ಪುತ್ತೂರು: ಸಂತ ವಿಕ್ವರನ ಆಂಗ್ಲ ಮಾಧ್ಯಮ ಶಾಲೆಯ ಪ್ರಸಕ್ತ ಸಾಲಿನ ರಕ್ಷಕ ಶಿಕ್ಷಕ ಸಂಘದ ಸಭೆ ಜು.2ರಂದು ಮಾಯಿದೆ ದೇವಸ್ ಸಭಾಂಗಣದಲ್ಲಿ ನಡೆಯಿತು.
ಶಿಕ್ಷಕರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಲವೀನಾ ಎಲ್ಲರಿಗೂ ಸ್ವಾಗತ ಕೋರಿದರು. ಮುಖ್ಯ ಶಿಕ್ಷಕರಾದ ಹ್ಯಾರಿ ಡಿಸೋಜ ಕಳೆದ ಬಾರಿಯ ರಕ್ಷಕ ಶಿಕ್ಷಕ ಸಂಘದ ವರದಿಯನ್ನು ವಾಚಿಸಿದರು.
ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀಶಕುಮಾರ್ ಎಂ ಕೆ ಮಾತನಾಡಿ “ದೇಶ ಸುತ್ತು ಕೋಶ ಓದು” ಬೆಂದರೆ ಬೇಂದ್ರೆಯಾಗುವರು,ಶಿಕ್ಷಣದ ಜೊತೆಗೆ ಮನುಷ್ಯತ್ವ ಬೆಳೆಸುವುದು ಹೇಗೆ, ಐದು ಬೆರಳುಗಳ ಮಹತ್ವ ತಿಳಿಸಿ, ಹೊಸ ಚಿಂತನಾತ್ಮಕ ಮಾತುಗಳ ಮೂಲಕ ಮಕ್ಕಳ ಭವಿಷ್ಯದ ಬಗ್ಗೆ ಇನ್ನಷ್ಟು ಜಾಗೃತಿಯನ್ನು ಮೂಡಿಸಿ ಪೋಷಕರು ಮತ್ತು ಶಿಕ್ಷಕರು ಸೇರಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹೇಗೆ ಸಹಕರಿಸಬೇಕೆಂಬುದನ್ನು ತಿಳಿಸಿದರು.

ಶಾಲಾ ಸಂಚಾಲಕರು ಹಾಗೂ ಮಾಯಿದೆ ದೇವಸ್ ಚರ್ಚ್ ನ ಧರ್ಮ ಗುರುಗಳಾದ ಅತಿ ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಮಕ್ಕಳ ದೇಹ ಮತ್ತು ಮನಸ್ಸು ಒಳ್ಳೆಯ ರೀತಿಯಲ್ಲಿ ಬೆಳೆಯಬೇಕಾದರೆ ಒಳ್ಳೆಯ ವಿಚಾರಧಾರೆಗಳು ಮಕ್ಕಳಲ್ಲಿ ಬೆಳೆಯಬೇಕು, ಶಿಸ್ತು ಬದ್ಧ ಜೀವನ ಶೈಲಿಯನ್ನು ಮಕ್ಕಳು ಪಡೆಯಲು ಉತ್ತಮ ಮಾರ್ಗದರ್ಶನ ಪೋಷಕರು ಮತ್ತು ಶಿಕ್ಷಕರಿಂದ ಮಾತ್ರ ಸಾಧ್ಯ ಆದ್ದರಿಂದ ಒಗ್ಗಟ್ಟಿನಿಂದ ಸಂಸ್ಥೆಗಾಗಿ ದುಡಿಯಬೇಕೆಂದು ತಿಳಿಸಿದರು.
ಕಳೆದ ವರ್ಷದ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿದ್ದ ಮೌರಿಸ್ ಕುಟಿನ್ಹ ಇವರು ಶಾಲಾ ಆಡಳಿತ ಮಂಡಳಿಯ ಸಹಕಾರ ಮತ್ತು ಹೆತ್ತವರ ಪ್ರೋತ್ಸಾಹವನ್ನು ಹೊಗಳಿ ರಕ್ಷಕ ಮತ್ತು ಶಿಕ್ಷಕರು ಒಗ್ಗಟ್ಟಾಗಿ ಶಾಲಾ ಕಾರ್ಯದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ಹೊಸ ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತ ವೇದಿಕೆಯನ್ನು ಅಲಂಕರಿಸಿದ್ದರು. 2025-26ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶಾಲೆಗೆ ಕಿರು ಕಾಣಿಕೆಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಮೀರಾ ನಿರೂಪಣೆಗೈದು, ಪ್ರೆಸಿಲ್ಲಾ ಇವರು ವಂದನಾರ್ಪಣೆಗೈದರು.