ಜು.12 : ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ “ಪೆರ್ಮೆದ ಬಂಟೆರ್”

0

ಸಮಾಜಕ್ಕೆ ಹೆಮ್ಮೆಯನ್ನು ತಂದಿದ್ದಾರೆ- ಕಾವು ಹೇಮನಾಥ ಶೆಟ್ಟಿ

ಪುತ್ತೂರು: ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಮಹಿಳಾ ಬಂಟರ ವಿಭಾಗ, ಯುವ ಬಂಟರ ವಿಭಾಗ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಜು.12 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ನಡೆಯಲಿರುವ “ಪೆರ್ಮೆದ ಬಂಟೆರ್” ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಕಾರ್‍ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಜು.1ರಂದು ಜರಗಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ಪುತ್ತೂರು ಬಂಟರ ಭವನದ “ಬಂಟರ ಚಾವಡಿಯಲಿ” ಆಮಂತ್ರಣ ಬಿಡುಗಡೆ ನಡೆಯಿತು. ಬಳಿಕ ಸರಳ ರೀತಿಯ ಸಭಾ ಕಾರ್‍ಯಕ್ರಮ ಜರಗಿತು.

ಸಮಾಜಕ್ಕೆ ಹೆಮ್ಮೆಯನ್ನು ತಂದಿದ್ದಾರೆ- ಕಾವು ಹೇಮನಾಥ ಶೆಟ್ಟಿ
ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಜು.12 ರಂದು ಜರಗಲಿರುವ “ಪೆರ್ಮೆದ ಬಂಟೆರ್” ಕಾರ್‍ಯಕ್ರಮ ಅರ್ಥಪೂರ್ಣ ಕಾರ್‍ಯಕ್ರಮವಾಗಿ ಮೂಡಿಬರಲು ಎಲ್ಲರೂ ಪೂರ್ಣ ರೀತಿಯ ಸಹಕಾರವನ್ನು ನೀಡಬೇಕು. ನಮ್ಮ ಸಮಾಜದ ಬಂಟ ಸಾಧಕರನ್ನು ಗುರುತಿಸುವುದು, ಗೌರವಿಸುವುದು ನಮ್ಮ ಕರ್ತವ್ಯವಾಗಿದ್ದು, ಬಂಟರು ಜಗತ್ತಿನಲ್ಲಿಯೇ ನಾನಾ ರೀತಿಯ ಸಾಧನೆಯನ್ನು ಮಾಡಿ, ಸಮಾಜಕ್ಕೆ ಹೆಮ್ಮೆಯನ್ನು ತಂದಿದ್ದಾರೆ. ಆ ನಿಟ್ಟಿನಲ್ಲಿ ಬಂಟ ಸಮಾಜದ 11 ಮಂದಿ ವಿವಿಧ ಸಾಧಕರನ್ನು ಸನ್ಮಾನಿಸಲಿದ್ದೇವೆ. ಜೊತೆಗೆ ನೂತನವಾಗಿ ಆಯ್ಕೆಯಾದ ಸರಕಾರಿ ನಾಮ ನಿರ್ದೇಶನ ಸದಸ್ಯರು, ಸಹಕಾರಿ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರುಗಳು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರುಗಳು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಾರ್‍ಯಕ್ರಮ ನಡೆಯಲಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ನಡೆಯುವ ಈ ಕಾರ್‍ಯಕ್ರಮದಲ್ಲಿ ಬಂಟ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ಯಶಸ್ವಿಯಾಗಿ ನಡೆಯಲಿ- ಕುಂಬ್ರ ದುರ್ಗಾಪ್ರಸಾದ್ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಬಂಟ ಸಮಾಜದ ಸಂಘಟನೆಯನ್ನು ಬಲಗೊಳಿಸುವ ಕಾರ್‍ಯ ನಿರಂತರವಾಗಿ ವಿವಿಧ ಚಟುವಟಿಕೆಗಳ ಮೂಲಕ ನಡೆಯುತ್ತಿದೆ, ಪೆರ್ಮೆದ ಬಂಟೆರ್ ಕಾರ್‍ಯಕ್ರಮ ಈ ನಿಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.

