ಸವಣೂರು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೂಡಿ ಬಂತು ಯೋಗ

0

ವಿಸ್ತೃತ ಯೋಜನಾ ವರದಿಗೆ ಅನುಮೋದನೆ- ಶ್ರೀಘ್ರ ಟೆಂಡರ್ ಪ್ರಕ್ರಿಯೆ


ವರದಿ- ಉಮಾಪ್ರಸಾದ್ ನಡುಬೈಲು


ಪುತ್ತೂರು: ಮಂಗಳೂರು- ಬೆಂಗಳೂರು ರೈಲು ಮಾರ್ಗದ ಮಧ್ಯೆ ಸವಣೂರು ಎಂಬಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೇ ಇಲಾಖೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ಅನುಮೋದಿಸಿದೆ. ಶ್ರೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಐದು ತಿಂಗಳ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳುವ ಭರವಸೆ ದೊರೆತಿದೆ.


ಸಾಮಾಜಿಕ ಕಾಯಕರ್ತ ಉಮೇಶ್ ಕುಮಾರಮಂಗಲ ಬೇರಿಕೆ ಎಂಬವರು ಮಾಹಿತಿ ಹಕ್ಕಿನಲ್ಲಿ ರೈಲೈ ಮೇಲ್ಸೇತುವೆ ನಿರ್ಮಾಣದ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರ ದೊರೆತಿದೆ. ಸವಣೂರು ಎಂಬುದು ಬೆಳೆಯುತ್ತಿರುವ ಪುಟ್ಟ ನಗರ. ಸವಣೂರು-ಬೆಳ್ಳಾರೆ ರಸ್ತೆಯಲ್ಲಿ ಬರುವ ರೈಲು ಸವಣೂರು ರೈಲ್ವೆ ಗೇಟ್‌ನಲ್ಲಿ ರೈಲು ಆಗಮಿಸುವಾಗ ಗೇಟ್ ಹಾಕುತ್ತಾರೆ. ಸುಮಾರು 10 ರಿಂದ 15 ನಿಮಿಷ ಗೇಟ್ ಹಾಕಲಾಗುತ್ತದೆ. ರೈಲು ಮತ್ತು ಗೂಡ್ಸ್ ರೈಲು ಪ್ರತಿ ದಿನ ಸುಮಾರು 20 ಬಾರಿ ಸಂಚರಿಸುತ್ತದೆ. ಅಂದಾಜು ಪ್ರಕಾರ ದಿನವೊಂದಕ್ಕೆ 300 ನಿಮಿಷದಷ್ಟು ಸಮಯ ರೈಲು ಗೇಟ್ ಹಾಕುವ ಪರಿಸ್ಥಿತಿ ಇರುವುದರಿಂದ ವಾಹನ ಸವಾರರು ಕಾಯುವ ದೀರ್ಘಕಾಲದ ಸಮಸ್ಯೆ ಜೀವಂತವಾಗಿದೆ.
ಪದೇ ಪದೇ ರೈಲುಗಳು ಹಾದು ಹೋಗುವುದರಿಂದ ಗೇಟ್‌ನಲ್ಲಿ ದೀರ್ಘ ಕಾಲ ಕಾಯಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಸ್ಥಳೀಯ ಸರಕಾರಿ ಶಾಲೆಗಳು ಮತ್ತು ಕಾಲೇಜ್‌ಗಳು, ವಿದ್ಯಾರಶ್ಮಿ ವಿದ್ಯಾಲಯ ಮತ್ತು ಕಾಲೇಜ್, ಪುತ್ತೂರಿನ ವಿವೇಕಾನಂದ, ಸಂತ ಫಿಲೋಮಿನಾ ಕಾಲೇಜ್ ಹಾಗೂ ಸರಕಾರಿ ಆಸ್ಪತ್ರೆಗಳು, ಕ್ಯಾಂಪ್ಕೋ, ಬಿಂದು ಸಂಸ್ಥೆ, ತಾಲೂಕು ನಾಡಕಚೇರಿ ಕಡಬ ಮತ್ತು ಪುತ್ತೂರು ಮತ್ತು ಇತರ ಕೆಲಸದ ಸ್ಥಳಗಳಿಗೆ ಹೋಗುವ ವಾಹನಗಳಿಗೆ ಪೀಕ್ ಆವರ್ಸನಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ.
ಇಲ್ಲಿ ಮೇಲ್ಸೇತುವೆ ನಿಮಾಣ ಮಾಡಬೇಕೆನ್ನುವ ಬೇಡಿಕೆ ಕೂಡ ನಿರಂತರವಾಗಿ ಕೇಳಿಬರುತ್ತಿದೆ. ಈ ಬಗ್ಗೆ ಅಂದಿನ ಕೇಂದ್ರ ಸಚಿವರಾದ ವಿ.ಧನಂಜಯ ಕುಮಾರ್, ಡಿ.ವಿ.ಸದಾನಂದ ಗೌಡ, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ಅವರಿಗೆ ಮನಿ ಸಲ್ಲಿಸಿರುವ ಪರಿಣಾಮ ಅವರು ಸ್ಥಳ ಪರಿಶೀಲಿಸಿ, ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಸವಣೂರು-ಬೆಳ್ಳಾರೆ ರಸ್ತೆ ರಾಜ್ಯ ಹೆದ್ದಾರೆಯಾಗಿ ಮಾರ್ಪಟ್ಟಿರುವುದರಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಕಾಲ ಸನ್ನಿಹಿತವಾಗಿದೆ ಎಂದು ಹೇಳಲಾಗಿದೆ. ಇಷ್ಟಾದರೂ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ ಎನ್ನುವ ಕಾಳಜಿಯಿಂದ ಸವಣೂರಿನ ನಿವಾಸಿಯಾಗಿರುವ ಉಮೇಶ್ ಕುಮಾರಮಂಗಲ ಬೇರಿಕೆ ಅವರು ಈ ಗೇಟ್‌ನಲ್ಲಿನ ಪ್ರಸ್ತುತ ಟ್ರಾಫಿಕ್ ಮಾದರಿಗಳನ್ನು ಕೂಲಂಕುಷವಾಗಿ ಪರಿಶೀಲಿಸುವಂತೆ ಮತ್ತು ಮೇಲ್ಸೇತುವೆ ಅಥವಾ ಕೆಳಸೇತುವೆಯಂತಹ ಪರ್ಯಾಯ ಮೂಲಸೌಕರ್ಯ ಆಯ್ಕೆಗಳನ್ನು ಪರಿಗಣಿಸುವ ಮೂಲಕ ವಿಳಂಬವನ್ನು ಕಡಿಮೆ ಮಾಡಲು ಸಂಭ್ಯಾವ್ಯ ಪರಿಹಾರಗಳನ್ನು ಅನ್ವೇಷಿಸುವಂತೆ ಈಗಾಗಲೇ ತಾವುಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಮಾಹಿತಿ ಹಕ್ಕಿನಲ್ಲಿ ರೈಲ್ವೇ ಅಧಿಕಾರಿಗಳನ್ನು ಕೇಳಿದ್ದರು. ಪತ್ರವನ್ನು ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದ ಕ್ಯಾ. ಬ್ರಿಜೇಶ್ ಚೌಟ, ರೈಲ್ವೆ ಅಧಿಕಾರಿಗಳಿಗೆ ರವಾನಿಸಿದ್ದರು.

ಸವಣೂರು ಭಾಗದ ಜನರಿಗೆ ಸಂತಸ
ರೈಲೈ ಅಧಿಕಾರಿಗಳು ಸವಣೂರು- ಬೆಳ್ಳಾರೆ ರಸ್ತೆ ರೈಲ್ವೇ ಲೆವಲ್ ಕ್ರಾಸಿಂಗ್ ನಲ್ಲಿ ಕೆಳಸೇತುವೆ ನಿರ್ಮಿಸಲು ಸಾಧ್ಯವಿಲ್ಲ, ಆದಾಗ್ಯೂ ರಸ್ತೆ ಮೇಲ್ಸೇತುವೆ ಕಾರ‍್ಯ ಸಾಧ್ಯತೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿ, ಕಳೆದ ಮೇ.30ರಂದು ಸ್ಥಳ ಪರಿಶೀಲಿಸುವುದಾಗಿ ಹೇಳಿಕೊಂಡಿದ್ದರು. ಸ್ಥಳ ಪರಿಶೀಲಿಸಿದ ಬಳಿಕ ಏನೇನು ಬೆಳವಣಿಗೆ ನಡೆದಿದೆ ಎಂದು ಮತ್ತೆ ಉಮೇಶ್ ಬೇರಿಕೆ ಕುಮಾರಮಂಗಲ ಅವರು ಮಾಹಿತಿ ಹಕ್ಕಿನಲ್ಲಿ ಕೇಳಿದ ಪ್ರಶ್ನೆಗೆ ಈಗ ಭರವಸೆಯ ಉತ್ತರ ದೊರೆತಿದೆ. ರೈಲ್ವೇ ಮೈಸೂರು ವಿಭಾಗದ ಹಿರಿಯ ವಿಭಾಗೀಯ ಎಂಜಿನಿಯರ್ ಬಿ.ಶ್ರೀಹರಿ ಅವರು ಮೇಲ್ಸೇತುವೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರ ನೀಡಿದ್ದಾರೆ. ಇಲಾಖೆ ಮೂಲದ ಪ್ರಕಾರ ಶ್ರೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಮುಗಿದು ಐದು ತಿಂಗಳ ಬಳಿಕ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಅಂತೂ ಸವಣೂರಿನಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ ಎಂದು ಸವಣೂರು ಭಾಗದ ಜನರು ಸಂತಸ ಪಡುತ್ತಿದ್ದಾರೆ.

ಸವಣೂರಿನ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಿಸಬೇಕೆನ್ನುವ ಬೇಡಿಕೆ ಹಳೆಯದ್ದು. ಬೇಡಿಕೆಯ ಬಗ್ಗೆ ಮೈಸೂರು ವಿಭಾಗೀಯ ರೈಲ್ವೆ ಅಧಿಕಾರಿಗಳಲ್ಲಿ ವಿಚಾರಿಸಿದರೆ, ಅಲ್ಲಿ ಯಾವುದೇ ಪ್ರಕ್ರಿಯೆಗಳ ನಡೆದ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಮೇ.30 ಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದರು. ಮತ್ತೇ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಆಶಾದಾಯಕವಾದ ಭರವಸೆ ದೊರೆತಿದೆ. ಆ ಮೂಲಕ ಹಲವು ವರ್ಷಗಳ ಬೇಡಿಕೆಗೆ ಮನ್ನಣೆ ದೊರೆತಂತಾಗಿದೆ.
– ಉಮೇಶ್ ಕುಮಾರಮಂಗಲ ಬೇರಿಕೆ

– ಉಮೇಶ್ ಕುಮಾರಮಂಗಲ ಬೇರಿಕೆ

ಮೇಲ್ಸೇತುವೆ ನಿರ್ಮಾಣದ ಬಗ್ಗೆ ಅಧಿಕಾರಿಗಳು ನೀಡಿರುವ ಉತ್ತರ ಸಮಾಧಾನ ತಂದಿದೆ. ಹಲವು ಬಾರಿ ಮನವಿ ಸಲ್ಲಿಸಿ, ಎರಡೆರಡು ಬಾರಿ ಸಮೀಕ್ಷೇ ನಡೆದರೂ, ವಿಳಂಬ ನೀತಿಯಿಂದಾಗಿ ಮೇಲ್ಸೇತುವೆ ನಿರ್ಮಾಣವಾಗಿರಲಿಲ್ಲ. ಅಧಿಕಾರಿಗಳ ಭರವಸೆಯಂತೆ ಶ್ರೀಘ್ರ ಟೆಂಡರ್ ಪ್ರಕ್ರಿಯೆ ನಡೆದರೆ ಜನರಿಗೆ ತುಂಬಾ ಅನುಕೂಲವಾಗಲಿದೆ.
ರಾಮಕೃಷ್ಣ ಪ್ರಭು ಸವಣೂರು, ಸಾಮಾಜಿಕ ಮುಂದಾಳು

ರಾಮಕೃಷ್ಣ ಪ್ರಭು ಸವಣೂರು ,ಸಾಮಾಜಿಕ ಮುಂದಾಳು

LEAVE A REPLY

Please enter your comment!
Please enter your name here