ಪುತ್ತೂರು:ಆನ್‌ಲೈನ್ ವಂಚನೆಗಾಗಿ ಬಡ ಜನರ ಬ್ಯಾಂಕ್ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪದಡಿ ಬಂಧಿತನಾಗಿದ್ದ ಬೆಳಗಾವಿಯ ರಾಮದೇವ ಗಲ್ಲಿಯ ಅನೂಪ್ ಕಾರೇಕರ್‌ಗೆ ಜು.೧ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಅಮಾಯಕರಿಗೆ ಚಿಲ್ಲರೆ ಹಣ ನೀಡಿ ಬ್ಯಾಂಕ್ ಖಾತೆ ತೆರೆಯಲು ಹೇಳಿದ ಬಳಿಕ ಆ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದುಕೊಂಡು ಆನ್‌ಲೈನ್ ಬ್ಯುಸಿನೆಸ್ ಮಾಡುವುದಾಗಿ ನಂಬಿಸಿ ಮುಗ್ದ ಜನರ ಬ್ಯಾಂಕ್ ಖಾತೆ ಮಾಹಿತಿಯನ್ನು ಸೈಬರ್ ವಂಚಕರ ಕೈಗಿಡುತ್ತಿದ್ದ ಆರೋಪದಡಿ ಅವಿನಾಶ್ ವಿಠಲ್ ಸುತಾರ್ ಮತ್ತು ಅನೂಪ್ ಕಾರೇಕರ್ ಎಂಬೀರ್ವರನ್ನು ದಕ್ಷಿಣ ಕನ್ನಡ ಸೈಬರ್ ಕ್ರೈಂ ವಿಭಾಗದ ಪೊಲೀಸರು ಕಳೆದ ಮಾ.೨೪ರಂದು ಬಂಧಿಸಿದ್ದರು.ಬಂಧಿತ ಪೈಕಿ ಅವಿನಾಶ್ ವಿಠಲ್ ಸುತಾರ್‌ಗೆ ಕೆಲವು ದಿನಗಳ ಹಿಂದೆ ಉಚ್ಛ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದೀಗ ಅನೂಪ್ ಕಾರೇಕರ್‌ಗೂ ಜಾಮೀನು ಮಂಜೂರು ಮಾಡಿ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿಯವರಿದ್ದ ಏಕಸದಸ್ಯ ಪೀಠ ಆದೇಶಿಸಿದೆ.ಆರೋಪಿಗಳ ಪರ ವಕೀಲರಾದ ರಾಜಾರಾಮ್ ಸೂರ್‍ಯಂಬೈಲು, ದೇವಾನಂದ ಕೆ., ಪ್ರಸಾದ್‌ಕುಮಾರ್ ರೈ ಮತ್ತು ಹರಿಪ್ರಸಾದ್ ರೈ ಪಿ. ಅಜ್ಜಿಕಲ್ಲು ವಾದಿಸಿದ್ದರು.
ಘಟನೆಯ ಹಿನ್ನಲೆ: ಪುತ್ತೂರಿನ ರಾಧಾಕೃಷ್ಣ ನಾಯಕ್ ಎಂಬವರಿಗೆ ವಿಡಿಯೋ ಕಾಲ್ ಮಾಡಿ, ಱಮನಿ ಲ್ಯಾಂಡರಿಂಗ್ ಪ್ರಕರಣದಲ್ಲಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತೇವೆೞ ಎಂದು ಹೆದರಿಸಿ ೪೦ ಲಕ್ಷ ರೂಪಾಯಿ ಹಣವನ್ನು ಆರ್‌ಟಿಜಿಎಸ್ ಮೂಲಕ ಪಡೆಯಲಾಗಿತ್ತು.ಕೆಲವು ದಿನಗಳ ಬಳಿಕ ಅನುಮಾನಗೊಂಡ ರಾಧಾಕೃಷ್ಣ ನಾಯಕ್‌ರವರು ಸಿಇಎನ್ ಠಾಣೆಗೆ ದೂರು ನೀಡಿದ್ದರು.ದೂರು ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ತನಿಖೆ ವೇಳೆ ಬೆಳಗಾವಿಯ ಯಾರದ್ದೋ ಖಾತೆಗೆ ಹಣ ವರ್ಗಾವಣೆಗೊಂಡಿರುವುದನ್ನು ಪತ್ತೆ ಹಚ್ಚಿದ್ದರು.ನಂತರ ಈ ಬ್ಯಾಂಕ್ ಖಾತೆಗಳನ್ನು ಇಟ್ಟುಕೊಂಡು ಶ್ರೀಮಂತ ಜನರಿಗೆ ವೀಡಿಯೊ ಕಾಲ್, ಡಿಜಿಟೆಲ್ ಅರೆಸ್ಟ್ ಸೇರಿದಂತೆ ಹಲವು ವಿಧಾನಗಳಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಮುಗ್ಧ ಜನರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿರುವುದು ತನಿಖೆಯಲ್ಲಿ ಬಯಲಾಗಿತ್ತು.ಬಂಧಿತ ಆರೋಪಿಗಳು ಸೈಬರ್ ವಂಚಕರೊಂದಿಗೆ ಟೆಲಿಗ್ರಾಂ ಮೂಲಕ ಸಂಪರ್ಕ ಸಾಧಿಸಿ ವ್ಯವಹಾರ ನಡೆಸುತ್ತಿದ್ದರು.
ಆರೋಪಿಗಳು ಕೇವಲ ಕಮಿಷನ್ ಆಸೆಗಾಗಿ ಜನರ ಬ್ಯಾಂಕ್ ಖಾತೆಗಳನ್ನು ಉತ್ತರ ಭಾರತದವರಿಗೆ ನೀಡುತ್ತಿದ್ದರು.ಅನೇಕ ಜನರು ತಮ್ಮ ಖಾತೆಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.ಈ ಘಟನೆಗೆ ಸಂಬಂಧಿಸಿ ಆರೋಪಿಗಳಾಗಿ ಬೆಳಗಾವಿಯ ತಹಶೀಲ್ದಾರ್ ಗಲ್ಲಿಯ ಅವಿನಾಶ್ ವಿಠಲ್ ಸುತಾರ್ (೨೮ವ) ಮತ್ತು ರಾಮದೇವ ಗಲ್ಲಿಯ ಅನೂಪ್ ಕಾರೇಕರ್ (೪೨)ಎಂಬವರನ್ನು ಬಂಧಿಸಲಾಗಿತ್ತು.