ರಾಮಕುಂಜ: ಭಾರೀ ಗಾಳಿ ಹಾಗೂ ಮಳೆಗೆ ಕೊಯಿಲ ಗ್ರಾಮದ ಕೊಲ್ಯ ಪಾಪುತಮಂಡೆ ಎಂಬಲ್ಲಿ ಬೃಹತ್ ಮರವೊಂದು ಮನೆ ಮೇಲೆ ಬಿದ್ದ ಪರಿಣಾಮ ಅಪಾರ ಹಾನಿ ಉಂಟಾದ ಘಟನೆ ಜು.6 ರಂದು ಮಧ್ಯಾಹ್ನ ನಡೆದಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ.
ಮಳೆಯೊಂದಿಗೆ ಭಾರೀ ಗಾಳಿ ಬೀಸಿದ ಪರಿಣಾಮ ಕೊಲ್ಯ ಪಾಪುತಮಂಡೆ ನಿವಾಸಿ ಶೇಖರ ಗೌಡ ಎಂಬವರ ಮನೆಯ ಪಕ್ಕದಲ್ಲಿದ್ದ ಪುನರ್ಪುಳಿ ಮರ ಬೇರು ಸಮೇತ ಕಿತ್ತು ಬಿದ್ದಿದೆ. ಪರಿಣಾಮ ಮನೆಯ ಹಿಂದಿನ ಭಾಗದ ಛಾವಣಿ ಸಂಪೂರ್ಣ ನಾಶವಾಗಿದೆ. ಅಲ್ಲೇ ಇದ್ದ ಟೇಬಲ್, ಕುರ್ಚಿ ಹುಡಿಯಾಗಿವೆ. ಮನೆಯ ಹಿಂದಿನ ಭಾಗದಲ್ಲಿ ಅಡುಗೆ ತಯಾರಿಸುತ್ತಿದ್ದು, ಅಡುಗೆಗೆ ಬಳಸುತ್ತಿದ್ದ ಪಾತ್ರೆಗಳು ಹುಡಿಯಾಗಿವೆ. ಮನೆ ಮಂದಿಯೆಲ್ಲಾ ಅಲ್ಲೇ ಊಟ ಮಾಡಿ ಹೋಗುತ್ತಿದ್ದರು. ಈ ದಿನ ಕೂಡಾ ಎಲ್ಲರೂ ಊಟ ಮಾಡಿ ಮನೆಯೊಳಗೆ ಇದ್ದ ಸಂದರ್ಭದಲ್ಲಿ ಜೋರಾಗಿ ಗಾಳಿ ಬೀಸಿ ಈ ದುರ್ಘಟನೆ ನಡೆದಿದೆ.
ಶೇಖರ ಗೌಡ ಅವರ ಪುತ್ರ ಹೈಸ್ಕೂಲ್ ವಿದ್ಯಾರ್ಥಿ ಅಲ್ಲೇ ಓದಿಕೊಂಡಿದ್ದು ಈ ಘಟನೆ ನಡೆಯುವ ಕ್ಷಣಾರ್ಧದಲ್ಲಿ ಅಲ್ಲಿಂದ ಮನೆಯೊಳಗೆ ಹೋಗಿದ್ದರು. ಮನೆಯ ಮಹಿಳೆಯರು ಕೂಡಾ ಗಾಳಿ ಬೀಸುವ ಸ್ವಲ್ಪ ಹೊತ್ತಿನ ಮುಂಚೆ ಅಲ್ಲಿಂದ ಮನೆಯೊಳಗೆ ಹೋಗಿದ್ದರು. ಅದೃಷ್ಠವಶಾತ್ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದು ಭಾರೀ ದುರಂತ ತಪ್ಪಿ ಹೋಗಿದೆ. ಇವರದ್ದೇ ಕೊಟ್ಟಿಗೆಗೆ ಅಡಕೆ ಮರ ಮುರಿದು ಬಿದ್ದು ಛಾವಣಿಗೆ ಹಾನಿಯಾಗಿದೆ. ಇದರಿಂದಾಗಿ ಅಪಾರ ನಷ್ಟ ಸಂಭವಿಸಿದೆ.