




ನೆಲ್ಯಾಡಿ: ಶಿರಾಡಿಯಿಂದ ಶಿರ್ವತ್ತಡ್ಕಕ್ಕೆ ಸಂಪರ್ಕ ಕಲ್ಪಿಸುವ ಜಿ.ಪಂ.ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ನಿರ್ಮಾಣಗೊಂಡಿದ್ದು ವಾಹನ ಸವಾರರು ಸರ್ಕಸ್ ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸದ್ರಿ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಜು.11ರಂದು ಬೆಳಿಗ್ಗೆ ಹೊಂಡಗಳಲ್ಲಿ ಬಾಳೆಗಿಡಗಳನ್ನು ನೆಟ್ಟು ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.





ಶಿರಾಡಿ ಗ್ರಾಮದ ಶಿರ್ವತ್ತಡ್ಕ-ಪದಂಬಳ ಎಂಬಲ್ಲಿ ಶಿರಾಡಿ ಗ್ರಾ.ಪಂ.ನಿಂದ ನಿರ್ಮಾಣಗೊಂಡ ಘನತ್ಯಾಜ್ಯ ಘಟಕದ ಅನಾವರಣ ಕಾರ್ಯಕ್ರಮ ಜು.11ರಂದು ಬೆಳಿಗ್ಗೆ ನಡೆದಿದ್ದು ಈ ಘನತ್ಯಾಜ್ಯ ಘಟಕಕ್ಕೆ ಶಿರಾಡಿಯಿಂದ ಇದೇ ರಸ್ತೆ ಮೂಲಕ ಸಾಗಬೇಕಾಗಿದೆ. ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸುವ ಮೂಲಕ ಗ್ರಾಮಸ್ಥರು ರಸ್ತೆ ಅವ್ಯವಸ್ಥೆ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಶಿರಾಡಿಯಿಂದ-ಶಿರ್ವತ್ತಡ್ಕಕ್ಕೆ 4 ಕಿ.ಮೀ.ಉದ್ದದ ಈ ಜಿ.ಪಂ.ರಸ್ತೆ ಡಾಮರೀಕರಣಗೊಂಡು 18 ವರ್ಷ ಆಗಿದೆ. ಆ ಬಳಿಕ ಒಂದೆರಡು ಸಲ ತೇಪೆ ಕಾಮಗಾರಿ ನಡೆದಿರುವುದರು ಹೊರತುಪಡಿಸಿದರೆ ಮರು ಡಾಮರೀಕರಣಗೊಂಡಿಲ್ಲ. ಇದೀಗ ರಸ್ತೆಯಲ್ಲಿನ ಡಾಮರು ಎದ್ದುಹೋಗಿದ್ದು ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡ ನಿರ್ಮಾಣಗೊಂಡಿದ್ದು, ಜನಸಂಚಾರ ಹಾಗೂ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.





ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ;
ಶಿರಾಡಿ ಪೇಟೆ ಶಿರಾಡಿ ಗ್ರಾಮದ ಕೇಂದ್ರ ಭಾಗವಾಗಿದೆ. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶುಚಿಕಿತ್ಸಾ ಕೇಂದ್ರ, ಸಾರ್ವಜನಿಕ ಗ್ರಂಥಾಲಯ, 2 ಅಂಗನವಾಡಿ ಕೇಂದ್ರ, 4 ಚರ್ಚ್, 1 ದೇವಸ್ಥಾನ, 1 ರಾಷ್ಟ್ರೀಕೃತ ಬ್ಯಾಂಕ್, 1 ಸಹಕಾರಿ ಬ್ಯಾಂಕ್, 3 ಗ್ರಾಮದ ಪಡಿತರ ವಿತರಣಾ ಕೇಂದ್ರ, 2 ಪೆಟ್ರೋಲ್ ಬಂಕ್, 1 ಇಂಡೇನ್ ಗ್ಯಾಸ್ ಏಜೆನ್ಸಿ ಕೇಂದ್ರ ಇದೆ. ಮುಂದೆ ಗ್ರಾ.ಪಂ.ನ ನೂತನ ಕಚೇರಿ ಕಟ್ಟಡವೂ ಶಿರಾಡಿಗೆ ಬರಲಿದೆ. ಇವೆಲ್ಲ ಸೇವೆ ಪಡೆಯಲು ಶಿರ್ವತ್ತಡ್ಕ, ಪದಂಬಳ ಭಾಗದ ಜನರು ಇದೇ ರಸ್ತೆ ಮೂಲಕ ಶಿರಾಡಿಗೆ ಬರಬೇಕಾಗಿದೆ. ಈ ರಸ್ತೆಯನ್ನು 750ಕ್ಕೂ ಹೆಚ್ಚು ಕುಟುಂಬಗಳು, ನೂರಾರು ಶಾಲಾಮಕ್ಕಳು ದಿನಂಪ್ರತಿ ಉಪಯೋಗಿಸುತ್ತಿದ್ದಾರೆ.
ಶಾಸಕರು, ಸಚಿವರಿಗೆ ಮನವಿ:
ಸದ್ರಿ ರಸ್ತೆ ಮರುಡಾಮರೀಕರಣಕ್ಕೆ ಕಳೆದ ಹಲವು ವರ್ಷಗಳಿಂದ ಇಲ್ಲಿನ ಜನಪ್ರತಿನಿಧಿಗಳು ಶಾಸಕರಿಂದ ಹಿಡಿದು ಸಚಿವರ ತನಕವೂ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಈ ತನಕವೂ ಅನುದಾನ ಬಿಡುಗಡೆಗೊಂಡಿಲ್ಲ. ಈ ಹಿಂದೆ ಪಿ.ಪಿ.ವರ್ಗೀಸ್ ಅವರು ಜಿ.ಪಂ.ಸದಸ್ಯರಾಗಿದ್ದ ವೇಳೆ ರಸ್ತೆ ದುರಸ್ತಿಗೆ ಅನುದಾನ ಒದಗಿಸಿದ್ದರು. ರಸ್ತೆ ನಿರ್ಮಾಣಗೊಂಡು 18 ವರ್ಷ ಕಳೆದಿದ್ದು ಆ ಬಳಿಕ ಒಂದೆರಡು ಸಲ ತೇಪೆ ಕಾಮಗಾರಿ ನಡೆದಿದೆ. ಶಿರಾಡಿ ಗ್ರಾ.ಪಂ.ನಿಂದ ಕಳೆದ ವರ್ಷ 1 ಲಕ್ಷ ರೂ.ಅನುದಾನದಲ್ಲಿ ಚರಂಡಿ ದುರಸ್ತಿ ಹಾಗೂ ಕಳೆದ ಬೇಸಿಗೆಯಲ್ಲಿ ಹೊಂಡಗಳಿಗೆ ಮಣ್ಣು ಹಾಕಿ ಮುಚ್ಚಲಾಗಿತ್ತು. ಆದರೆ ಮಳೆಗಾಲದಲ್ಲಿ ಮಣ್ಣು ಮಳೆನೀರಿನ ಜೊತೆ ಹರಿದು ಹೋಗಿದ್ದು ಈಗ ದೊಡ್ಡ ದೊಡ್ಡ ಹೊಂಡಗಳಿವೆ. ಆದಷ್ಟು ಬೇಗ ಸದ್ರಿ ರಸ್ತೆ ಮರುಡಾಮರೀಕರಣ ಇಲ್ಲವೇ ಕಾಂಕ್ರಿಟೀಕರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸುತ್ತಲೇ ಇದ್ದೇವೆ;
ಶಿರಾಡಿ-ಶಿರ್ವತ್ತಡ್ಕ ರಸ್ತೆ ಮರು ಡಾಮರೀಕರಣಕ್ಕೆ ಕ್ಷೇತ್ರದ ಶಾಸಕರಿಗೆ, ಸಂಸದರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಬೇರೆ ಬೇರೆ ಇಲಾಖೆ ಸಚಿವರಿಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ತುಂಬಿರುವುದರಿಂದ ಜನರಿಗೆ ಸಂಚಾರಕ್ಕೆ ಕಷ್ಟವಾಗಿರುವ ಬಗ್ಗೆ ದೂರುಗಳು ಬಂದಿವೆ. ಗ್ರಾ.ಪಂ.ಅನುದಾನದಲ್ಲಿ ಕಳೆದ ವರ್ಷ ಚರಂಡಿ ದುರಸ್ತಿ ಮಾಡಿದ್ದೇವೆ. ಹೊಂಡಗಳಿಗೆ ಮಣ್ಣು ತುಂಬಿಸುವ ಕಾಮಗಾರಿ ಮಾಡಿದ್ದೇವೆ. ಆದರೆ ಮಳೆಯಿಂದಾಗಿ ಇವೆಲ್ಲವೂ ಎದ್ದುಹೋಗಿ ಮತ್ತೆ ಹೊಂಡ ನಿರ್ಮಾಣಗೊಂಡಿದೆ.
-ಕಾರ್ತಿಕೇಯನ್, ಅಧ್ಯಕ್ಷರು ಗ್ರಾ.ಪಂ.ಶಿರಾಡಿ

