ಪುತ್ತೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಕರ್ನೂರಿನಲ್ಲಿ ಮನೆಯೊಂದರ ಛಾವಣಿಯ ಮೇಲೆ ಅಡಿಕೆ ಮರ ಬಿದ್ದು ಹಾನಿಯಾಗಿದ್ದು, ಈ ಬಗ್ಗೆ ಪರಿಹಾರ ಕೋರಿ ಪುತ್ತೂರು ತಹಶೀಲ್ದಾರ್‌ರವರಿಗೆ ಮನವಿ ನೀಡಲಾಗಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಗೋಳಿದಡಿ ಚೀಚಗದ್ದೆ ಎಂಬಲ್ಲಿ ವಾಸವಿರುವ ಯೂಸುಫ್ ಕೆ.ಎಂ.ರವರ ಮನೆಯ ಛಾವಣಿಗೆ ಹಾನಿಯಾಗಿದೆ. ಮನೆಗೆ ಹಾನಿಯಾದ ಬಗ್ಗೆ ಯೂಸುಫ್ ಕೆ.ಎಂ.ರವರು ನೆಟ್ಟಣಿಗೆ ಮುಡ್ನೂರು ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಪುತ್ತೂರು ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿ ಮೇ.25ರಂದು ಸುರಿದ ಭೀಕರ ಗಾಳಿ ಮಳೆಗೆ ನನ್ನ 4 ಕೋಣೆಗಳುಳ್ಳ ಮನೆಯ ಛಾವಣಿಯ ಮೇಲೆ ಅಡಿಕೆ ಮರವೊಂದು ಬಿದ್ದು ಹಂಚು, ಪಕ್ಕಾಸು, ರೀಪು ಹಾನಿಗೊಳಗಾಗಿದೆ. ಅಲ್ಲದೆ ಮನೆ ಪಕ್ಕದಲ್ಲಿರುವ ಕಟ್ಟಡ ಸಂಪೂರ್ಣ ಹುಡಿಯಾಗಿದ್ದು ಸುಮಾರು 15 ಶೀಟ್‌ಗಳು ಹಾನಿಗೊಂಡಿದೆ. ಇದರಿಂದ ನನಗೆ ವಾಸಕ್ಕೆ ಬೇರೆ ವ್ಯವಸ್ಥೆ ಇಲ್ಲದೆ ತುಂಬಾ ತೊಂದರೆಯಾಗಿದ್ದು ಸುಮಾರು 75 ಸಾವಿರಕ್ಕೂ ಮಿಕ್ಕಿ ನಷ್ಟವುಂಟಾಗಿದೆ. ಆದುದರಿಂದ ತಾವು ಸ್ಥಳ ಪರಿಶೀಲನೆ ನಡೆಸಿ ಸರಕಾರದಿಂದ ಸರಕಾರದಿಂದ ಸಿಗುವ ಗರಿಷ್ಠ ಮೊತ್ತದ ಪರಿಹಾರಧನ ಮಂಜೂರು ಮಾಡಿಸಿಕೊಡಬೇಕಾಗಿ ಒತ್ತಾಯಿಸಿದ್ದಾರೆ.