ವಿಟ್ಲ: ಕೇರಳದಿಂದ ಪರವಾನಿಗೆ ಪಡೆದು ಲ್ಯಾಟ್ರರೇಟ್ ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ಗುಂಪೊಂದು ತಡೆದು ನಿಲ್ಲಿಸಿ ಅಡ್ಡಿಪಡಿಸಿದ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಲಾರಿ ಚಾಲಕ ನೀಡಿದ ದೂರಿನಂತೆ ಎಂಟು ಮಂದಿಯ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ ನೆಹರೂನಗರ ನಿವಾಸಿ ಸುಹೇಬ್ (38ವ.) ಪ್ರಕರಣದ ದೂರುದಾರರಾಗಿದ್ದು, ಸ್ಥಳೀಯ ನಿವಾಸಿಗಳಾದ ಜಯಪ್ರಕಾಶ್, ರಮೇಶ, ಸುಧೀರ್ ಕೋಟ್ಯಾನ್, ವರುಣ್ ರೈ, ಪ್ರಶಾಂತ್, ನಾಗೇಶ್, ಸುಂದರ ಸೇರಿದಂತೆ ಎಂಟು ಮಂದಿ ಪ್ರಕರಣದ ಆರೋಪಿಗಳಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ ನೆಹರೂನಗರ ನಿವಾಸಿ ಸುಹೇಬ್ ಹಾಗೂ ಉಮೇಶ ಯಾನೆ ಹರ್ಷ ಎಂಬವರು ಕೇರಳದ ನೆಕ್ರಾಜೆ ಎಂಬಲ್ಲಿರುವ ಕೋರೆಯಿಂದ ಲಾರಿಗಳಲ್ಲಿ ಲ್ಯಾಟರೇಟ್ ಕಲ್ಲುಗಳನ್ನು ಲೋಡ್ ಮಾಡಿಕೊಂಡು ಲ್ಯಾಟರೇಟ್ ಕಲ್ಲು ಸಾಗಾಟಕ್ಕೆ ಬೇಕಾದ ಪರ್ಮಿಟ್ ಪಡೆದುಕೊಂಡು ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ರಾತ್ರಿ 9.30ರ ವೇಳೆಗೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿಗೆ ತಲುಪಿದಾಗ ಸ್ಥಳೀಯ ನಿವಾಸಿಗಳಿದ್ದ ತಂಡವೊಂದು ರಸ್ತೆಗೆ ಅಡ್ಡ ನಿಂತು ಲಾರಿಗಳನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಲ್ಯಾಟರೇಟ್ ಕಲ್ಲು ಸಾಗಾಟದ ಬಗ್ಗೆ ಪರ್ಮಿಟ್ ಕೇಳಿದ್ದರು. ಈ ವೇಳೆ ಕಲ್ಲು ಸಾಗಾಟದ ಪರ್ಮಿಟ್ ತೋರಿಸಿದರೂ ಸ್ಥಳದಲ್ಲಿದ್ದ ತಂಡ ನಮಗೆ ಬೆದರಿಕೆ ಹಾಕಿದೆ ಮಾತ್ರವಲ್ಲದೆ ಬಳಿಕ ಉಕ್ಕುಡದಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ ಬಳಿ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವೇಳೆ ಅಲ್ಲಿಗೂ ಬಂದ ತಂಡ ಬೆದರಿಕೆ ಒಡ್ಡಿದೆ ಎಂದು ಚಾಲಕರು ಆರೋಪಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.