ನರೇಂದ್ರ ಪ.ಪೂ.ಕಾಲೇಜಿನಲ್ಲಿ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್‍ಯಕ್ರಮ

0

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ-ಪ್ರತಿಭಾ ಪುರಸ್ಕಾರ

ಪುತ್ತೂರು: ವಿದ್ಯಾರ್ಥಿ ಸಂಘಗಳು ವಿದ್ಯಾರ್ಥಿಗಳಿಗೆ ನಾಯಕತ್ವದ ಕೌಶಲ್ಯಗಳನ್ನು ಬೆಳೆಸಲು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡಲು ವೇದಿಕೆಯನ್ನು ಒದಗಿಸುತ್ತವೆ. ಸಮುದಾಯ ಸೇವಾ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಸಮಾಜಮುಖಿ ಮನೋಭಾವನೆಯನ್ನು ಬೆಳೆಸುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಘಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅಗತ್ಯವಾದ ವೇದಿಕೆ ಮತ್ತು ಅವಕಾಶಗಳನ್ನು ಒದಗಿಸುತ್ತವೆ ಎಂದು ನರೇಂದ್ರ ಪ.ಪೂ.ಕಾಲೇಜಿನ ಕುರಿಯ ಗ್ರಾಮ ವಿಕಾಸ ಸಮಿತಿಯ ಗೌರವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಯವರು ಹೇಳಿದರು.


ನರೇಂದ್ರ ಪ.ಪೂ.ಕಾಲೇಜಿನಲ್ಲಿ 2025-26ನೇ ಸಾಲಿನ ನೂತನ ವಿದ್ಯಾರ್ಥಿ ಸಂಘವನ್ನು ಮತ್ತು ವಾಣಿಜ್ಯ,ವಿಜ್ಞಾನ,ಸಾಹಿತ್ಯ ಸಂಘವನ್ನು, ಇಕೋ ಕ್ಲಬ್, ಐಟಿ ಕ್ಲಬ್ ನ್ನು ಉದ್ಘಾಟಿಸಿ ಅವರು ಮಾತನಾಡಿದರು.ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅವರು ಶುಭ ಹಾರೈಸಿದರು.
ಶಾರೀರಿಕ ಮತ್ತು ಮಾನಸಿಕ,ಬೌದ್ಧಿಕ,ಭಾವನಾತ್ಮಕ ಮತ್ತು ನೈತಿಕ ಬೆಳವಣಿಗೆಯ ಜೊತೆಗೆ ಕ್ರಿಯಾಶೀಲತೆಯನ್ನು ಹೆಚ್ಚಿಸಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಈ ವಿದ್ಯಾರ್ಥಿ ಸಂಘ ಒಂದು ವೇದಿಕೆಯಾಗಿದೆ.ಹೊಸ ಚೈತನ್ಯ ತುಂಬಿ ಸಾಮಾಜಿಕ ಸೇವಾ ಮನೋಭಾವವನ್ನು ಬೆಳೆಸಲು ಹಾಗೂ ದೇಶಾಭಿಮಾನ, ದೇಶಪ್ರೇಮ, ರೂಡಿಸಿಕೊಳ್ಳಲು ಇಂತಹ ವಿದ್ಯಾರ್ಥಿ ಸಂಘವು ಸಹಕಾರಿಯಾಗಿರುತ್ತದೆ.ಎಂದು ಹೇಳಿದರು.


ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸ್ವರ್ಣೋದ್ಯಮಿ, ಜಿ.ಎಲ್. ಗ್ರೂಪ್ ಆಫ್ ಕಂಪೆನೀಸ್ ಇದರ ಅದ್ಯಕ್ಷರಾದ ಮತ್ತು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ ರವರು ಮಾತನಾಡುತ್ತಾ, ಜೀವನದಲ್ಲಿ ವಿದ್ಯಾರ್ಥಿಗಳು ಕಲಿಕೆಯ ಗುಣಮಟ್ಟವನ್ನು ವೃದ್ಧಿಸಿ ಏಕತೆಯಿಂದ ಒಗ್ಗೂಡಿಕೊಂಡು ನಿರಂತರ ಪರಿಶ್ರಮದಿಂದ ಸಾಧಿಸಬೇಕಾದ ಅನಿವಾರ್‍ಯತೆಯಿದೆ. ಸಮಾಜಕ್ಕೆ ಸಹಕಾರಿಯಾಗುವಂತಹ ಶಿಕ್ಷಣವು ವಿದ್ಯಾರ್ಥಿಗಳಿಗೆ ಸಿಗಬೇಕಿದೆ.ವಿದ್ಯಾಸಂಸ್ಥೆ ಅಂದರೆ ಅಲ್ಲಿ ಶಿಸ್ತಿಗೆ ಪ್ರಮುಖ ಆದ್ಯತೆ.ಅಲ್ಲಿನ ನೀತಿ ,ನಿಯಮಗಳಿಗೆ ಬದ್ಧರಾಗಿರಬೇಕು .ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಅನುಶಾಸನ ತುಂಬಾ ಮುಖ್ಯ .ನಮ್ಮ ಜೀವನಕ್ರಮ ಸರಿಯಾದ ರೀತಿಯಲ್ಲಿದ್ದರೆ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಘವು ಹೆಜ್ಜೆ ಹಾಕಬೇಕು. ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಎನ್ನುವುದು ಒಂದು ಪ್ರಯಾಣ. ಸ್ಪಷ್ಟ ಗುರಿಗಳನ್ನು ಹೊಂದಿಸುವ ಮೂಲಕ, ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ, ಕಲಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮತ್ತು ಬೆಳವಣಿಗೆಯ ಮನಸ್ಥಿತಿಯನ್ನು ಅಳವಡಿಸಿಕೊಳ್ಳುವ ಮೂಲಕ, ವಿದ್ಯಾರ್ಥಿಗಳು ಉಜ್ವಲ ಭವಿಷಕ್ಕೆ ದಾರಿ ಮಾಡಿಕೊಡಬಹುದು ಎಂದು ಹೇಳಿದರು.


2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ನರೇಂದ್ರ ಪ.ಪೂ.ಕಾಲೇಜಿನ ಕುರಿಯ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷರಾದ ರವೀಂದ್ರನಾಥ ರೈ ಬಳ್ಳಮಜಲು ರವರು ಮಾತನಾಡುತ್ತಾ, ಕರ್ತವ್ಯ ಪ್ರಜ್ಞೆಯೊಂದಿಗೆ ಛಲವನ್ನು ಹೊಂದಿ ಕನಸು ಈಡೇರಿಸುವ ಜವಾಬ್ದಾರಿ ಹೊಂದಬೇಕು.ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯ ಜೊತೆಗೆ ಬದುಕಿಗೆ ಆಸರೆಯಾಗುವ ಉನ್ನತ ಶಿಕ್ಷಣವನ್ನು ಪಡೆದು ಸಮುದಾಯದ ಏಳಿಗೆಗಾಗಿ ಸಹಕಾರಿಯಾಗಬೇಕಿದೆ.ಸೋಲು ಗೆಲುವು ಶಾಶ್ವತವಲ್ಲ ಎಂಬ ಸತ್ಯದ ಅರಿವಿನೊಡನೆ ಮುನ್ನಡೆಯಿರಿ.ಅವಕಾಶಗಳನ್ನು ಉತ್ತಮ ಅಭಿಲಾಷೆಯೊಂದಿಗೆ ನಿಮ್ಮದಾಗಿಸಿಕೊಳ್ಳಿ ಮತ್ತು ಈ ದೇಶದ ಉತ್ತಮ ನಾಗರಿಕರಾಗಿ ಬಾಳಿಎಂದು ಹೇಳಿದರು.


ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ,ರಾಷ್ಟ್ರೀಯ ಭಾವೈಕ್ಯತೆಯ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಉದ್ದೀಪನಗೊಳಿಸುವುದರ ಜೊತೆಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ದಿಟ್ಟವಾಗಿಎದುರಿಸಲು ಈ ರೀತಿಯ ವಿದ್ಯಾರ್ಥಿ ಸಂಘವು ವೇದಿಕೆಯನ್ನು ಕಲ್ಪಿಸುತ್ತದೆ. ವಿದ್ಯಾರ್ಥಿ ಜೀವನವು ಅವಕಾಶಗಳು, ಬೆಳವಣಿಗೆ ಮತ್ತು ಉಜ್ವಲ ಭವಿಷವನ್ನುರೂಪಿಸುವ ಸಾಮರ್ಥ್ಯದಿಂದ ತುಂಬಿರುವ ಒಂದು ಗಮನಾರ್ಹ ಹಂತವಾಗಿದೆ.ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಪಡೆಯಲು, ಶಿಸ್ತು, ಸ್ಪಷ್ಟ ಗುರಿಗಳು, ಮತ್ತು ಸಕಾರಾತ್ಮಕ ಮನೋಭಾವ ಮುಖ್ಯ. ಶೈಕ್ಷಣಿಕ ಸಾಧನೆ ಜೊತೆಗೆ ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಸಹ ಅಷ್ಟೇ ಮುಖ್ಯ. ಪಿಯುಸಿ ಎನ್ನುವುದು ವಿದ್ಯಾರ್ಥಿಗಳ ಜೀವನದ ಪ್ರಮುಖ ತಿರುವಿನ ಘಟ್ಟ.ಇಲ್ಲಿ ಯಶಸ್ಸು ಸಾಧಿಸಿದರೆ ಮುಂದೆ ಸುಲಭವಾಗಿ ಗುರಿ ಮುಟ್ಟಬಹುದು ಎಂದು ಹೇಳಿದರು.


