ಪುತ್ತೂರು: ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ ಸರಕಾರಿ ಮೆಡಿಕಲ್ ಕಾಲೇಜು ಬಳಿಯಲ್ಲೇ ಆಯುರ್ವೇದ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿ ಅಗತ್ಯ ಕ್ರಮಕ್ಕೆ ಸರಕಾರ ಆಯುಷ್ ಇಲಾಖೆಗೆ ಶಿಫಾರಸ್ಸು ಮಾಡಿದೆ.
ಸರಕಾರಿ ಮೆಡಿಕಲ್ ಕಾಲೇಜಿಗೆ ಈಗಾಗಲೇ ಜಾಗ ಗುರುತಿಸಲಾಗಿದ್ದು, ಇದರಲ್ಲಿ ಸುಮಾರು 40 ಎಕ್ರೆ ಜಾಗವಿದ್ದು, ಈ ಪೈಕಿ 20 ಎಕ್ರೆ ಜಾಗ ಸರಕಾರಿ ಮೆಡಿಕಲ್ ಕಾಲೇಜಿಗೆ ಬಳಕೆಯಾಗುತ್ತದೆ. ಇದೇ ಜಾಗದಲ್ಲಿ 5 ಎಕ್ರೆ ಜಾಗವನ್ನು ಆಯುರ್ವೇದ ಮೆಡಿಕಲ್ ಕಾಲೇಜಿಗೆ ನಿಗಧಿ ಮಾಡಲಾಗಿದೆ. ಆಯುರ್ವೇದ ಮೆಡಿಕಲ್ ಕಾಲೇಜು ಆಗಬೇಕೆಂದು ಬಹು ಬೇಡಿಕೆ ಇದ್ದು ಇದಕ್ಕೆ ಸರಕಾರ ಮತ್ತು ಆರೋಗ್ಯ ಇಲಾಖೆ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿ ಶಾಸಕ ಅಶೋಕ್ ರೈ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು.
ಇದಕ್ಕೆ ಸರಕಾರ ಸ್ಪಂಧಿಸಿದ್ದು, ಆರೋಗ್ಯ ಸಚಿವಾಲಯ ಆಯುಷ್ ಇಲಾಖೆಗೆ ಈ ಬಗ್ಗೆ ಶಿಫಾರಸ್ಸು ಪತ್ರವನ್ನು ಕಳುಹಿಸಿದೆ. ಪುತ್ತೂರಿನಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜಿನ ಮೊದಲ ಹಂತದ ಕಾರ್ಯ ಪೂರ್ಣಗೊಂಡಂತಾಗಿದ್ದು ಮುಂದಿನ ದಿನಗಳಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜು ಮಂಜೂರು ಪ್ರಕ್ರಿಯೆ ನಡೆಯಲಿದೆ ಎಂದು ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.
ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾದ ಬಳಿಕ ಆಯುರ್ವೆದ ಮೆಡಿಕಲ್ ಕಾಲೇಜಿಗೂ ಬೇಡಿಕೆ ಹೆಚ್ಚಾಗಿತ್ತು. ಈ ನಿಟ್ಟಿನಲ್ಲಿ ಮೆಡಿಕಲ್ ಕಾಲೇಜು ಪಕ್ಕದಲ್ಲೇ ಆಯುರ್ವೆದ ಮೆಡಿಕಲ್ ಕಾಲೇಜು ಆಗಬೇಕೆಂಬ ಉದ್ದೇಶದಿಂದ ನಾನು ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದೆ. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು ಆಯುಷ್ ಇಲಾಖೆಗೆ ಈ ಬಗ್ಗೆ ಶಿಫಾರಸ್ಸು ಪತ್ರವನ್ನು ಕಳುಹಿಸಿದ್ದಾರೆ. ಬನ್ನೂರಿನಲ್ಲಿ ಸುಮಾರು 30 ಕೋಟಿ ರೂ ವೆಚ್ಚದಲ್ಲಿ ಈ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ. ಜನತೆಯ ಬೇಡಿಕೆಯನ್ನು ಒಂದೊಂದಾಗಿ ಈಡೇರಿಸಲಾಗುತ್ತಿದ್ದು ಪುತ್ತೂರು ಕ್ಷೇತ್ರಕ್ಕೆ ಇನ್ನಷ್ಟು ಕಾಲೇಜು, ಉದ್ಯಮಗಳನ್ನು ತರುವ ಉದ್ದೇಶ ಇದೆ. ಈ ಮೂಲಕ ಪುತ್ತೂರು ಅಭಿವೃದ್ದಿ ಮಾಡುವ ಕನಸು ಇದೆ ಅದು ನನಸಾಗಬೇಕು
ಅಶೋಕ್ರೈ ಶಾಸಕರು ಪುತ್ತೂರು