ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಕಟ್ಟೆಮಜಲಿನಲ್ಲಿ ಶಿರಾಡಿ, ಧೂಮಾವತಿ ದೈವಸ್ಥಾನದ ಬಳಿ ಸಾರ್ವಜನಿಕ ರಸ್ತೆಯ ಮೇಲ್ಗಡೆ ಹಾದು ಹೋಗಿರುವ ವಿದ್ಯುತ್ ತಂತಿಗಳ ಮೇಲೆ ಮರದ ಗೆಲ್ಲುಗಳು ಅಪಾಯಕಾರಿಯಾಗಿ ಚಾಚಿಕೊಂಡಿದ್ದು, ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ಕಂಟಕಪ್ರಾಯವಾಗಿ ಪರಿಣಮಿಸಿತ್ತು. ಈ ಬಗ್ಗೆ ನೆಲ್ಯಾಡಿ ಮೆಸ್ಕಾಂ ಶಾಖೆಯ ಸಹಾಯಕ ಅಭಿಯಂತರರಿಗೆ ಈ ಭಾಗದ ಗ್ರಾಮಸ್ಥರು, ಕಾಂತಪ್ಪ ಗೌಡ ಕಟ್ಟೆಮಜಲು ಅವರ ಮುಂದಾಳತ್ವದಲ್ಲಿ ಲಿಖಿತ ಮನವಿ ಸಲ್ಲಿಸಿದ್ದರು. ಈ ಮನವಿಗೆ ಶೀಘ್ರವಾಗಿ ಸ್ಪಂದಿಸಿದ ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗಳನ್ನು ಇತ್ತೀಚೆಗೆ ತೆರವುಗೊಳಿಸಿ ಒಂದು ದಿನದ ಶ್ರಮದಾನಕ್ಕ ಅವಕಾಶವನ್ನು ಮಾಡಿಕೊಡುವ ಮೂಲಕ ಅಪಾಯಕಾರಿ ರೆಂಬೆಗಳಿಂದ ಈ ಭಾಗದಲ್ಲಿ ಸಂಚರಿಸುವವರಿಗೆ ಮುಕ್ತಿ ದೊರೆಯುವಂತೆ ಮಾಡಿದ್ದಾರೆ.

ಈ ಅಪಾಯಕಾರಿ ಮರದ ಗೆಲ್ಲುಗಳನ್ನು ತೆರವುಗೊಳಿಸುವಲ್ಲಿ ಕಟ್ಟೆಮಜಲು ಶಿರಾಡಿ ಸಹ ಪರಿವಾರ ದೈವಸ್ಥಾನದ ಚಿಂತನಾ ಚಾವಡಿಯ ಸದಸ್ಯರು, ಬೇಬಿ ಸದಾನಂದ ಗೌಡ ಕುಂಡಡ್ಕ, ಕಾಂತಪ್ಪ ಗೌಡ ಕಟ್ಟೆಮಜಲು, ಜಿನ್ನಪ್ಪ ಗೌಡ ಮುಳಿಂಗಾರು, ಮೋಹನ ಗೌಡ ಹೊನ್ನೆಜಾಲು, ಕೃಷ್ಣಪ್ಪ ಕೆ. ಕಟ್ಟೆಮಜಲು, ದಯಾನಂದ ಹಳೇಮುಂಡ್ಲ, ದಾಮೋದರನ್ ಕಟ್ಟೆಮಜಲು, ರೋಹಿತಾಶ್ವ ಕಟ್ಟೆಮಜಲು, ರಾಜೇಶ ಪುತ್ಯೆ, ಕಿರಣ್ ಮುಳಿಂಗಾರು, ಆರುಣಾ ಮುಳಿಂಗಾರು, ವಿಶ್ವನಾಥ್ ಡ್ರೈವರ್ ಹಳೇ ಮುಂಡ್ಲ ಮೊದಲಾದವರು ಸಹಕರಿಸಿದರು.