ಆಲಂಕಾರು: ಬೆಳೆ ವಿಮೆಯೆಂಬುದು ಸಂಕಷ್ಟದಲ್ಲಿರುವ ರೈತರ ಪಾಲಿಗೆ ವರವಾಗಿದೆ. ಇದೀಗ 2025-26 ನೇ ಸಾಲಿನ ಅಡಿಕೆ ಮತ್ತು ಕಾಳು ಮೆಣಸು ಬೆಳೆ ವಿಮೆಯ ಕಂತು ಪಾವತಿಗೆ ಜು 31 ಕೊನೆಯ ದಿನಾಂಕ ಎಂದು ಸರಕಾರ ಘೋಷಣೆ ಮಾಡಿದ್ದು, ಕೆಲವೊಂದು ರೈತರಿಗೆ ಬೆಳೆ ವಿಮೆಯ ಕಂತು ಪಾವತಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಸಾಲಿನಲ್ಲೂ ಹೆಚ್ಚಿನ ರೈತರಿಗೆ ಬೆಳೆ ವಿಮೆಯ ಕಂತು ಪಾವತಿಸಲು ಸಾಧ್ಯವಾಗಿಲ್ಲ. ಕಳೆದ ಸಾಲಿನಲ್ಲಿ ಬೆಳೆ ಸಮೀಕ್ಷೆ ವರದಿ ಆರ್ ಟಿ ಸಿಯಲ್ಲಿ ನಮೂದಾಗದೆ ಹಲವು ರೈತರಿಗೆ ತೊಂದರೆಯಾಗಿದೆ. ರೈತರು ಬ್ಯಾಂಕ್, ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೊನೆ ಕ್ಷಣದಲ್ಲಿ ಕೆಲವೊಂದು ರೈತರಿಗೆ ತೋಟಗಾರಿಕಾ ಇಲಾಖೆಯ ಮುಖಾಂತರ ಬೆಳೆ ವಿಮೆಯ ಕಂತು ಪಾವತಿಸಲು ಅವಕಾಶ ದೊರೆತಿತ್ತು. ಆದರೆ ಹೆಚ್ಚಿನ ಜನರಿಗೆ ಬೆಳೆ ವಿಮೆ ಕಂತು ಪಾವತಿಸಲು ಸಾಧ್ಯವಾಗಿಲ್ಲ. ಈ ಸಾಲಿನಲ್ಲಿ ಹೊಸದೊಂದು ಸಮಸ್ಯೆ ಎದುರಾಗಿದೆ. ಈ ಸಾರಿ ಸರಕಾರ ಪ್ಲಾಟಿಂಗ್ ವ್ಯವಸ್ಥೆಯನ್ನು ಸರಿಪಡಿಸಿ ಜಾಗದ ಪ್ಲಾಟಿಂಗ್ ಮಾಡಿಕೊಟ್ಟು ಕೃಷಿಕರು ಸಂತಸಪಡುವ ಸಂಧರ್ಭದಲ್ಲಿ ಹೊಸ ಸಮಸ್ಯೆಯೊಂದು ಉಲ್ಬಣವಾಗಿದೆ. ಹೆಚ್ಚಿನ ರೈತರ ಭೂಮಿಗಳು ಪ್ಲಾಟಿಂಗ್ ಆಗಿ ಹೊಸ ಹಿಸ್ಸಾ ನಂಬರ್ ಬಂದಿರುತ್ತದೆ. ಮತ್ತು ಅದರ ಜೊತೆ ಬೆಳೆ ಸಮೀಕ್ಷೆ ಆಗಿರುವ ವರದಿಗಳು ಆರ್ ಟಿ ಸಿಯಿಂದ ನಾಪತ್ತೆಯಾಗಿದೆ. ಇದರಿಂದಾಗಿ ಪ್ಲಾಟಿಂಗ್ ಆಗಿರುವ ಭೂಮಿಯಲ್ಲಿ ಕೃಷಿ ಇದ್ದು, ಆರ್.ಟಿ.ಸಿ ಯಲ್ಲಿ ಅಡಿಕೆ,ಕಾಳುಮೆಣಸು ಬೆಳೆಯ ವಿವರ ಇಲ್ಲದೇ, ಬೆಳೆ ವಿಮೆ ಕಂತು ಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಆರಂಭದಲ್ಲೇ ಕೆಲವೊಂದು ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಈ ಸಮಸ್ಯೆಯನ್ನು ಸರಕಾರದ ಅದಷ್ಟು ಶೀಘ್ರ ಪರಿಹರಿಸಬೇಕಾಗಿದೆ. ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.
ಹವಾನಿಯಂತ್ರಿತ ಬೆಳೆ ವಿಮೆಯಿಂದ ನನಗೆ ತುಂಬಾ ಪ್ರಯೋಜನವಾಗಿದೆ. ಕಳೆದ ಸಾರಿ ನಾನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳೆ ವಿಮೆಯನ್ನು ಮಾಡಿದ್ದೆ. ಈ ಸಾರಿ ಬೆಳೆ ವಿಮೆ ನೊಂದಾಯಿಸಲು ಬ್ಯಾಂಕ್ ಹೋದ ಸಂದರ್ಭದಲ್ಲಿ ಪ್ಲಾಟಿಂಗ್ ನಿಂದ ಹಿಸ್ಸಾ ನಂಬರ್ ಬದಲಾಗಿದ್ದು ನನ್ನ ಆರ್.ಟಿ.ಸಿ ಯಲ್ಲಿ ಬೆಳೆ ಸಮೀಕ್ಷಾ ವರದಿ ಇಲ್ಲದೇ ವಿರುವುದರಿಂದ ಬೆಳೆ ವಿಮೆ ನೊಂದಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸರಕಾರ ಅದಷ್ಟು ಬೇಗ ಗಮನ ಹರಿಸಿ ಈ ಸಮಸ್ಯೆಯನ್ನು ಪರಿಹರಿಸುವಂತೆ ವಿನಂತಿಸುತ್ತೇನೆ.
ಸದಾಶಿವ ಗೌಡ ಅರ್ವೆ ರಾಮಕುಂಜ
ಈಗಾಗಲೇ ಹಲವು ರೈತರು ರಾಮಕುಂಜ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಕ್ಕೆ ಬೆಳೆ ವಿಮೆ ಕಂತು ಪಾವತಿಸಲು ಭೇಟಿ ನೀಡಿದ್ದಾರೆ. ಅಂದಾಜು 20 ಜನರ ಆರ್ ಟಿ ಸಿಯಲ್ಲಿ ಇಂತಹ ಸಮಸ್ಯೆಗಳು ಕಂಡು ಬಂದಿದೆ. ಈ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಯವರು ಸರಿಪಡಿಸಬೇಕಾಗಿದೆ.