ನೆಲ್ಯಾಡಿ: ಈಗಿರುವ ನೆಲ್ಯಾಡಿ ಹೊರಠಾಣೆಯನ್ನು ಪೂರ್ಣಪ್ರಮಾಣದ ಹೊಸ ಠಾಣೆಯನ್ನಾಗಿ ಪರಿವರ್ತಿಸುವಂತೆ ಗ್ಯಾರಂಟಿ ಅನುಷ್ಠಾನ ಕಡಬ ತಾಲೂಕು ಸಮಿತಿ ಸದಸ್ಯೆ ಹಾಗೂ ತಾ.ಪಂ.ಮಾಜಿ ಸದಸ್ಯೆಯೂ ಆದ ಉಷಾ ಅಂಚನ್ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ.
ನೆಲ್ಯಾಡಿ ಪ್ರದೇಶವು ಅತೀ ಹೆಚ್ಚು ಜನಸಂಖ್ಯೆ ಹೊಂದಿದ್ದು, ಕಂದಾಯ, ಪೊಲೀಸ್ ಇಲಾಖೆ ಸಹಿತ ಇತರೇ ಸರಕಾರಿ ಕಚೇರಿಗಳು ದೂರದ ಊರಿನಲ್ಲಿರುವುದರಿಂದ ಇಲ್ಲಿನ ಜನರು ಎಲ್ಲಾ ರೀತಿಯಲ್ಲೂ ವಂಚಿತರಾಗಿದ್ದಾರೆ. ಈ ಹಿಂದೆ ಶಿರಾಡಿಯಲ್ಲಿ ಹೊರಠಾಣೆ ಇದ್ದು ಪ್ರಸ್ತುತ ಇದು ನೆಲ್ಯಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದ್ರಿ ಹೊರಠಾಣೆಯ ಸರಹದ್ದು ತುಂಬಾ ವಿಸ್ತಾರವಾಗಿದೆ. ಸದ್ರಿ ಹೊರಠಾಣೆಯ ಸರಹದ್ದಿನಲ್ಲಿ 45 ಕಿ.ಮೀ.ರಾಷ್ಟ್ರೀಯ ಹೆದ್ದಾರಿ 75 ಹಾದು ಹೋಗುತ್ತಿದೆ.
ಪ್ರಮುಖ ದೇವಸ್ಥಾನಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗುವವರು, ಪ್ರವಾಸಿಗರು, ಸರಕು ಸಾಗಣೆಯ ವಾಹನಗಳು, ತುರ್ತು ಸೇವೆಗಳಿಗೆ ಹೋಗುವವರು ಅಪಘಾತ ಹಾಗೂ ಇನ್ನಿತರ ಸಮಸ್ಯೆ ಬಂದಾಗ ದೂರದ ಉಪ್ಪಿನಂಗಡಿ ಹಾಗೂ ಧರ್ಮಸ್ಥಳ ಠಾಣೆಗೆ ಹೋಗುವ ಅನಿವಾರ್ಯತೆ ಇದೆ.
ನೆಲ್ಯಾಡಿ ಹೊರಠಾಣೆಯು ಭೌಗೋಳಿಕವಾಗಿ 7 ಗ್ರಾಮಗಳನ್ನು ಹೊಂದಿದ್ದು ಇಲ್ಲಿನ ಸಾರ್ವಜನಿಕರು ಇಲಾಖೆಯ ಸೇವೆ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಶಿರಾಡಿ ಘಾಟಿಯು ತಪ್ಪಲಿನಲ್ಲಿರುವ ಭೂ ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ರಸ್ತೆ ಕುಸಿತ ಹಾಗೂ ಇನ್ನಿತರ ಅಪಘಾತ ಸಂಭವಿಸುವುದರಿಂದ ದೂರದ ಠಾಣೆಗಳಿಂದ ಬರುವಷ್ಟರಲ್ಲಿ ಸಮಸ್ಯೆ ಬಿಗಡಾಯಿಸುತ್ತಿದೆ. ಆದ್ದರಿಂದ ನೆಲ್ಯಾಡಿಯಲ್ಲಿರುವ ಹೊರ ಠಾಣೆಯನ್ನು ಪೂರ್ಣ ಪ್ರಮಾಣದ ಹೊಸ ಠಾಣೆಯನ್ನಾಗಿ ಪರಿವರ್ತಿಸಿ ಜನತೆಗೆ ಮೂಲ ಸೌಕರ್ಯಗಳಲ್ಲಿ ಒಂದಾದ ಪೊಲೀಸ್ ಸೇವೆಯನ್ನು ಒದಗಿಸುವಂತೆ ಗೃಹ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ ವರ್ಗೀಸ್, ಸರ್ವೋತ್ತಮ ಗೌಡ, ಶಿರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ ಪೌಲೋಸ್ ಮೊದಲಾದವರು ಉಪಸ್ಥಿತರಿದ್ದರು.