ಮೇ ತಿಂಗಳಲ್ಲಿ ದಾಖಲೆ ಮಳೆ – 1943ರ ಮೇ ಬಳಿಕ ಈ ವರ್ಷದ ಮೇ ತಿಂಗಳಿನಲ್ಲಿ ಅತ್ಯಧಿಕ ಮಳೆ

0

ಬೆಂಗಳೂರು: ರಾಜ್ಯದಲ್ಲಿ ಮೇ ತಿಂಗಳಿನಲ್ಲಿ ಸುರಿದಿರುವ 245.2 ಮಿ.ಮೀ. ಮಳೆ ಸಾರ್ವಕಾಲಿಕ ದಾಖಲೆ ಮಳೆಯಾಗಿದೆ. 1943ರ ಮೇ ಯಲ್ಲಿ ಸುರಿದ 185.9 ಮಿ.ಮೀ. ಮಳೆ ಈ ವರೆಗಿನ ದಾಖಲೆಯಾಗಿತ್ತು. ಜತೆಗೆ ಕಳೆದ 3 ತಿಂಗಳುಗಳಲ್ಲಿ ರಾಜ್ಯದಲ್ಲಿ ಸುರಿದ 322.2 ಮಿ.ಮೀ. ಮಳೆ ಕೂಡ ಚಾರಿತ್ರಿಕ ದಾಖಲೆಯಾಗಿದೆ.
ಮೇ 2025ರ ನೈಜ- ಸಮಯದ ದತ್ತಾಂಶದ ಆಧಾರದ ಮೇಲೆ, 1901ರಿಂದ ಕರ್ನಾಟಕದಲ್ಲಿರುವ 2 ಹವಾಮಾನ ಉಪವಿಭಾಗಗಳು ಮತ್ತು 7 ಜಿಲ್ಲೆಗಳಲ್ಲಿ ಮೇ ಮಳೆ ಸಾರ್ವಕಾಲಿಕ ದಾಖಲೆ ಮಾಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದ.ಕ., ಉಡುಪಿಯಲ್ಲಿ 3 ತಿಂಗಳ ದಾಖಲೆ ಮಳೆ: ದಕ್ಷಿಣ ಕನ್ನಡದಲ್ಲಿ ಕಳೆದ ೩ ತಿಂಗಳಿನಲ್ಲಿ 1,112.7 ಮಿ.ಮೀ. ಸಾರ್ವಕಾಲಿಕ ದಾಖಲೆ ಮಳೆಯಾಗಿದೆ. ಈ ಹಿಂದೆ 1918ರಲ್ಲಿ 859.4 ಮಿ.ಮೀ. ಮಳೆಯಾಗಿತ್ತು. ಉಡುಪಿಯಲ್ಲಿ 1918ರಲ್ಲಿ 1054.2 ಮಿ.ಮೀ. ದಾಖಲೆ ಮಳೆಯಾಗಿತ್ತು. ಈ ಬಾರಿ ಇದರ ಪ್ರಮಾಣವು 1055.6 ಮಿ.ಮೀ.ಗೆ ಏರಿಕೆಯಾಗುವ ಮೂಲಕ ಉಡುಪಿ ಜಿಲ್ಲೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.


ಕರಾವಳಿಯಲ್ಲೂ ಸಾರ್ವಕಾಲಿಕ ದಾಖಲೆ: ರಾಜ್ಯದ ಕರಾವಳಿ ಕರ್ನಾಟಕದಲ್ಲಿ 1918ರ ಮೇ ಯಲ್ಲಿ 690.6 ಮಿ.ಮೀ. ದಾಖಲೆ ಮಳೆ ಸುರಿದಿತ್ತು. ಈ ಬಾರಿ ಮೇಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ 764.9 ಮಿ.ಮೀ. ಮಳೆಯಾಗುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. ದಕ್ಷಿಣ ಕನ್ನಡದಲ್ಲಿ 1918ರ ಮೇಯಲ್ಲಿ 845.3 ಮಿ.ಮೀ. ಮಳೆಯಾಗಿತ್ತು. ಈ ಬಾರಿಯ ಮೇಯಲ್ಲಿ 994.5 ಮಿ.ಮೀ. ಚಾರಿತ್ರಿಕ ದಾಖಲೆ ಮಳೆ ಸುರಿದಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here