ಪುತ್ತೂರು: ಭಾರತೀಯ ರೈಲ್ವೇಯು ಕೋವಿಡ್ ನಂತರ ಮೊದಲ ಬಾರಿಗೆ ಪ್ರಯಾಣಿಕ ರೈಲು ಟಿಕೆಟ್ ದರಗಳ ಬೆಲೆ ಹೆಚ್ಚಳ ಮಾಡಿದೆ. ಜುಲೈ 1, 2025 ರಿಂದ ಜಾರಿಗೆ ಬರುವಂತೆ ಎಸಿ ಮತ್ತು ಎಸಿಯೇತರ ಎಕ್ಸ್‌ಪ್ರೆಸ್ ಹಾಗೂ ಎರಡನೇ ದರ್ಜೆಯ ರೈಲು ಟಿಕೆಟ್ ದರಗಳಲ್ಲಿ ಏರಿಕೆ ಮಾಡಿ ರೈಲ್ವೆ ಇಲಾಖೆಯು ಆದೇಶ ಮಾಡಿದೆ.
ಇಂದಿನಿಂದಲೇ ಅನ್ವಯವಾಗುವಂತೆ ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳ ಹವಾನಿಯಂತ್ರಿತ (ಎಸಿ) ದರ್ಜೆಯ ಪ್ರಯಾಣದರವನ್ನು ಪ್ರತಿ ಕಿ.ಮೀಗೆ 2 ಪೈಸೆ, ಹವಾನಿಯಂತ್ರಣ ರಹಿತ (ನಾನ್ ಎ.ಸಿ) ದರ್ಜೆಯ ದರವನ್ನು 1 ಪೈಸೆ ಏರಿಕೆ ಮಾಡಿ ರೈಲ್ವೆ ಇಲಾಖೆಯು ಸೋಮವಾರ ಆದೇಶ ಹೊರಡಿಸಿದೆ.
ಎಷ್ಟು ದುಬಾರಿಯಾಗಿದೆ?
ರೈಲ್ವೆ ಇಲಾಖೆಯ ಪ್ರಕಟಣೆ ಪ್ರಕಾರ, ಈ ಬಾರಿ ಗರಿಷ್ಠ ದರವನ್ನು ಕಿಲೋಮೀಟರ್‌ಗೆ 2 ಪೈಸೆ ಹೆಚ್ಚಿಸಲಾಗಿದೆ. ಎಸಿ ಅಲ್ಲದ ಸ್ಲೀಪರ್ ಕ್ಲಾಸ್ ಮತ್ತು ಪ್ರಥಮ ದರ್ಜೆಯ ದರವು ಕಿಲೋಮೀಟರ್‌ಗೆ 50 ಪೈಸೆ ಹೆಚ್ಚಾಗಿದೆ. ಎಕ್ಸ್‌ಪ್ರೆಸ್ ಎಸಿ ಅಲ್ಲದ ರೈಲುಗಳ ದರ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಿಸಲಾಗಿದೆ. ಎಸಿ ಕ್ಯಾಟಗರಿಯ ದರವು ಕಿಲೋಮೀಟರ್‌ಗೆ 2 ಪೈಸೆ ಹೆಚ್ಚಾಗಿದೆ.
ಕಿಮೀ ಪ್ರಕಾರ ಪ್ರಯಾಣ ದರ ಎಷ್ಟು ಹೆಚ್ಚಾಗಿದೆ?
ಎಸಿ ಅಲ್ಲದ ರೈಲುಗಳಲ್ಲಿ 500 ಕಿ.ಮೀ ವರೆಗಿನ ಎರಡನೇ ದರ್ಜೆಯ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ. 501-1500 ಕಿ.ಮೀ ದೂರದ ಪ್ರಯಾಣಕ್ಕೆ 5 ರೂ, 1501-2500 ಕಿ.ಮೀ ದೂರಕ್ಕೆ ಟಿಕೆಟ್ ದರ 10 ರೂ, ಮತ್ತು 2501-3000 ಕಿ.ಮೀ ದೂರಕ್ಕೆ 15 ರೂ. ಹೆಚ್ಚಳವಾಗಲಿದೆ.
ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣ ದರ ಎಷ್ಟು?
ಎಕ್ಸ್‌ಪ್ರೆಸ್ ರೈಲುಗಳ ಸೆಕೆಂಡ್ ಕ್ಲಾಸ್, ಸ್ಲೀಪರ್ ಕ್ಯಾಟಗರಿ ಮತ್ತು ಪ್ರಥಮ ದರ್ಜೆಯ ಪ್ರಯಾಣ ದರವನ್ನು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಿಸಲಾಗಿದೆ. ಎಸಿ ಕೋಚ್‌ಗಳಾದ ಎಸಿ-3 ಟೈರ್, ಎಸಿ-2 ಟೈರ್ ಮತ್ತು ಫಸ್ಟ್ ಕ್ಲಾಸ್ ಪ್ರಯಾಣ ದರವನ್ನು ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚಿಸಲಾಗಿದೆ.