ಮಳೆಗೆ ವಿದ್ಯುತ್ ವ್ಯತ್ಯಯ; ಮೆಸ್ಕಾಂ ಇಲಾಖೆ ಸಭೆ

0

ಸಮರೋಪಾದಿಯಲ್ಲಿ ಕೆಲಸ ಮಾಡಿ ಸಮಸ್ಯೆಯನ್ನು ಪರಿಹರಿಸಿ- ಶಾಸಕ ಅಶೋಕ್‌ ರೈ
ನಾವು ಇನ್ನಷ್ಟು ಕಾರ್ಯಪ್ರವೃತ್ತರಾಗಲಿದ್ದೇವೆ-ರಾಮಚಂದ್ರ

ಪುತ್ತೂರು: ಈ ಬಾರಿ ಮೇ ತಿಂಗಳಲ್ಲೇ ಮಳೆ ಪ್ರಾರಂಭವಾಗಿದೆ, ಅದರಲ್ಲೂ ವಿಪರೀತ ಮಳೆಯಾಗುತ್ತಿದೆ, ಅಲ್ಲಲ್ಲಿ ಗಾಳಿಮಳೆಗೆ ಮರಗಳು ಮುರಿದು ಬೀಳುತ್ತಿರುವ ಕಾರಣಕ್ಕೆ ಕರೆಂಟ್ ಕಂಬಗಳು ಹಾನಿಗೊಳಗಾಗಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಮುರಿದು ಬಿದ್ದ ಕಂಬಗಳ ಮರುಜೋಡನೆ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದ್ದರೂ ಕೆಲವೊಂದು ಗ್ರಾಮಗಳಲ್ಲಿ ಇನ್ನೂ ವಿದ್ಯುತ್ ಸಮಸ್ಯೆ ಪರಿಹಾರವಾಗಿಲ್ಲ ಈ ನಿಟ್ಟಿನಲ್ಲಿ ಶಾಸಕ ಅಶೋಕ್ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಸ್ಕಾಂ ಇ ಇ ಮತ್ತು ಜೆ ಇ ಗಳ ಸಭೆ ಕರೆದು ಕೆಲವೊಂದು ಖಡಕ್ ಸೂಚನೆಗಳನ್ನು ನೀಡಿದ್ದಾರೆ.

ಕಂಬ ಮುರಿದು ಬಿದ್ದರೆ 24 ಗಂಟೆಯೊಳಗೆ ಮರುಜೋಡಿಸಿ
ಮಳೆಗಾಲದಲ್ಲಿ ಗಾಳಿ, ಮಳೆ ಸಹಜ ಆದರೆ ಈ ಬಾರಿ ಕಳೆದ ನಾಲ್ಕು ದಿನಗಳ ಹಿಂದೆ ಆರಂಭವಾದ ಮಳೆ ಇನ್ನೂ ನಿಂತಿಲ್ಲ. ಅಲ್ಲಲ್ಲಿ ಮುರಿದು ಬಿದ್ದ ವಿದ್ಯುತ್ ಕಂಬಗಳನ್ನು 24 ಗಂಟೆಯೊಳಗೆ ದುರಸ್ಥಿ ಮಾಡಬೇಕು. ಎಲ್ಲೆಲ್ಲಿ ಲೈನ್ ಸಮಸ್ಯೆ ಇದೆಯೋ ಅದನ್ನು ದುರಸ್ಥಿ ಮಾಡಬೇಕು. ಕಳೆದ ನಾಲ್ಕು ದಿನಗಳಿಂದ ಎಲ್ಲೆಲ್ಲಿ ಸಮಸ್ಯೆಯಾಗಿದೆಯೋ ಅದನ್ನು ಆದಷ್ಟು ಬೇಗ ಸರಿಪಡಿಸಬೇಕು. ಜನರಿಗೆ ತೊಂದರೆಯಾಗದಂತೆ ಮೆಸ್ಕಾಂ ಕಾರ್ಯಪ್ರವೃತ್ತರಾಗಬೇಕು. ಗಾಳಿ ಇದೆ, ಮಳೆ ಇದೆ ಎಂಬ ಉತ್ತರ ನನಗೆ ಬೇಡ. ಮಳೆಗೆ ಏನೇ ಅನಾಹುತವಾದರೂ ಅದನ್ನು ದುರಸ್ಥಿ ಮಾಡಿ ಜನರಿಗೆ ವಿದ್ಯುತ್ ಕೊಡಬೇಕಾಗಿದ್ದು ಇಲಾಖೆಯವರ ಕರ್ತವ್ಯ. ಕಳೆದ ನಾಲ್ಕು ದಿನಗಳಿಂದ ನನಗೆ ಪದೇ ಪದೇ ಕರೆಗಳು ಬರುತ್ತಿದೆ. ಸಮಸ್ಯೆ ಹೇಳುವುದು ಬೇಡ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಮೆಸ್ಕಾಂ ಇಇ ರಾಮಚಂದ್ರ ಅವರಿಗೆ ಶಾಸಕರು ಸೂಚನೆ ನೀಡಿದರು.

