ರಾಮಕುಂಜ: ಕೊಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಯಿಲ ಗೋಕುಲನಗರದಲ್ಲಿ ಸುಳ್ಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಾಣವಾದ ಪ್ರಯಾಣಿಕರ ಆಟೋ ರಿಕ್ಷಾ ತಂಗುದಾಣ ಮತ್ತು ಎಸ್.ಆರ್.ಕೆ.ಲ್ಯಾಡರ್ಸ್ ಪುತ್ತೂರು ಇವರ ಕೊಡುಗೆಯಾಗಿ ನಿರ್ಮಾಣಗೊಂಡ ಬಸ್ಸು ತಂಗುದಾಣದ ಉದ್ಘಾಟನೆ ಜು.5ರಂದು ನಡೆಯಿತು.

ಉದ್ಘಾಟಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಗೋಕುಲನಗರದಲ್ಲಿ ರಿಕ್ಷಾ ತಂಗುದಾಣ ನಿರ್ಮಾಣ ಆಗಬೇಕೆಂಬುದು ಕೊಯಿಲ ಗ್ರಾ.ಪಂ.ನ ಬಹುಸಮಯದ ಬೇಡಿಕೆಯಾಗಿದೆ. ಇದಕ್ಕಾಗಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ.ಅನುದಾನ ನೀಡಲಾಗಿದೆ. ರಿಕ್ಷಾ ತಂಗುದಾಣ ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಇದಕ್ಕೆ ಹೆಚ್ಚುವರಿ ಖರ್ಚು ಆಗಿದಲ್ಲಿ ಮುಂದಿನ ಹಂತದಲ್ಲಿ ಜೋಡಿಸಿಕೊಂಡು ಅನುದಾನ ಮಂಜೂರು ಮಾಡಿಕೊಡುವುದಾಗಿ ಹೇಳಿದರು. ಮುರುಳ್ಯ, ಎಡಮಂಗಲ, ಕನಕಮಜಲುನಲ್ಲಿ ಈಗಾಗಲೇ ಆಟೋ ರಿಕ್ಷಾ ನಿಲ್ದಾಣ ಮಾಡಲಾಗಿದೆ. ಜಾಲ್ಸೂರುನಲ್ಲಿ ಗುದ್ದಲಿಪೂಜೆ ಮಾಡಲಾಗಿದೆ. ಬಲ್ಯದಲ್ಲೂ ಬೇಡಿಕೆ ಬಂದಿದೆ. ಅನುದಾನದ ಕೊರತೆ ಇರುವುದರಿಂದ ಎಲ್ಲಾ ಕಡೆಯೂ ಒಮ್ಮೆಲೆ ಸಾಧ್ಯವಾಗಿಲ್ಲ ಎಂದ ಶಾಸಕರು, ಆಟೋ ರಿಕ್ಷಾದವರು ಜನರೊಂದಿಗೆ ಹೆಚ್ಚಿನ ಒಡನಾಟದಲ್ಲಿರುತ್ತಾರೆ. ಕೋವಿಡ್ ಸಂದರ್ಭದಲ್ಲಿ ರೋಗಿಗಳನ್ನು ನಿರ್ಭೀತಿಯಿಂದ ಆಸ್ಪತ್ರೆ, ಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ ಎಂದರು. ಕೊಯಿಲದಲ್ಲಿ ಎಸ್ಆರ್ಕೆ ಅವರು ಸುಸಜ್ಜಿತ ಬಸ್ನಿಲ್ದಾಣದ ನಿರ್ಮಿಸಿಕೊಟ್ಟಿದ್ದಾರೆ. ಸರಕಾರದಲ್ಲಿ ಅನುದಾನದ ಕೊರತೆ ಇರುವುದರಿಂದ ದಾನಿಗಳಿಂದ ಇಂತಹ ಕೊಡುಗೆ ದೊರೆತಲ್ಲಿ ಊರು ಅಭಿವೃದ್ಧಿಯಾಗಲಿದೆ. ಊರು, ತಾಲೂಕು, ರಾಜ್ಯ ಅಭಿವೃದ್ಧಿಯಾದಲ್ಲಿ ದೇಶದ ಅಭಿವೃದ್ಧಿಯಾಗಲಿದೆ ಎಂದು ಭಾಗೀರಥಿ ಮುರುಳ್ಯ ಹೇಳಿದರು.
