ಕಡಬ: ಕೋಡಿಂಬಾಳ ಬಳಿ ಸ್ವಂತ ಅಣ್ಣನನ್ನೇ ತಮ್ಮ ಪೆಟ್ರೋಲ್ ಮಿಶ್ರಿತ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಮಂಗಳೂರು-ಬೆಂಗಳೂರು ರೈಲು ಮಾರ್ಗದ ಕೋಡಿಂಬಾಳ ಸಮೀಪದ ಕೋರಿಯರ್ ರೈಲ್ವೇ ಹಳಿ ಸಮೀಪ ಅಣ್ಣನನ್ನೇ ತಮ್ಮ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದ. ಇದರಿಂದ ಗಂಭೀರ ಸ್ವರೂಪದ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅಣ್ಣ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ತಮ್ಮನ ವಿರುದ್ಧ ಪೊಲೀಸರು ಕೊಲೆ ಯತ್ನ ಬದಲು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ನಿವಾಸಿ ಹನುಮಪ್ಪ (42) ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಈತನ ಸಹೋದರ ನಿಂಗಪ್ಪ (21) ಕೃತ್ಯ ಎಸಗಿದ ಆರೋಪಿ. ಮೊದಲು ಕಡಬ ಪೊಲೀಸರ ವಶದಲ್ಲಿದ್ದ ಈತನನ್ನು ಜೂ.8ರ ರಾತ್ರಿ ಮಂಗಳೂರು ವಿಭಾಗದ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ವಶಕ್ಕೆ ಪಡೆದು ಬಂಧಿಸಿದ್ದರು. ಆರಂಭದಲ್ಲಿ ಘಟನಾ ಸ್ಥಳಕ್ಕೆ ಕಡಬ ಠಾಣಾ ಎಸ್.ಐ. ಅಭಿನಂದನ್ ಮತ್ತು ಸಿಬ್ಬಂದಿ ಭೇಟಿ ನೀಡಿ, ಆರೋಪಿಯನ್ನು ಸ್ಥಳೀಯರ ಸಹಕಾರದೊಂದಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಮಂಗಳೂರಿನಿಂದ ರೈಲ್ವೇ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿ ತಮ್ಮ ವಶಕ್ಕೆ ಪಡೆದಿದ್ದರು.
ಕೊಲೆಗೆ ಕಾರಣ ತಿಳಿಸಿದ ತಮ್ಮ
ಅಣ್ಣನಿಗೆ ವಿಪರೀತ ಕುಡಿತದ ಚಟವಿತ್ತು. ಆತನ ಕಾಟದಿಂದಲೇ 14 ವರ್ಷಗಳ ಹಿಂದೆ ಆತನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಇತ್ತೀಚೆಗೆ ಕುಡಿದ ಮತ್ತಿನಲ್ಲಿ ನಮ್ಮ ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಯತ್ನಿಸಿದ್ದ. ನನ್ನ ಜೊತೆಯೂ ಗಲಾಟೆ ಮಾಡಿದ್ದಾನೆ. ಈ ಎಲ್ಲಾ ಹಿಂಸೆಯಿಂದ ನಾವು ರೋಸಿ ಹೋಗಿ ಅವನನ್ನು ಕೊಲೆ ಮಾಡಲು ನಿರ್ಧರಿಸಿದ್ದೆವು” ಎಂದು ನಿಂಗಪ್ಪ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.