ಸಂತ್ರಸ್ತೆಯನ್ನು ಗಂಡನ ಮನೆಗೆ ಸೇರಿಸುವ ಜವಾಬ್ದಾರಿ ನನ್ನದು-ಪ್ರತಿಭಾ ಕುಳಾಯಿ
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣದ ಸಂತ್ರಸ್ತ ಯುವತಿಯ ಮನೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಜು.3ರಂದು ಸಂಜೆ ಭೇಟಿ ನೀಡಿದರು.
ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡಿದ ಪ್ರತಿಭಾ ಕುಳಾಯಿ ಅವರು, ನೀವು ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸಿಕೊಂಡು ಜೀವನ ಮಾಡಬೇಕಾಗಿಲ್ಲ.ಅಂತಹ ದೊಡ್ಡ ತಪ್ಪು ನೀವು ಮಾಡಿಲ್ಲ.ಇವತ್ತಿಂದ ಮಾಸ್ಕ್ ತೆಗೆದು ಧೈರ್ಯದಿಂದ ಇರಬೇಕು ಎಂದು ಹೇಳಿ, ಸಂತ್ರಸ್ತೆಯ ತಾಯಿ ಮುಖಕ್ಕೆ ಹಾಕಿದ್ದ ಮಾಸ್ಕ್ನ್ನು ತೆಗೆಸಿದರು.
ಇಂತಹ ಘಟನೆಗಳು ನಡೆದಾಗ ಯಾವುದೇ ಕಾರಣಕ್ಕೂ ಮಹಿಳೆಯಾದವಳು ಧೈರ್ಯ ಕಳೆದುಕೊಳ್ಳಬಾರದು ಬದಲಾಗಿ ಅಂಥವರ ವಿರುದ್ಧ ಹೋರಾಟ ಮಾಡಬೇಕು ಎಂದು ಪ್ರತಿಭಾ ಕುಳಾಯಿ ಹೇಳಿದರು.ಇದೇ ವೇಳೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರಿಗೆ ಕರೆ ಮಾಡಿ ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡಿಸಿದರು.
ತಮಗೆ ನ್ಯಾಯ ದೊರಕಿಸಿ ಕೊಡುವಂತೆ ಸಂತ್ರಸ್ತೆಯ ತಾಯಿ ನಮಿತಾ ಅವರು ಕೇಳಿಕೊಂಡಾಗ,ದೂರವಾಣಿ ಮೂಲಕ ಧೈರ್ಯತುಂಬಿದ ನಾಗಲಕ್ಷ್ಮೀ ಅವರು,ಕಾನೂನು ಚೌಕಟ್ಟಿನ ಮೂಲಕ ನ್ಯಾಯ ದೊರಕಿಸಿ ಕೊಡುತ್ತೇನೆ.ನಿಮ್ಮ ಪರವಾಗಿ ಮಹಿಳಾ ಆಯೋಗ ನಿಲ್ಲಲಿದೆ ಎಂದರು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪ್ರತಿಭಾ ಕುಳಾಯಿ ಅವರು,ಏನೋ ಒಂದು ಘಟನೆ ಆಗಿದೆ.ಇಬ್ಬರಿಂದಲೂ ತಪ್ಪಾಗಿದೆ.ಇದು ಸರಿಯಾಗಬೇಕಾದರೆ ಮದುವೆ ಆಗಬೇಕು.ಇದೊಂದೇ ಪರಿಹಾರ.ಹುಡುಗನ ಅಪ್ಪ ಜನಪ್ರತಿನಿಧಿಯಾಗಿದ್ದಾರೆ.ತಾಯಿ ಟೀಚರ್ ಆಗಿದ್ದವರು.ಹಾಗಿರುವಾಗ ಇಲ್ಲಿ ಗಲಾಟೆ, ಜಗಳ, ಕೇಸು, ಕೋರ್ಟ್ ಯಾವುದೂ ಬೇಡ.ನೀವು ದಯವಿಟ್ಟು ಬನ್ನಿ,ಸಂಧಾನ ಮಾಡಿ.ಹುಡುಗಿ ಮತ್ತು ಮಗುವನ್ನು ಕರೆದುಕೊಂಡು ಹೋಗಿ ಮದುವೆ ಮಾಡಿಸಿ ಎಂದರು.ಸಂತ್ರಸ್ತೆಯನ್ನು ಗಂಡನ ಮನೆಗೆ ಸೇರಿಸುವ ಜವಾಬ್ದಾರಿ ನನ್ನದು.ಸಂತ್ರಸ್ತೆಯ ಕುಟುಂಬದ ಖರ್ಚು ವೆಚ್ಚವನ್ನೆಲ್ಲ ನಾನು ಭರಿಸುತ್ತೇನೆ ಎಂದು ಹೇಳಿದ ಪ್ರತಿಭಾ ಕುಳಾಯಿ ಅವರು, ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಜೊತೆ ಮಾತುಕತೆ ಮಾಡುತ್ತೇನೆ ಎಂದರು.