
ಪುತ್ತೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸುಮಾರು 26 ವರ್ಷಗಳ ಸೇವೆ ಸಲ್ಲಿಸಿದ ಕೊಳ್ತಿಗೆ ಗ್ರಾಮದ ಕರ್ತಡ್ಕ ದುಗ್ಗಳ ನಿವಾಸಿ ಕೆ.ಲಕ್ಷ್ಮಣ ಗೌಡರವರು ಮೇ.31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ.
ಇವರು ಕರ್ತಡ್ಕ ದುಗ್ಗಳ ಜತ್ತಪ್ಪ ಗೌಡ ಮತ್ತು ಜಾನಕಿಯವರ ಪುತ್ರರಾಗಿದ್ದು ಸಬ್ಬಡ್ಕ ಹಾಗೂ ಐವರ್ನಾಡು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಬೆಳ್ಳಾರೆ ಪ. ಪೂ. ಕಾಲೇಜು ಬೆಳ್ಳಾರೆಯಲ್ಲಿ ಪ್ರೌಢ ಶಿಕ್ಷಣ ಪಡೆದುಕೊಂಡಿದ್ದಾರೆ. ಬಸ್ಗಳಲ್ಲಿ ಕ್ಲೀನರ್ ಕೆಲಸದಿಂದ ವಾಹನ ಚಲಾಯಿಸುವುದನ್ನು ಕಲಿತ ಇವರು ಪೂರ್ಣ ಚಾಲಕರಾಗಿ ಲಾರಿಗಳಲ್ಲಿ ಚಾಲಕರಾಗಿ ಮಂಗಳೂರು ಸಿಟಿ ಬಸ್ ಚಾಲಕರಾಗಿ ಸೇವೆ ಸಲ್ಲಿಸಿ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಾಹನ ಚಾಲಕರಾಗಿ 17-೦2-1999ರಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಕಛೇರಿಯಲ್ಲಿ ವಾಹನ ಚಾಲಕರಾಗಿ ಕರ್ತವ್ಯವನ್ನು ಆರಂಭಿಸಿದರು. ಜಿಲ್ಲಾ ಪಂಚಾಯತ್, ಜಿಲ್ಲಾಧಿಕಾರಿಯವರ ಕಛೇರಿಗಳಲ್ಲಿಯೂ ನಿಯೋಜನೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿದ್ದು, ಸಮುದಾಯ ಆರೋಗ್ಯ ಕೇಂದ್ರ ವಾಮದಪದವಿನಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿದ್ದಾರೆ. ಉತ್ತಮ ವಾಹನ ಚಾಲಕರು ಎಂದು ಇಲಾಖೆಯಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ.
ಒಬ್ಬ ಕ್ರೀಡಾಪಟುವಾಗಿ ಕ್ರೀಡೆಯಲ್ಲಿ ಪ್ರತಿ ವರ್ಷ ನಡೆಯುವ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ 2001 ರಿಂದ 2025ರ ವರೆಗೆ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟದಿಂದ ಭಾಗವಹಿಸಿ ರಾಜ್ಯ ಮಟ್ಟದವರೆಗೆ ಭಾಗವಹಿಸಿಕೊಂಡು ಬಂದಿರುತ್ತಾರೆ. 30 ಬಾರಿ ರಕ್ತ ದಾನ ಮಾಡಿಕೊಂಡು ಬಂದಿದ್ದು, ರಕ್ತದಾನದ ಬಗ್ಗೆ ಉಸ್ತುವಾರಿ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಸನ್ಮಾನ ಮತ್ತು ಅಭಿನಂದನೆಯನ್ನು ಪಡೆದಿರುತ್ತಾರೆ. ಜೇನು ಕೃಷಿಯಲ್ಲಿ ಅಪಾರವಾದ ಆಸಕ್ತಿ. ಕೃಷಿಯ ಜೊತೆಗೆ ಒಬ್ಬ ಉತ್ತಮ ಜೇನು ಕೃಷಿಕರು ಎಂದು ಹಲವು ಪ್ರಶಸ್ತಿ ಮತ್ತು ಅಭಿನಂದನೆಯನ್ನು ಪಡೆದಿದ್ದಾರೆ.
ಸೌರಭರತ್ನ ರಾಜ್ಯ ಪ್ರಶಸ್ತಿ ಮತ್ತು ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಮಂಗಳೂರು, ಉಡುಪಿ, ಕಾಸರಗೋಡು ವಲಯಗಳು ನಡೆಸುವ ಸೂಪರ್ ಸ್ಟಾರ್ ರೈತ ಅಭಿನಂದನಾ ಕಾರ್ಯಕ್ರಮದಲ್ಲಿ ಜೇನು ಕೃಷಿಯಲ್ಲಿ ಇವರಿಗೆ ಸೂಪರ್ ಸ್ಟಾರ್ ರೈತ ಎಂದು ಅಭಿನಂದಿಸಿರುತ್ತಾರೆ. ಕೆಲವು ವರ್ಷಗಳಿಂದ ಬಂಟ್ವಾಳ, ಮಂಗಳೂರು ತಾಲೂಕಿನ ತೋಟಗಾರಿಕಾ ಇಲಾಖೆಯಲ್ಲಿ ನಡೆಯುವ ಜೇನು ಕೃಷಿ ತರಭೇತಿ ಕಾರ್ಯಾಗಾರದಲ್ಲಿ ಪ್ರತಿ ವರ್ಷವು ಸಂಪನ್ಮೂಲ ವ್ಯಕ್ತಿಯಾಗಿ ಸಾವಿರಾರು ಜೇನು ಕೃಷಿಕರಿಗೆ ಮಾರ್ಗದರ್ಶಕರಾಗಿದ್ದಾರೆ. ಪ್ರಸ್ತುತ ಬಂಟ್ವಾಳದ ಅಮ್ರಾಡಿ ಗ್ರಾಮ ಕಿನ್ನಿಬೆಟ್ಟುವಿನಲ್ಲಿ ಪತ್ನಿ ಗೀತಾ ಮತ್ತು ಮಕ್ಕಳಾದ ಶ್ರೀಲತಾ,ಶ್ರೀನಿತಾರವರೊಂದಿಗೆ ಜೀವನ ನಡೆಸುತ್ತಿದ್ದಾರೆ.