ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಮಂಡೆಗುಂಡಿ ನಿವಾಸಿ ಬಾಲಮುರಳಿಕೃಷ್ಣ ಅವರ ಕೃಷಿ ತೋಟಕ್ಕೆ ಕಳೆದ ರಾತ್ರಿ ಕಾಡಾನೆ ದಾಳಿ ನಡೆಸಿ ಬಾಳೆಗಿಡ, ನೀರಿನ ಪೈಪ್ ಲೈನ್ಗಳಿಗೆ ಹಾನಿಗೊಳಿಸಿರುವುದಾಗಿ ವರದಿಯಾಗಿದೆ.
ಅಲ್ಲದೆ ಇದೇ ಪರಿಸರದ ನಾರಾಯಣ ಬೇರಿಕೆ, ಮಹೇಶ್ ಭಟ್ ಕಂಚಿನಡ್ಕ, ರಾಮ ಎಡಪಡಿತ್ತಾಯ ಮುಂತಾದವರ ಕೃಷಿಕರ ತೋಟಗಳಲ್ಲೂ ಆನೆಗಳ ಅಟ್ಟಹಾಸ ಮುಂದುವರೆದಿದೆ. ಕಳೆದ ಒಂದು ತಿಂಗಳಿಂದ ಕೌಕ್ರಾಡಿ ಗ್ರಾಮದ ಮಂಡೆಗುಂಡಿ, ಬೇರಿಕೆ, ಕಂಚಿನಡ್ಕ, ಪಿಲತ್ತಿಂಜ ಭಾಗದಲ್ಲಿ ರಾತ್ರಿ ವೇಳೆಗೆ ಆನೆಗಳ ದಾಳಿ ಸಾಮಾನ್ಯವಾಗಿದೆ. ಇದರಿಂದ ಕೃಷಿಕರಲ್ಲಿ ಭಯದ ವಾತಾವರಣ ಉಂಟಾಗಿದೆ. ಕೃಷಿಕರು ಬೆಳೆದ ಬಾಳೆ, ತೆಂಗು ಹಾಗೂ ಅಡಿಕೆ ಕೃಷಿಗಳು ಆನೆಗಳ ದಾಳಿಗೆ ಹಾನಿಗೊಳಗಾಗುತ್ತಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಈ ಭಾಗದಲ್ಲಿ ಅರಣ್ಯ ಇಲಾಖೆ ನಿರ್ಮಿಸಿದ ಆನೆ ತಡೆ ಕಂದಕಗಳು ಕೆಲವೆಡೆ ಹಾನಿಗೊಂಡಿರುವುದರಿಂದ ಆನೆಗಳು ತೋಟಗಳತ್ತ ಸುಲಭವಾಗಿ ನುಗ್ಗುತ್ತಿವೆ. ಆನೆ ಕಂದಕಗಳನ್ನು ಶೀಘ್ರವಾಗಿ ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.