ದುರಸ್ಥಿ ಮಾಡಿದರೂ ಟ್ರಿಪ್ ಆಗುತ್ತಿದೆ
ಈ ಬಗ್ಗೆ ಮಾಹಿತಿ ನೀಡಿದ ಜೆ ಇ ಗಳು ನಾವು ನಮ್ಮ ಕೆಲಸವನ್ನು ಮಾಡಿದ್ದೇವೆ, ಮುರಿದು ಬಿದ್ದ ಕಂಬಗಳನ್ನು ಮರು ಜೋಡನೆ ಮಾಡಿದ್ದೇವೆ ವಿದ್ಯುತ್ ಚಾರ್ಜ್ ಮಾಡುವಾಗ ಟ್ರಿಪ್ ಆಗುತ್ತಿದೆ. ಭಾರೀ ಮಳೆ ಇರುವ ಕಾರಣ ಕೆಲವು ಕಡೆಗಳಲ್ಲಿ ಮರದ ಗೆಲ್ಲುಗಳು ವಿದ್ಯುತ್ ತಂತಿಗೆ ತಾಗುವುದೇ ಇದಕ್ಕೆ ಕಾರಣ. ನಾವು ಮತ್ತು ಸಿಬಂದಿಗಳು ಈ ಬಗ್ಗೆ ಕಠಿಣ ಪರಿಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇವೆ. ಒಂದು ಕಡೆ ದುರಸ್ಥಿಯಾಗುವಷ್ಟರಲ್ಲಿ ಇನ್ನೊಂದು ಭಾಗದಲ್ಲಿ ಗಾಳಿಗೆ ಕಂಬಗಳ ಮೇಲೆ ಮರ ಬಿದ್ದು ಮತ್ತೆ ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕೆ ಕೆಲವು ಕಡೆಗಳಲ್ಲಿ ಕಳೆದ ಮೂರು ದಿನಗಳಿಂದ ಸಮಸ್ಯೆಯಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

ನನ್ನಿಂದ ಏನಾಗಬೇಕು ಹೇಳಿ
ಮೆಸ್ಕಾಂ ಗೆ ನನ್ನಿಂದ ಏನು ಆಗಬೇಕು ಅದನ್ನು ಹೇಳಬೇಕು. ಕಾರ್ಮಿಕರ ಕೊರತೆ ಇದೆಯೇ? ವಾಹನದ ಕೊರತೆ, ಉಪಕರಣಗಳ ಕೊರತೆ ಇದ್ದರೆ ಹೇಳಿ ತಕ್ಷಣ ವ್ಯವಸ್ಥೆ ಮಾಡುತ್ತೇನೆ. ಏನೇ ಸಮಸ್ಯೆ ಇದ್ದರೂ ಅದನ್ನು ಹೇಳದೆ ಮುಚ್ಚಿಡಬೇಡಿ. ನಮಗೆ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಕರೆಂಟ್ ಇಲ್ಲದೇ ಇದ್ದರೆ ಜನ ಕುಡಿಯುವ ನೀರಿಗೂ ಹಾಹಾಕಾರ ಪಡುತ್ತಾರೆ. ಮೊಬೈಲ್ ಸ್ವಿಚಾಫ್ ಆಗುತ್ತದೆ. ಕರೆಂಟಿಲ್ಲದೇ ಇದ್ದರೆ ಜನರು ಏನೂ ಮಾಡುವಂತಿಲ್ಲ ಎಂಬ ವಿಚಾರ ನಿಮಗೆ ಗೊತ್ತಿದೆ. ಸಮರೋಪಾದಿಯಲ್ಲಿ ಕೆಲಸ ಮಾಡಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿದರು.