ಎಸ್ಆರ್ಕೆ ಲ್ಯಾಡರ್ಸ್ನ ಮಾಲಕ ಕೇಶವ ಅಮೈ ಅವರು ಮಾತನಾಡಿ, ತಂಗುದಾಣಗಳು ಊರಿಗೆ ಅತೀ ಅವಶ್ಯಕವಾಗಿದೆ. ಶಾಸಕರ ಮನವಿಯಂತೆ ಗೋಕುಲನಗರದಲ್ಲಿ ಅವರ ಅನುದಾನದಲ್ಲಿ ಎಸ್ಆರ್ಕೆ ವತಿಯಿಂದ ಆಟೋ ರಿಕ್ಷಾ ತಂಗುದಾಣ ನಿರ್ಮಾಣದ ಕೆಲಸ ಮಾಡಿ ಕೊಡಲಾಗಿದೆ. ಇದರ ಜೊತೆಗೆ ಎಸ್ಆರ್ಕೆ ಪ್ರಾಯೋಜಕತ್ವದಲ್ಲಿ ಬಸ್ ತಂಗುದಾಣ ನಿರ್ಮಿಸಿಕೊಡಲಾಗಿದೆ. ಈ ತಂಗುದಾಣ ಸಾರ್ವಜನಿಕರ ಉಪಯೋಗಕ್ಕೆ ಬರಬೇಕು. ಧರ್ಮ ಸೀಮಿತವಾಗಿ ಬಳಕೆಯಾಗಬಾರದು ಹಾಗೂ ಇಲ್ಲಿ ಯಾರೂ ಕಾಲಹರಣಕ್ಕಾಗಿ ಕುಳಿತುಕೊಳ್ಳುವಂತೆ ಆಗಬಾರದು ಎಂದು ಹೇಳಿದ ಅವರು, ಈ ಬಸ್ ತಂಗುದಾಣವನ್ನು ಗ್ರಾಮ ಪಂಚಾಯತ್ಗೆ ಹಸ್ತಾಂತರ ಮಾಡಲಾಗಿದೆ. ಈಗ ಇದು ಗ್ರಾಮದ ಆಸ್ತಿಯಾಗಿದೆ. ಪ್ರತಿಯೊಬ್ಬರೂ ಇದನ್ನು ಉಪಯೋಗಿಸಿಕೊಳ್ಳುವಂತೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಶ್ ಶೆಟ್ಟಿ ಮಾತನಾಡಿ, ರಿಕ್ಷಾ ಚಾಲಕರಿಂದ ಬಹುಸಮಯಗಳಿಂದ ತಂಗುದಾಣಕ್ಕೆ ಬೇಡಿಕೆ ಬರುತ್ತಿತ್ತು. ರಿಕ್ಷಾ ತಂಗುದಾಣ ಹಾಗೂ ಬಸ್ಸು ತಂಗುದಾಣವನ್ನು ಜನರು ಉತ್ತಮ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಸನ್ಮಾನ:
ರಿಕ್ಷಾ ತಂಗುದಾಣಕ್ಕೆ ಅನುದಾನ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಕೊಡುಗೆಯಾಗಿ ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣ ಮಾಡಿಕೊಟ್ಟ ಎಸ್ಆರ್ಕೆ ಲ್ಯಾಡರ್ಸ್ನ ಕೇಶವ ಅಮೈ ಅವರನ್ನು ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೊಯಿಲ ಗ್ರಾ.ಪಂ.ಉಪಾಧ್ಯಕ್ಷ ಯತೀಶ್, ಪಿಡಿಒ ಸಂದೇಶ್, ಇಂಜಿನಿಯರ್ ಹೊಳೆಬಸಪ್ಪ, ಬಿಎಂಎಸ್ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಶ್ರೀರಾಮ ಕೆಮ್ಮಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಕಾಶ್ ಕೆಮ್ಮಾರ ಸ್ವಾಗತಿಸಿ, ಪಿಡಿಒ ಸಂದೇಶ್ ವಂದಿಸಿದರು. ಗ್ರಾ.ಪಂ.ಮಾಜಿ ಸದಸ್ಯ ಸುಧೀಶ್ ಪಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಗ್ರಾ.ಪಂ.ಸದಸ್ಯರು, ಆಟೋ ರಿಕ್ಷಾ ಚಾಲಕರು, ಸಂಜೀವಿನಿ ಒಕ್ಕೂಟದ ಸದಸ್ಯೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.