ವೇದಿಕೆಯಲ್ಲಿ ನರೇಂದ್ರ ಪ.ಪೂ.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ, ವಿದ್ಯಾರ್ಥಿ ಸಂಘದ ನಾಯಕ ದ್ವಿತೀಯ ವಾಣಿಜ್ಯ ವಿಭಾಗದ ಅಭಿಷೇಕ್ ಹರ್ಷ ಪಿ.ಜೆ., ಕಾರ್‍ಯದರ್ಶಿ ದ್ವಿತೀಯ ವಿಜ್ಞಾನ ವಿಭಾಗದ ಸನಿಕ ಪಿ.ರೈ., ಜೊತೆ ಕಾರ್‍ಯದರ್ಶಿ ಪ್ರಥಮ ವಿಜ್ಞಾನ ವಿಭಾಗದ ಸಿಂಧು, ಕ್ರೀಡಾ ಸಂಘದ ಅಧ್ಯಕ್ಷ ದ್ವಿತೀಯ ವಾಣಿಜ್ಯ ವಿಭಾಗದ ಸಾತ್ವಿಕ್ ಹೆಚ್.ಕೆ. ಮತ್ತು ಕಾರ್‍ಯದರ್ಶಿ ದ್ವಿತೀಯ ವಿಜ್ಞಾನ ವಿಭಾಗದ ಪ್ರತೀಕ್ಷ ಉಪಸ್ಥಿತರಿದ್ದರು.


ಕಾರ್‍ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಮೋಹಿನಿ ದಿವಾಕರ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ದೀಪಾ ನಾಯಕ್, ಉಪಾಧ್ಯಕ್ಷ ಕಾಂತಿ ಶ್ಯಾಮ್ ಭಾಗವಹಿಸಿದ್ದರು.ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಬೋಧಿಸಿದರು. ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳು ಕಾಲೇಜಿನ ನಿಯಮಗಳಿಗೆ ಶಾಸನಗಳಿಗೆ ಬದ್ಧರಾಗಿ ಪಾಲನೆ ಮಾಡುತ್ತೇವೆ ಮತ್ತು ಕಾಲೇಜಿನ ಅಭಿವೃದ್ಧಿಗಾಗಿ ಪ್ರಗತಿಗಾಗಿ ಶ್ರಮಿಸುತ್ತೇವೆ ಎಂದು ಪ್ರತಿಜ್ಞೆಯನ್ನು ಮಾಡಿದರು.


ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನೂ ಅಭಿನಂದಿಸಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳ ವಿವರಗಳನ್ನು ಉಪನ್ಯಾಸಕಿ ರುಚಿತಾ ಕೃಷ್ಣ ನೀಡಿದರು.


ಅಭಿನಂದನೆಗೆ ಪಾತ್ರರಾದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಪೋಷಕರು,ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಬೆಂಬಲದಿಂದ ಮತ್ತು ಸತತ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು ಎಂದು ಹೇಳಿದರು. ಕಾರ್‍ಯಕ್ರಮದಲ್ಲಿ ದ್ವಿತೀಯ ವಿಜ್ಞಾನ ವಿಬಾಗದ ಸನಿಕ ಪಿ.ರೈ ವಂದಿಸಿದರು.ದ್ವಿತೀಯ ವಾಣಿಜ್ಯ ವಿಭಾಗದ ಸಿಂಧು ಸರಳಾಯ ಮತ್ತು ಪ್ರಥಮ ವಿಜ್ಞಾನ ವಿಭಾಗದ ವಿಧಿಶಾ ಕಾರ್‍ಯಕ್ರಮವನ್ನು ನಿರೂಪಿಸಿದರು.


LEAVE A REPLY

Please enter your comment!
Please enter your name here