ನಿಡ್ಪಳ್ಳಿ: ಬಹುಗ್ರಾಮ ಕುಡಿಯುವ ನೀರಿನ ಪೈಪ್ ಅಳವಡಿಸುವ ಕಾಮಗಾರಿ ಅವಾಂತರ ಸೃಷ್ಟಿಸಿದ ಕಾರಣ ಗುಮ್ಮಟೆಗದ್ದೆ-ಸಾಜ ಸಂಪರ್ಕ ರಸ್ತೆಯ ಗುಮ್ಮಟೆಗದ್ದೆ ವ್ಯಾಪ್ತಿಯ ರಸ್ತೆಯಲ್ಲಿ ಕೆಸರು ತುಂಬಿ ಸಂಚಾರಕ್ಕೆ ಬಹಳ ತೊಂದರೆ ಉಂಟಾದ ಘಟನೆ ನಡೆದಿದೆ.
ಬಹುಗ್ರಾಮ ಕುಡಿಯುವ ಯೋಜನೆಯ ಪೈಪ್ ಲೈನ್ ನೀರು ಹೋಗುವ ಚರಂಡಿಯಲ್ಲಿ ಹೊಂಡ ತೆಗೆದು ಅಳವಡಿಸಿದ ಕಾರಣ ನೀರಿನೊಂದಿಗೆ ಮಣ್ಣು ಕಲ್ಲು ಹರಿದು ರಸ್ತೆ ಮೇಲೆ ಹರಡಿದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ನಡೆದಾಡಲೂ ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗಂತೂ ಹೇಳುವುದೇ ಬೇಡ, ಎರಡೂ ಬದಿಯಲ್ಲಿ ಚರಂಡಿ ವ್ಯವಸ್ಥೆ ಕೂಡ ಇಲ್ಲದ ಕಾರಣ ಮಳೆ ನೀರು ಮತ್ತು ಮಣ್ಣು ರಸ್ತೆಯಲ್ಲೇ ನಿಂತು ರಸ್ತೆ ಕೆಸರುಮಯವಾಗಿದೆ. ನಡೆದುಕೊಂಡು ಹೋಗಲೂ ಕೂಡ ಬದಿಯಿಂದ ದಾರಿಯಿಲ್ಲದೇ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.