ರಾಮಕುಂಜ: ತುಳು ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸಮಾರೋಪ

0

ತುಳು ಸಾಹಿತ್ಯ ಅಕಾಡೆಮಿಯಿಂದ ತುಳು ಶಿಕ್ಷಕರಿಗೆ ಪ್ರೋತ್ಸಾಹ: ದುರ್ಗಾಪ್ರಸಾದ್ ರೈ

ರಾಮಕುಂಜ: ತುಳು ಭಾಷೆ ಮಾತನಾಡಿ ಬಹುಮಾನ ಪಡೆಯುವ ನಾವೇ ಭಾಗ್ಯವಂತರು. ತುಳು ನಾಶವಾಗಿಲ್ಲ ಜೀವಂತವಾಗಿದೆ. ತುಳು ಸಾಹಿತ್ಯ ಅಕಾಡೆಮಿಯು ತುಳು ಭಾಷೆ ಬೋಧನೆ ಮಾಡುವ ಶಿಕ್ಷಕರಿಗೆ ಧನ ಸಹಾಯ ಕೊಡುವ ದೃಷ್ಟಿಕೋನವನ್ನು ಇಟ್ಟುಕೊಂಡು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರಾ ದುರ್ಗಾಪ್ರಸಾದ್ ರೈ ಹೇಳಿದರು.


ಅವರು ಜು.8ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ಮತ್ತು ನೇತ್ರಾವತಿ ತುಳುಕೂಟ ರಾಮಕುಂಜ ಇವರ ಆಶ್ರಯದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ನಡೆದ ತುಳು ವಿದ್ಯಾರ್ಥಿಲೆನ ಪ್ರತಿಭಾ ಕಾರಂಜಿ (ತುಳು ಕಲ್ಪಾರ್ತಿಲೆನ ರಸ ಮಂಟಮೆ)ಯ ಸಮರೋಪ ಸಮಾರಂಭದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ತುಳು ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಒಂದಾಗಿ ದುಡಿಯಬೇಕು. ಮುಂದಿನ ದಿನಗಳಲ್ಲಿ ರಾಜ್ಯದ 100 ಶಾಲೆಗಳಲ್ಲಿ ತುಳು ಭಾಷೆ ಕಲಿಕೆ ಆರಂಭವಾಗಬೇಕು ಎಂದರು.


ಮುಖ್ಯ ಅತಿಥಿಯಾಗಿದ್ದ ಆಕಾಶವಾಣಿ ಕುಡ್ಲ ಇದರ ನಿವೃತ್ತ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಮಾತನಾಡಿ, ಪಶ್ಚಿಮದ ನೇತ್ರಾವತಿಯಿಂದ ದಕ್ಷಿಣದ ಚಂದ್ರಗಿರಿಯವರೆಗೆ ತುಳುನಾಡು ಪ್ರದೇಶ ಹಬ್ಬಿದೆ. ಯಾರು ತುಳುನಾಡಿಗೆ ಬಂದರೂ ಕಡಬವನ್ನು ದಾಟಿ ಹೋಗಬೇಕಾಗಿತ್ತು. ಆದ್ದರಿಂದ ಕಡಬ ಮತ್ತು ಕದಂಬ ಸಾಮರಸ್ಯದ ಸಂಬಂಧವನ್ನು ಹೊಂದಿವೆ. ಈ ಪ್ರದೇಶದಲ್ಲಿ ಪಂಚ ದ್ರಾವಿಡ ಭಾಷೆಗಳಿಗೆ ವಿಶೇಷ ಸ್ಥಾನಮಾನವಿದೆ ಎಂದರು. ಇನ್ನೋರ್ವ ಅತಿಥಿ ತುಳು ಕೂಡುಕಟ್ಟು ಉಬಾರ್ ಇದರ ಅಧ್ಯಕ್ಷ ಡಾ. ನಿರಂಜನ ರೈಯವರು ಮಾತನಾಡಿ, ತುಳು ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ರಾಮಕುಂಜವು ಹಲವಾರು ವರ್ಷಗಳಿಂದ ಪ್ರಯತ್ನ ಮಾಡುತ್ತಿದೆ. ಪ್ರಪಂಚದಲ್ಲಿ ಪ್ರಚಲಿತದಲ್ಲಿರುವ ಭಾಷೆಗಳಲ್ಲಿ ತುಳು ಭಾಷಿಕರ ಸಂಖ್ಯೆ ಕಡಿಮೆಯಾಗಿದ್ದು, ಪ್ರೋತ್ಸಾಹಿಸುವ ಕಾರ್ಯ ಆಗಬೇಕಾಗಿದೆ ಎಂದರು. ಸಮರ್ಥ ಜನ ಸೇವಾ ಟ್ರಸ್ಟ್ ಸವಣೂರು ಇದರ ಅಧ್ಯಕ್ಷ ಗಿರೀಶ್ ಸುಲಾಯ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ತಾಲೂಕು ಹಂತದಲ್ಲಿ ಇಂತಹ ಸ್ಪರ್ಧೆಗಳು ನಡೆಸುವ ಹಾಗೂ ಹೆಚ್ಚಿನ ಶಾಲೆಯಲ್ಲಿ ತುಳುಭಾಷೆ ಕಲಿಸುವ ವ್ಯವಸ್ಥೆಯನ್ನು ಅಕಾಡೆಮಿ ಮಾಡಬೇಕು. ಇದಕೆಲ್ಲ ರಾಮಕುಂಜ ಶಾಲೆ ಆದರ್ಶವಾಗಿದೆ ಎಂದರು.


ವೇದಿಕೆಯಲ್ಲಿ ರಾಮಕುಂಜ ಗ್ರಾ.ಪಂ.ಸದಸ್ಯ ಸೂರಪ್ಪ ಕುಲಾಲ್ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎನ್ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಲೋಹಿತಾ ವಂದಿಸಿದರು. ಸಹಶಿಕ್ಷಕಿಯರಾದ ಪ್ರೇಮ, ಸರಿತಾ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಆಡಳಿತ ಅಧಿಕಾರಿ ಆನಂದ್ ಎಸ್.ಟಿ., ಸಂಸ್ಥೆಯ ವ್ಯವಸ್ಥಾಪಕ ರಮೇಶ್ ರೈ, ಶಿಕ್ಷಕ ಶಿಕ್ಷಕೇತರ ವೃಂದದವರು ಸಹಕರಿಸಿದರು.


ರಾಮಕುಂಜ ಪ್ರಥಮ, ಕಾಣಿಯೂರು ದ್ವಿತೀಯ
ಬೆಳಗ್ಗಿನಿಂದ ಸಂಜೆ ತನಕ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಇದರಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಹಾಗೂ ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾಣಿಯೂರು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.

LEAVE A REPLY

Please enter your comment!
Please enter your name here