18 ವರ್ಷದ ಹಿಂದೆ ಡಾಮರೀಕಣ;
ಶಿರಾಡಿ-ಶಿರ್ವತ್ತಡ್ಕ ರಸ್ತೆಗೆ 18 ವರ್ಷದ ಹಿಂದೆ ಆಗಿನ ಗ್ರಾ.ಪಂ.ಸದಸ್ಯರ ಪ್ರಯತ್ನದಿಂದ ಸರಕಾರದ 40 ಲಕ್ಷ ರೂ. ಅನುದಾನದಲ್ಲಿ 4 ಕಿ.ಮೀ. ರಸ್ತೆ ಡಾಮರೀಕರಣ ನಡೆದಿದೆ. ಅದರ ನಂತರ ಈ ರಸ್ತೆ ಮರು ಡಾಮರೀಕರಣಗೊಂಡಿಲ್ಲ. ಪಿ.ಪಿ.ವರ್ಗೀಸ್ ಅವರು ಜಿ.ಪಂ.ಸದಸ್ಯರಾಗಿದ್ದ ವೇಳೆ ನೀಡಿದ್ದ ಅನುದಾನದಲ್ಲಿ ತೇಪೆ ಕಾಮಗಾರಿ ನಡೆದಿದೆ. ಈಗ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡಿವೆ. ಮರುಡಾಮರೀಕರಣ ಇಲ್ಲವೇ ಕಾಂಕ್ರಿಟೀಕರಣಕ್ಕೆ ಸಂಬಂಧಿಸಿ ಶಾಸಕರಿಂದ ಹಿಡಿದು ಬೇರೆ ಬೇರೆ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ.
ಸಣ್ಣಿಜೋನ್, ಸದಸ್ಯರು ಗ್ರಾ.ಪಂ.ಶಿರಾಡಿ

ಆದಷ್ಟು ಬೇಗ ಮರು ಡಾಮರೀಕರಣ ಆಗಲಿ;
ಈ ರಸ್ತೆ ಸಂಪೂರ್ಣ ಕೆಟ್ಟುಹೋಗಿದ್ದು ಸಂಚಾರ ಮಾಡುವುದೇ ಕಷ್ಟವಾಗಿದೆ. ಅಂಗನವಾಡಿ, ಶಾಲಾ-ಕಾಲೇಜಿಗೆ ಹೋಗುವ ನೂರಾರು ಮಕ್ಕಳು ಈ ರಸ್ತೆ ಬಳಕೆ ಮಾಡುತ್ತಿದ್ದಾರೆ. ಈ ಭಾಗದ ಸುಮಾರು 750ಕ್ಕೂ ಹೆಚ್ಚಿನ ಕುಟುಂಬಗಳಿಗೆ ತಮ್ಮ ಅಗತ್ಯ ಕೆಲಸಗಳಿಗೆ ಪೇಟೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಈಗ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡಿರುವುದರಿಂದ ಓಡಾಟ ನಡೆಸುವುದೇ ಕಷ್ಟವಾಗಿದೆ. ಸಂಬಂಧಪಟ್ಟವರು ಗಮನಹರಿಸಿ ರಸ್ತೆಯ ಮರು ಡಾಮರೀಕರಣಕ್ಕೆ ಆದಷ್ಟೂ ಬೇಗ ಕ್ರಮ ಕೈಗೊಳ್ಳಬೇಕು.
ಮನೋಜ್ ಶಿರಾಡಿ, ಗ್ರಾಮಸ್ಥರು







