪ್ರಭಾಕರ್ ಸಾಲಿಯಾನ್, ಯುವವಾಹಿನಿ ಘಟಕದ ಅಧ್ಯಕ್ಷ ಅಣ್ಣಿ ಪೂಜಾರಿರವರ ತಂಡವನ್ನು ಶ್ಲಾಘಿಸಬೇಕಿದೆ. ಯುವವಾಹಿನಿ ಸಂಘಟನೆಯು ವಿದ್ಯೆ, ಉದ್ಯೋಗ, ಸಂಪರ್ಕದಡಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿರುವ ಕಾರಣ ನಮಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಕಾರ್ಯಕ್ರಮವನ್ನು ಮಾಡುವುದು ಬಿಡಿ ಅದನ್ನು ಯಶಸ್ವಿಗೊಳಿಸುವುದು ಇಂದಿನ ದಿನಗಳಲ್ಲಿ ಕಷ್ಟ. ಆದರೂ ಪುತ್ತೂರಿನ ಯುವವಾಹಿನಿ ಸಂಘಟನೆ ಅದ್ಭುತವಾಗಿ, ಅಚ್ಚುಕಟ್ಟಾಗಿ ಜವಾಬ್ದಾರಿಯೊಂದಿಗೆ ಮಾಡಿದೆ ಎಂದರು.
ಸ್ಮರಣಿಕೆ ನೀಡಿ ಗೌರವ:
ಸಾಮಾಜಿಕ ಜಾಲತಾಣದ ನಿರ್ದೇಶಕ ಉದಯಕುಮಾರ್ ಕೋಲಾಡಿ, ಆರ್ಥಿಕ ಸಮಿತಿ ಸಂಚಾಲಕ ಹರೀಶ್ ಶಾಂತಿ, ಪ್ರಚಾರ ಸಮಿತಿ ಸಂಚಾಲಕ ಅನೂಪ್ ಕುಮಾರ್, ಆಹಾರ ಸಮಿತಿ ನಿರ್ದೇಶಕ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಅಲಂಕಾರ ಸಮಿತಿ ನಿರ್ದೇಶಕ ಅವಿನಾಶ್ ಹಾರಾಡಿ, ನೋಂದಾವಣೆ ಸಮಿತಿ ನಿರ್ದೇಶಕ ಗಣೇಶ್ ಬೊಳ್ಳಗುಡ್ಡೆ, ಘಟಕದ ಉಸ್ತುವಾರಿ ಸಮಿತಿ ಸಂಚಾಲಕರಾದ ಸಮಿತ್ ಪರ್ಪುಂಜ, ಶಿಸ್ತು ಸಮಿತಿ ಸಂಚಾಲಕರಾದ ಉಮೇಶ್ ಬಾಯಾರ್, ಜಯರಾಮ ಬಿ.ಎನ್, ಡೆನ್ನಾನ ಡೆನ್ನನ ಸಾಂಸ್ಕೃತಿಕ ಸ್ಪರ್ಧೆಯ ಟೈಟಲ್ ಸಾಂಗ್ ಅನ್ನು ತುಳುವಿಗೆ ಅನುವಾದಿಸಿದ ಹರೀಶ್ ಕುಮಾರ್ ಸಸಿಹಿತ್ಲು, ಹಾಡನ್ನು ಹಾಡಿದ ಗಾಯಕಿ ಹನಿ ಅಮೀನ್ ಮೂಡಬಿದ್ರೆ, ಲೋಗೋ ರಚಿಸಿದ ಅನೂಪ್ ಕುಮಾರ್ ಬೆದ್ರಾಳ ಸಹಿತ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಗುರುತಿಸುವಿಕೆ/ಅದೃಷ್ಟ ಕೂಪನ್ ಡ್ರಾ:
ತೀರ್ಪುಗಾರರಾಗಿ ಸಹಕರಿಸಿದ ಕಾಮಿಡಿ ಕಿಲಾಡಿಗಳು ಇದರ ಮೆಂಟರ್ ವಿಜಯ ಶೆಟ್ಟಿ, ಪತ್ರಕರ್ತ ಹಾಗೂ ನಟ ಜಿತೇಂದ್ರ ಕುಂದೇಶ್ವರ, ಯುವ ಕಲಾವಿದೆ ಶೈಲಶ್ರೀರವರುಗಳನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳ ಅದೃಷ್ಟ ಕೂಪನ್ ಡ್ರಾವನ್ನು ಪುಟಾಣಿ ಮಕ್ಕಳು ನೆರವೇರಿಸಿಕೊಟ್ಟರು.
