ಪುತ್ತೂರು: ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಮಾಧ್ಯಮ ಪ್ರತಿನಿಧಿಗೆ ಕಲಿಯೋಗೀಶ್ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ, ಕೃಷ್ಣ ಜೆ.ರಾವ್ ಜೈಲಿನಿಂದ ಹೊರ ಬಂದ ಮೇಲೆ ಯುವತಿಯನ್ನು ಮದುವೆ ಆಗಿಲ್ಲ ಎಂದಾದರೆ ಗುಂಡು ಹೊಡೆದು ಸಾಯಿಸುವುದಾಗಿ ಎಚ್ಚರಿಕೆ ನೀಡಿರುವುದಾಗಿ ಟಿವಿ9 ವೆಬ್ ಚಾನೆಲ್ ನಲ್ಲಿ ವರದಿ ಪ್ರಕಟವಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆಡಿಯೋದಲ್ಲಿ ಏನಿದೆ!?
ಟಿವಿ9 ಪ್ರತಿನಿಧಿಗೆ ಭೂಗತ ಪಾತಕಿ ಕಲಿ ಯೋಗೇಶ್ ಅಂತೇಳಿ ಕರೆ ಮಾಡಿದ ವ್ಯಕ್ತಿ, ‘ಬಿಜೆಪಿ ಮುಖಂಡನ ಪುತ್ರನ ಪ್ರಕರಣದ ಬಗ್ಗೆ ನಮಗೂ ದೂರು ಬಂದಿದೆ. ಓರ್ವ ಯುವತಿಯನ್ನು ಗರ್ಭಿಣಿ ಮಾಡಿ ಮೋಸ ಮಾಡಿದ್ದು, ಈಗ ಜೈಲಿನಲ್ಲಿ ಇರಬೇಕು. ಅನ್ಯಾಯವಾಗಿದೆ ಎಂದು ದೂರು ಬಂದಿದೆ. ಸಂತ್ರಸ್ತೆ ಮನೆಯವರ ಪರ ರಾಜಕೀಯದವರು ಯಾರೂ ನಿಲ್ಲುತ್ತಿಲ್ಲ. ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಹಿಂದೂ ಅಲ್ಲವೇ? ಅವರ ಬಳಿ ಹಣವಿಲ್ಲ ಅಂತ ಬಿಟ್ಟುಬಿಡುವುದಾ!?, ನಾನು ಹೇಳುವುದು ಇಷ್ಟೇ ಎರಡು ಸಮುದಾಯದರು ಕೂತು ಮಾತನಾಡಿ ಇತ್ಯರ್ಥ ಮಾಡಿ. ಯುವತಿಯೊಂದಿಗೆ ಆ ಯುವಕನ ಮದುವೆ ಮಾಡಬೇಕು. ಜೈಲಿನಿಂದ ಹೊರ ಬಂದ ಮೇಲೆ ಹಿಂದೂ ಸಂಘಟನೆಗಳು ಮುಂದೆ ನಿಂತು ಮದುವೆ ಮಾಡಿಸಲಿ. ಒಂದೇ ವೇಳೆ ಮದುವೆ ಆಗಿಲ್ಲ ಅಂದರೆ ಆರೋಪಿ ಕೃಷ್ಣ ಜೆ.ರಾವ್ಗೆ ಗುಂಡು ಹೊಡೆಯುತ್ತೇವೆ ಬದುಕುವುದೇ ಬೇಡ’ ಎಂದಿದ್ದಾರೆ.