ಸಾಧಕ ವಿದ್ಯಾರ್ಥಿಗಳಿಗೆ ಕ.ಸಾ.ಪ. ಕಡಬ ತಾಲೂಕು ಘಟಕದಿಂದ ಸನ್ಮಾನ

0

ಏಕಾಗ್ರತೆಯಿಂದ ಅಧ್ಯಯನಶೀಲರಾದಾಗ ಕಲಿಕೆಯಲ್ಲಿ ಸಾಧನೆ ಸಾಧ್ಯ: ಕೆ.ಸೇಸಪ್ಪ ರೈ

ರಾಮಕುಂಜ: ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪ್ರಥಮ ಮತ್ತು ದ್ವಿತೀಯ ಭಾಷೆ ಕನ್ನಡದಲ್ಲಿ ಪೂರ್ಣ ಅಂಕಗಳಿಸಿದ ಹಾಗೂ ಅತ್ಯುತ್ತಮ ಸಾಧನೆಗೈದ ಕಡಬ ತಾಲೂಕಿನ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಜು.೧೨ರಂದು ರಾಮಕುಂಜ ವಸತಿ ಶಾಲಾ ಸಭಾಂಗಣದಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿದ್ದ ಕಸಾಪ ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ವಾರ್ಷಿಕ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದುಕೊಂಡಿರುವುದು ವಿದ್ಯಾರ್ಥಿಗಳು ಮಾಡಿರುವ ದೊಡ್ಡ ಸಾಧನೆಯಾಗಿದೆ. ಏಕಾಗ್ರತೆಯಿಂದ ಅಧ್ಯಯನ ಶೀಲರಾದಾಗ ಇಂತಹ ಸಾಧನೆಗಳನ್ನು ಮಾಡಲು ಸಾಧ್ಯ, ಈ ಸಾಧನೆ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೆಟ್ಟಿಲು ಸಹ ಆಗಲಿದೆ ಎಂದರು.


ಮುಖ್ಯ ಅತಿಥಿಯಾಗಿದ್ದ ಶ್ರೀ ಸುಬ್ರಮಣ್ಯ ಮಠ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಕೃಷ್ಣಶರ್ಮ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯದ ಮೇಲೆ ಆಸಕ್ತಿ ಬೆಳೆಸಿಕೊಂಡಲ್ಲಿ ಜನರ ಪ್ರೀತಿ-ವಿಶ್ವಾಸ ಗಳಿಸಲು ಸಾಧ್ಯವಿದೆ. ಎಲ್ಲಿಯೇ ಹೋದರೂ ಕನ್ನಡದ ಮೇಲಿನ ಅಭಿಮಾನ ಮರೆಯದಿರಿ ಎಂದರು. ಇನ್ನೋರ್ವ ಅತಿಥಿ ಕಡಬ ತಾ.ಪಂ. ನಿವೃತ್ತ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಮಾನಸಿಕ ಒತ್ತಡವು ಕಡಿಮೆಯಾಗಲಿದೆ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಲಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಗೌರವ ಕಾರ್ಯದರ್ಶಿಗಳಾದ ಎನ್.ಕೆ.ನಾಗರಾಜ್, ಡಿ.ವಸಂತಕುಮಾರ್, ಗೌರವ ಕೋಶಾಧ್ಯಕ್ಷರಾದ ಬಾಲಚಂದ್ರ ಮುಚ್ಚಿಂತಾಯ, ಸದಸ್ಯರಾದ ರಮೇಶ್ ಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಸಾಪ ಕಡಬ ಘಟಕ ಕೋಶಾಧಿಕಾರಿ ಬಾಲಚಂದ್ರ ಮುಚ್ಚಿಂತಾಯ ಸ್ವಾಗತಿಸಿದರು. ಸದಸ್ಯೆ ಪ್ರೇಮ ಬಿ. ವಂದಿಸಿದರು. ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ. ಕಾರ್ಯಕ್ರಮ ನಿರೂಪಿಸಿದರು. ಕ.ಸಾ.ಪ ಕಡಬ ಘಟಕದ ಸದಸ್ಯರಾದ ವೆಂಕಟರಮಣ ಭಟ್, ಯಶವಂತ ರೈ, ಎ.ಎನ್.ಕೊಳಂಬೆ, ವಿವಿಧ ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಸಾಹಿತ್ಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಗೌರವಾರ್ಪಣೆ:
ಕಡಬ ತಾಲೂಕಿನ ವಿವಿಧ ಶಾಲೆಗಳ ಸುಮಾರು ೩೧ ವಿದ್ಯಾರ್ಥಿಗಳಿಗೆ ಪುಸ್ತಕ, ಪ್ರಮಾಣ ಪತ್ರ, ಕನ್ನಡ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ೬೨೦ಕ್ಕಿಂತ ಹೆಚ್ಚು ಅಂಕ ಗಳಿಸಿರುವ ತಾಲೂಕಿನ ವಿದ್ಯಾರ್ಥಿಗಳನ್ನು ಕೂಡ ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಡಬ ತಾ.ಪಂ. ನಿವೃತ್ತ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡರವರನ್ನು ಕ.ಸಾ.ಪ.ಕಡಬ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here