ಪುತ್ತೂರು ಬಂಟರ ಸಂಘಕ್ಕೆ ಹೆಸರನ್ನು ತರಲಿ- ಶಶಿಕುಮಾರ್ ರೈ ಬಾಲ್ಯೊಟ್ಟು
ಬಂಟರ ಸಂಘದ ನಿಕಟ ಪೂರ್ವಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, ಪೆರ್ಮೆದ ಬಂಟೆರ್ ಕಾರ್‍ಯಕ್ರಮ ಅತ್ಯಂತ ವೈಭವಪೂರ್ಣವಾಗಿ ಪುತ್ತೂರು ಬಂಟರ ಸಂಘಕ್ಕೆ ಹೆಸರನ್ನು ತರಲಿ ಎಂದು ಶುಭಹಾರೈಸಿದರು.

ಉನ್ನತವಾದ ಸ್ಥಾನವನ್ನು ಪಡೆಯಬೇಕು- ಬೂಡಿಯಾರ್ ರಾಧಾಕೃಷ್ಣ ರೈ
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ಬಂಟ ಸಮಾಜದಲ್ಲಿ ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಕಾರ ನೀಡುವುದು ಪುಣ್ಯದ ಕೆಲಸವಾಗಿದ್ದು, ಬಂಟ ಸಮಾಜದ ವಿದ್ಯಾರ್ಥಿಗಳು ಉನ್ನತವಾದ ಸ್ಥಾನವನ್ನು ಪಡೆಯಬೇಕು ಎಂದರು.

ಬಂಟ ಸಮಾಜಕ್ಕೆ ಆದರ್ಶಪ್ರಾಯವಾಗಬೇಕು-ದಯಾನಂದ ರೈ ಮನವಳಿಕೆಗುತ್ತು
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ, ಬಂಟ ಸಮಾಜದ ಪ್ರತಿಭಾವಂತರನ್ನು ಗುರುತಿಸುವ ಮೂಲಕ, ಅವರ ಪ್ರತಿಭೆ ಬಂಟ ಸಮಾಜಕ್ಕೆ ಆದರ್ಶಪ್ರಾಯವಾಗಬೇಕು ಎಂದರು.

ಸಂತೋಷದ ವಿಚಾರವಾಗಿದೆ-ಸಾಜ ರಾಧಾಕೃಷ್ಣ ಆಳ್ವ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ಬಂಟ ಸಮಾಜದಲ್ಲಿ ಇರುವ ಪ್ರತಿಭಾವಂತರು ನಮ್ಮ ಸಮಾಜದ ಸಂಪತ್ತು, ಅವರನ್ನು ಸಮಾಜಕ್ಕೆ ಬಂಟರ ಸಂಘದ ಮೂಲಕ ಆಗುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.

ಎಲ್ಲರ ಸಹಕಾರ ಅಗತ್ಯ – ಗೀತಾ ಮೋಹನ್ ರೈ
ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾಮೋಹನ್ ರೈರವರು ಮಾತನಾಡಿ, ಅಗೋಸ್ಟ್ 3 ರಂದು ಮಧ್ಯಾಹ್ನ ಬಳಿಕ ಬಂಟರ ಭವನದಲ್ಲಿ ತಾಲೂಕು ಬಂಟರ ಸಂಘದ ಸಹಯೋಗದಲ್ಲಿ ಮಹಿಳಾ ಬಂಟರ ಸಂಘದಿಂದ ಆಟಿ ತಿಂಗಳ ಕಾರ್‍ಯಕ್ರಮ ವೈಭವಯುತವಾಗಿ ನಡೆಯಲಿದೆ. ಈ ಕಾರ್‍ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಪೂರ್ಣ ಸಹಕಾರ ಇದೆ- ಹರ್ಷಕುಮಾರ್ ರೈ ಮಾಡಾವು
ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವುರವರು ಮಾತನಾಡಿ, ಬಂಟರ ಸಂಘದಿಂದ ನಡೆಯುವ ಎಲ್ಲಾ ಕಾರ್‍ಯಕ್ರಮಗಳಿಗೆ ಯುವ ಬಂಟರ ಸಂಘದ ಪೂರ್ಣ ಸಹಕಾರ ಇದೆ ಎಂದರು.


ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿ, ಬಂಟರ ಸಂಘದ ನಿರ್ದೇಶಕರುಗಳಾದ ದಂಬೆಕ್ಕಾನ ಸದಾಶಿವ ರೈ, ಪುಲಸ್ಯ ರೈ, ಹರಿಣಾಕ್ಷಿ ಜೆ.ಶೆಟ್ಟಿ, ಸದಾಶಿವ ರೈ ಸೂರಂಬೈಲು, ಸ್ವರ್ಣಲತಾ ಜೆ.ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು, ಸತೀಶ್ ರೈ ಕಟ್ಟಾವು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ತಾಲೂಕು ಮಹಿಳಾ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ಕುಸುಮ ಪಿ.ಶೆಟ್ಟಿ ಕೆರೆಕ್ಕೋಡಿ, ಕೋಶಾಧಿಕಾರಿ ಅರುಣಾ ಡಿ.ರೈ, ತಾಲೂಕು ಯುವ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಂಜಿನಿ ಶೆಟ್ಟಿ, ಉಮಾಪ್ರಸಾದ್ ರೈ ನಡುಬೈಲು, ಉಪನ್ಯಾಸಕ ಕಿರಣ್‌ಚಂದ್ರ ರೈ, ಪುತ್ತೂರು ಬಂಟರ ಭವನದ ಕಚೇರಿ ವ್ಯವಸ್ಥಾಪಕ ರವಿಚಂದ್ರ ರೈ ಕುಂಬ್ರ ಮತ್ತು ಭಾಸ್ಕರ್ ರೈ ಎಂರವರುಗಳು ಉಪಸ್ಥಿತರಿದ್ದರು ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ ವಂದಿಸಿದರು.

ಜು. 19- ಕಾಲೇಜ್ ಬಂಟ ವಿದ್ಯಾರ್ಥಿಗಳ ಸಮಾವೇಶ
ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಜು.19 ರಂದು ಮಧ್ಯಾಹ್ನದ ಬಳಿಕ ಪುತ್ತೂರು-ಕಡಬ ತಾಲೂಕು ವ್ಯಾಪ್ತಿಯ ಕಾಲೇಜ್ ಬಂಟ ವಿದ್ಯಾರ್ಥಿಗಳನ್ನು ಒಂದಡೆ ಸೇರಿಸಿ, ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಎಲ್ಲಾ ಕಾಲೇಜ್‌ಗಳಲ್ಲಿ ಕಲಿಯುತ್ತಿರುವ ಬಂಟ ವಿದ್ಯಾರ್ಥಿಗಳನ್ನು ಸೇರಿಸಿ, ಅವರಿಗೆ ಬಂಟ ಸಮಾಜ ನಡೆದು ಬಂದ ದಾರಿ ಹಾಗೂ ಬಂಟರ ಸಂಘದ ಮೂಲಕ ನಡೆಯುವ ಚಟುವಟಿಕೆಗಳನ್ನು ತಿಳಿಸುವ ಕಾರ್‍ಯ ನಡೆಯಲಿದೆ. ಆಮೂಲಕ ಬಂಟರ ಸಂಘದಲ್ಲಿ ಸಮಾಜದ ವಿದ್ಯಾರ್ಥಿಗಳು ಭಾಗವಹಿಸುವಿಕೆಯನ್ನು ಮಾಡುವ ಕಾರ್‍ಯವನ್ನು ಮಾಡಲಿದ್ದೇವೆ. ಎಲ್ಲಾ ಕಾಲೇಜಿನ ಬಂಟ ವಿದ್ಯಾರ್ಥಿಗಳು ಈ ಕಾರ್‍ಯಕ್ರಮದಲ್ಲಿ ಭಾಗವಹಿಸಿ.
-ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಪುತ್ತೂರು ತಾಲೂಕು

LEAVE A REPLY

Please enter your comment!
Please enter your name here