ಸಂತ ಫಿಲೋಮಿನಾ ಕಾಲೇಜಿನ ನೂತನ ಪ್ರಾಧ್ಯಾಪಕರಿಗೆ ಫ್ಯಾಕಲ್ಟಿ ಇಂಡಕ್ಷನ್ ಪ್ರೋಗ್ರಾಂ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ನೇಮಕಗೊಂಡ ಪ್ರಾಧ್ಯಾಪಕರುಗಳಿಗೆ ಫ್ಯಾಕಲ್ಟಿ ಇಂಡಕ್ಷನ್ ಪ್ರೋಗ್ರಾಂ ಆಯೋಜಿಸಲಾಯಿತು. ಕಾಲೇಜಿನ ಉಪಪ್ರಾಂಶುಪಾಲ ಡಾ| ವಿಜಯಕುಮಾರ್ ಎಂ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಧ್ಯಾಪನ ಸಜೀವ ಸೃಜನಶೀಲ ಪ್ರಕ್ರಿಯೆ. ನಿರಂತರ ಅಧ್ಯಯನವು ಅಧ್ಯಾಪನದ ಅವಿಭಾಜ್ಯ ಅಂಗ. ಅಧ್ಯಾಪಕನಾದವನು ತನ್ನ ಪಾಠಪ್ರವಚನಗಳ ಜೊತೆಗೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಬೇಕು. ಮಾಡುವ ಕೆಲಸದಮೇಲೆ ಅತ್ಯಂತ ಪ್ರೀತಿ ಹಾಗೂ ಗೌರವಗಳನ್ನಿರಿಸಿಕೊಂಡಲ್ಲಿ ಉತ್ತಮ ಶಿಕ್ಷಕರೆನಿಸಿಕೊಳ್ಳಬಹುದು ಎಂದರು. ಜಗತ್ತು ತ್ವರಿತವಾಗಿ ಬದಲಾಗುತ್ತಿದೆ. ಹೊಸ ತಂತ್ರಜ್ಞಾನಗಳು ಬರುತ್ತಿವೆ, ಬೋಧನಾ ವಿಧಾನಗಳು ಹೊಸರೂಪ ಪಡೆಯುತ್ತಿವೆ, ಮತ್ತು ವಿದ್ಯಾರ್ಥಿಗಳ ಅಗತ್ಯಗಳು ತೀರ ವಿಭಿನ್ನವಾಗುತ್ತಿವೆ. ಈ ಬದಲಾವಣೆಗೆ ಸಜ್ಜಾಗಬೇಕಾದದ್ದು ನಮ್ಮೆಲ್ಲರ ಹೊಣೆಗಾರಿಕೆ. ನಾವು ಕಲಿಯುವಿಕೆ ನಿಲ್ಲಿಸಿದ ಕ್ಷಣದಿಂದಲೇ ನಮ್ಮ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ ಎಂದು ಹೇಳಿದರು.


ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀರಾಗಾ ಪ್ರಾರ್ಧಿಸಿ ಸ್ಟಾಫ್ ಡೆವಲಪ್‌ಮೆಂಟ್ ಮತ್ತು ಅಪ್ರೈಸಲ್ ಸೆಲ್‌ನ ಸಂಯೋಜಕರೂ ಐಕ್ಯುಎಸಿ ಸಂಯೋಜಕರೂ ಆಗಿರುವ ಎಡ್ವಿನ್ ಡಿಸೋಜ ಸ್ವಾಗತಿಸಿ ವಂದಿಸಿದರು. ಕಾಲೇಜಿನ ಸ್ಟಾಫ್ ಡೆವಲಪ್ಮೆಂಟ್ ಮತ್ತು ಅಪ್ರೈಸಲ್ ಸೆಲ್‌ನ ಸದಸ್ಯೆ ಸುರಕ್ಷಾ ಎಸ್. ಕಾರ್ಯಕ್ರಮ ನಿರೂಪಿಸಿದರು. 2025-26ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ನೂತನವಾಗಿ ಸೇರ್ಪಡೆಗೊಂಡ ಪ್ರಾಧ್ಯಾಪಕರು ಪಾಲ್ಗೊಂಡರು. ಐದು ದಿನಗಳ ಕಾಲ ನಡೆಯುವ ಈ ಸರಣಿ ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರುಗಳು ತರಗತಿ ನಿರ್ವಹಣೆ, ಸಂಶೋಧನೆ ಮುಂತಾದ ವಿಷಯಗಳಲ್ಲಿ ಉಪನ್ಯಾಸ ಹಾಗೂ ಡಿಜಿಟಲ್ ಅಧ್ಯಯನ ಸಾಮಾಗ್ರಿ ರಚನೆ ಮುಂತಾದ ವಿಷಯಗಳಲ್ಲಿ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

LEAVE A REPLY

Please enter your comment!
Please enter your name here