ವಿವಿಧ ಗೌರವ ಪ್ರಶಸ್ತಿಗಳು:
ಕಾರ್ಯಕ್ರಮದ ಆರಂಭದಲ್ಲಿ ಗಂಟೆ 10.30 ಒಳಗೆ ಯಾರು ಅತ್ಯಧಿಕ ಸಹಿ ನೋಂದಣಿ ಮಾಡುತ್ತಾರೆ ಎಂಬ ಸ್ಪರ್ಧೆಯಲ್ಲಿ ಪಣಂಬೂರು ಕುಳಾಯಿ ಪ್ರಥಮ, ಕೊಲ್ಯ ಘಟಕ ದ್ವಿತೀಯ, ಬಜ್ಪೆ ಘಟಕ ತೃತೀಯ ಪ್ರಶಸ್ತಿ ಹಾಗೂ ನಗದನ್ನು ಪಡೆಯಿತು. ಘಟಕದ 51 ಗ್ರಾಮ ಸಮಿತಿಗಳಲ್ಲಿ ನರಿಮೊಗರು ಗ್ರಾಮ ಸಮಿತಿ ಪ್ರಶಸ್ತಿಗೆ ಭಾಜನವಾಯಿತು.
ಕೊಲ್ಯ ಘಟಕದ ಸುಧಾರವರು ಕಾರ್ಯಕ್ರಮದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅಣ್ಣಿ ಪೂಜಾರಿ, ಕಾರ್ಯದರ್ಶಿ ಶರತ್ ಕೈಪಂಗದೋಳ, ಸಾಂಸ್ಕೃತಿಕ ನಿರ್ದೇಶಕ ಮೋಹನ್ ಶಿಬರರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಾಂಸ್ಕೃತಿಕ ನಿರ್ದೇಶಕ ಸುಶಾಂತ್ ಕರ್ಕೇರಾರವರು ಸ್ವಾಗತಿಸಿ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಬಾಬು ಪೂಜಾರಿ ಇದ್ಪಾಡಿ ವಂದಿಸಿದರು. ಕಾರ್ಯಕ್ರಮದ ಸಂಚಾಲಕ ಪ್ರಭಾಕರ ಸಾಲಿಯಾನ್ ಬಾಕಿಲಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಿಲ್ ಅಂಚನ್, ಸುಂದರ ಪೂಜಾರಿ, ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು, ಶೈಲೇಶ್ ಸಸಿಹಿತ್ಲು, ಭಾಸ್ಕರ್ ಕೂಳೂರು, ದೀಕ್ಷಿತ್, ಪರಮೇಶ್ವರ್ ಪೂಜಾರಿರವರು ಶಾಲು ಹೊದಿಸಿ, ಹೂ ನೀಡಿ ಸ್ವಾಗತಿಸಿದರು. ವಿಜೇತರ ಪಟ್ಟಿಯನ್ನು ಸಾಮಾಜಿಕ ಜಾಲತಾಣದ ನಿರ್ದೇಶಕ ಉದಯಕುಮಾರ್ ಕೋಲಾಡಿರವರು ಓದಿದರು. ಸುಧಾಕರ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಿದ್ದಲ್ಲಿ ಸಂಸ್ಕಾರ ಬೆಳೆಯುತ್ತದೆ..
ಇಲ್ಲಿನ ಕಲಾವಿದರು ತೋರ್ಪಡಿಸಿದ ಅಭಿನಯ ನಾವೇನು ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿದ್ದೇವೆ ಎಂಬ ಭಾವನೆಯಾಗಿತ್ತು. ಎಲ್ಲರದ್ದು ಅದ್ಭುತ ಅಭಿನಯ. ಈ ಪ್ರತಿಭೆಗಳಿಗೆ ಪ್ರೋತ್ಸಾಹಿಸಿದರೆ ನಾಲ್ಕು ಕಾಂತಾರ ಫಿಲ್ಮ್ ಅನ್ನು ತೆಗೆಯಬಹುದು. ಹೇಗೆ ಗಡಿ ಪ್ರದೇಶದಲ್ಲಿ ಸೈನಿಕರು ನಮ್ಮನ್ನು ಕಾಪಾಡುತ್ತಾರೋ ಹಾಗೇಯೇ ನಮ್ಮ ಜೀವನದಲ್ಲಿ ಸಂಸ್ಕಾರ ಬೆಳೆಯಬೇಕಾದರೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸಂಸ್ಕಾರ ಬೆಳೆಯುವುದರೊಂದಿಗೆ ದೇಶ ಸುಭೀಕ್ಷೆಯಾಗುತ್ತದೆ.
-ಜಿತೇಂದ್ರ ಕುಂದೇಶ್ವರ, ಹಿರಿಯ ಪತ್ರಕರ್ತರು ಹಾಗೂ ಚಿತ್ರನಟ
*ಪ್ರಥಮ-ಕೂಳೂರು ಘಟಕ
*ದ್ವಿತೀಯ-ಸುರತ್ಕಲ್ ಘಟಕ
*ತೃತೀಯ-ಬೆಳ್ತಂಗಡಿ ಘಟಕ
*ಚತುರ್ಥ-ಪಣಂಬೂರು ಕುಳಾಯಿ ಘಟಕ
*ಪಂಚಮ-ಬಜ್ಪೆ ಘಟಕ