ವಿದ್ಯುತ್ ಗುತ್ತಿಗೆದಾರರನ್ನು ಬಳಸಿಕೊಳ್ಳಿ
ಈ ತುರ್ತು ಸಂದರ್ಭದಲ್ಲಿ ವಿದ್ಯುತ್ ಗುತ್ತಿಗೆದಾರರನ್ನು ಬಳಸಿಕೊಂಡು ಒಟ್ಟಾಗಿ ಕೆಲಸ ಮಾಡಿ ಸಮಸ್ಯೆಯನ್ನು ಪರಿಹರಿಸಬೇಕು. ಇನ್ನೂ ವಾರಗಳ ಕಾಲ ಮಳೆ ಬರಲಿದೆ ಎಂಬ ಮಾಹಿತಿಯೂ ಇದೆ. ಈ ಅನಿರೀಕ್ಷಿತ ಮಳೆಯಿಂದಾದ ಸಮಸ್ಯೆಯನ್ನು ಬಗೆಹರಿಸಲು ಮೆಸ್ಕಾಂ ಗೆ ಗುತ್ತಿಗೆದಾರರು ಕೈಜೋಡಿಸಬೇಕು ಎಂದು ಶಾಸಕರು ಮನವಿ ಮಾಡಿದರು.

ಜನರು ಸಹಕರಿಸಿ: ಶಾಸಕರ ಮನವಿ
ಅಕಾಲಿಕ ಭಾರೀ ಮಳೆಯಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾರಣ ಪುತ್ತೂರು ನಗರದ ಸೂತ್ರಬೆಟ್ಟು, ಕೆಯ್ಯೂರು ಗ್ರಾಮದ ಕಟ್ಟತ್ತಾರು, ಈಶ್ವರಮಂಗಲ, ಗಾಳಿಮುಖ, ಕೊಳ್ತಿಗೆ, ಪುತ್ತೂರು ನಗರದ ಜಿಡೆಕಲ್ಲು, ಜೈನರ ಗುರಿ, ವಿಟ್ಲದ ಅಳಿಕೆ, ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು, ಪಂಜಳ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಸಮಸ್ಯೆಯನ್ನು ಪರಿಹರಿಸುವಂತೆ ಸೂಚನೆಯನ್ನು ನೀಡಿದ್ದೇನೆ. ಇಲಾಖೆಯೊಂದಿಗೆ ಜನರು ಸಹಕಾರವನ್ನು ನೀಡಬೇಕು. ಹೆಚ್ಚುವರಿ ಕಾರ್ಮಿಕರನ್ನು ಕಳುಹಿಸಿಕೊಡುವಂತೆ ಮೆಸ್ಕಾಂ ಗೆ ಸೂಚನೆಯನ್ನು ನೀಡಿದ್ದೇನೆ.
ಅಶೋಕ್ ರೈ ಶಾಸಕರು ಪುತ್ತೂರು

ಪ್ರಥಮ ಮಳೆಗೆ ವಿದ್ಯುತ್ ಸಮಸ್ಯೆ ವಿಪರೀತವಾಗಿರುತ್ತದೆ. ಅಲ್ಲಲ್ಲಿ ಕಂಬಗಳು ಮುರಿದು ಬಿದ್ದ ಕಾರಣ ದೊಡ್ಡ ಸಮಸ್ಯೆಯಾಗಿದೆ. ಎರಡು ದಿನದ ಮಳೆಗೆ 179 ವಿದ್ಯುತ್ ಕಂಬಗಳು ಮುರಿದಿದೆ. ದಿನದ 24 ಗಂಟೆ ನಮ್ಮ ಸಿಬಂದಿಗಳು ದುರಸ್ಥಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಜನರ ಸಮಸ್ಯೆ ಬಗ್ಗೆ ನಮಗೆ ಅರಿವಿದೆ ಆದರೆ ಒಂದು ಕಡೆ ದುರಸ್ಥಿ ಮಾಡಿ ಮುಗಿಸುವಷ್ಟರಲ್ಲಿ ಇನ್ನೊಂದು ಕಡೆ ಸಮಸ್ಯೆ ಉದ್ಭವವಾಗುತ್ತದೆ ಈ ಕಾರಣಕ್ಕೆ ಕೆಲವು ಕಡೆ ಮೂರು ದಿನಗಳಿಂದ ವಿದ್ಯುತ್ ಸಮಸ್ಯೆಯಾಗಿದೆ. ಶಾಸಕರ ಸೂಚನೆಯಂತೆ ನಾವು ಇನ್ನಷ್ಟು ಕಾರ್ಯಪ್ರವೃತ್ತರಾಗಲಿದ್ದೇವೆ
ರಾಮಚಂದ್ರ ಮೆಸ್ಕಾಂ ಕಾರ್ಯವಾಹಕ ಇಂಜನಿಯರ್, ಪುತ್ತೂರು

LEAVE A REPLY

Please enter your comment!
Please enter your name here