ರಾಮಕುಂಜ ಆ.ಮಾ.ಶಾಲೆಯಲ್ಲಿ ‘ತುಳು ವಿದ್ಯಾರ್ಥಿಲೆನ ಪ್ರತಿಭಾ ಕಾರಂಜಿ’

0


ತುಳು ಭಾಷೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ನಿಧಿ-ತಾರಾನಾಥ ಗಟ್ಟಿ ಕಾಪಿಕಾಡ್

ರಾಮಕುಂಜ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ನೇತ್ರಾವತಿ ತುಳುಕೂಟ ರಾಮಕುಂಜ ಇದರ ಆಶ್ರಯದಲ್ಲಿ ತುಳು ವಿದ್ಯಾರ್ಥಿಲೆನ ಪ್ರತಿಭಾ ಕಾರಂಜಿ ಹಾಗೂ ತುಳು ಕಲ್ಪಾರ್ತಿಲೆನ ರಸಮಂಟಮೆ ಕಾರ್ಯಕ್ರಮ ಜು.8ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಮ್ಮ ಬದುಕು, ಭಾಷೆ, ಸಂಸ್ಕೃತಿಯ ಬಗ್ಗೆ ಅವಲೋಕನ, ಚಿಂತನೆ ಕಡಿಮೆಯಾಗಿದೆ. ತುಳು ಸಭಾಭವನದಿಂದ ಬರುವ ಆದಾಯವನ್ನು ತುಳು ಶಿಕ್ಷಣ ಕ್ಷೇತ್ರಕ್ಕೆ ಮಿಸಲಿಟ್ಟು ತುಳು ಭಾಷೆ ಸಂಸ್ಕೃತಿ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ನಿಧಿಯನ್ನಾಗಿ ಉಪಯೋಗಿಸಲಾಗುವುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಉಪ್ಪಿನಂಗಡಿ ಗಿರಿಜಾ ದಂತ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ರಾಜಾರಾಮ್ ಕೆ.ಬಿ ಮಾತನಾಡಿ, ತುಳು ಸಾಹಿತ್ಯ ರಚನೆಯಾಗಬೇಕು. ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ನಮ್ಮ ತುಳುನಾಡಿನಲ್ಲಿ ತಾಯಿ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದು ಎಂದರು.

ನೇತ್ರಾವತಿ ತುಳುಕೂಟ ರಾಮಕುಂಜ ಇದರ ಅಧ್ಯಕ್ಷರೂ, ಶ್ರೀ ರಾಮಕುಂಜ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕಾರ್ಯದರ್ಶಿಯೂ ಆದ ಕೆ. ಸೇಸಪ್ಪ ರೈಯವರು ಮಾತನಾಡಿ, ನಮ್ಮ ಸಂಸ್ಥೆಯು ತುಳು ಭಾಷೆ ,ತುಳು ಸಂಸ್ಕೃತಿಯನ್ನು ಬೆಳೆಸುವಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇಂದು ತುಳು ಭಾಷೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ತುಳು ಭಾಷೆಯನ್ನು ಬೋಧಿಸುವ ಶಾಲೆಗಳಿಗೆ ಸೂಕ್ತ ಸೌಲಭ್ಯಗಲಿಲ್ಲದೆ ಕ್ಷೀಣಿಸುತ್ತಿದೆ. ಶಿಕ್ಷಕರಿಗೆ ಸರಿಯಾದ ಸಂಭಾವನೆ ಸಿಗುತ್ತಿಲ್ಲ. ತುಳು ಕೋಟಾದಡಿಯಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ, ತುಳು ಭಾಷೆಯನ್ನು ರಾಜ್ಯದ ೨ನೇ ಭಾಷೆಯನ್ನಾಗಿ ಮಾಡುವಲ್ಲಿ ತುಳು ಅಕಾಡೆಮಿಯು ಸರ್ಕಾರದ ಮನವೊಲಿಸಿ ಕಾರ್ಯಪ್ರವೃತ್ತವಾಗಬೇಕು. ತುಳು ಭಾಷೆ, ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಪಸರಿಸುವ ಕೆಲಸವಾಗಬೇಕೆಂದು ಹೇಳಿದರು.

ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬಿ.ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಿರೀಶ್ ಎ.ಪಿ, ಜೊತೆ ಕಾರ್ಯದರ್ಶಿ ಅನಿತಾ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಗಾಯತ್ರಿ ಯು.ಎನ್.ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಲೋಹಿತಾ ಎ ವಂದಿಸಿದರು. ಸಹ ಶಿಕ್ಷಕಿಯರಾದ ಸರಿತಾ ಮತ್ತು ಸಂಚಿತ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ ರಾಮಜಾಲು ಹಾಗೂ ಶಿಕ್ಷಕರು, ಶಿಕ್ಷಕೇತರರು ಸಹಕರಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು.

LEAVE A REPLY

Please enter your comment!
Please enter your name here