ಸಮಾಜಮುಖಿ ಕಾರ್ಯಾದಲ್ಲೂ ಸಂಸ್ಥೆ ಕಾರ್ಯವೆಸಗುತ್ತಿದೆ -ಅರುಣ್ ಕುಮಾರ್ ಪುತ್ತಿಲ
ಡಿಸೆಂಬರ್ ಅಂತ್ಯಕ್ಕೆ ತನ್ನ ಶಾಖೆಯನ್ನು 25ಕ್ಕೆ ಏರಿಸೋ ಗುರಿ , 2025-26ನೇ ಸಾಲಿನಲ್ಲಿ 60 ಕೋಟಿ ವ್ಯವಹಾರ – ಅಲ್ವಿನ್ ಜೋಯೆಲ್ ನೊರೊನ್ಹ

ಪುತ್ತೂರು: ಒಂದು ಸಂಸ್ಥೆಯು ತನ್ನ ಗ್ರಾಹಕ ವರ್ಗ, ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿ ಇವರೆಲ್ಲರೂ ಅನೋನ್ಯತೆಯಿಂದ ಕೂಡಿದಾಗ ಅಭಿವೃದ್ದಿ ಅಸಾಧ್ಯವೇನಲ್ಲ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಕಾಣಸಿಕ್ಕಿದೆ. ಬೇರೆ -ಬೇರೆ ಕಾರಣಗಳಿಗೋಸ್ಕರ ಆರ್ಥಿಕ ಸಂಘ, ಸಂಸ್ಥೆಗಳನ್ನು ತೆರೆದು, ಆ ನಂತರದ ದಿನಗಳಲ್ಲಿ ಅವುಗಳು ಮುಚ್ಚಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೇ, ದ.ಕ.ಮ್ಯೂಚುವಲ್ ಬೆನಿಫಿಟ್ ನಿಧಿ ಲಿ ಕೇವಲ ಆರ್ಥಿಕ ಸಹಕಾರಕ್ಕಾಗಲಿ ಅಥವಾ ಆರ್ಥಿಕ ವ್ಯವಸ್ಥೆಗೆ ಸೀಮಿತವಾಗಿರದೇ , ತನ್ನ ಗಳಿಕೆಯ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸುವಂತಹ ಕಾರ್ಯಕ್ಕೆ ಮುಂದಾಗಿರುವಂಥದ್ದು ಉಥತಮ ವಿಚಾರವೆಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಬಣ್ಣಿಸಿದರು.
ಜು.15 ರಂದು ದ.ಕ.ಮ್ಯೂಚುವಲ್ ಬೆನಿಫಿಟ್ ನಿಧಿ ಲಿ ಇದರ ಪುತ್ತೂರು ಶಾಖೆಯ ಪ್ರಥಮ ವಾರ್ಷಿಕೋತ್ಸವವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು , ವಿವಿಧ ರೀತಿಯ ಕಾರ್ಯಕ್ರಮ ಆಯೋಜನೆಯ ಮೂಲಕ ಆರ್ಥಿಕ ದುರ್ಬಲರಿಗೆ ಸಹಾಯ ,ಸಹಕಾರ ನೀಡುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ , ಮುಂದಿನ ದಿನಗಳಲ್ಲಿ ಶಾಖೆಯೂ ರಾಜ್ಯವ್ಯಾಪಿ ಹರಡಲಿಯೆಂದು ಹಾರೈಸಿದರು.
ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ಯಾರೇ ಆದರೂ ತಮ್ಮ ವ್ಯವಹಾರವನ್ನು ನಗು ಮೊಗದ ಸೇವೆ ಮೂಲಕ ನೀಡುವುದನ್ನು ಕಲಿಯಬೇಕು.ನಗು ಮೊಗ ಮತ್ತು ಪ್ರಾಮಾಣಿಕತೆ ಇದ್ದರೆ ಅಭಿವೃದ್ದಿ , ಪ್ರಗತಿ ಸಾಧ್ಯವಿದೆ ಮಾತ್ರವಲ್ಲದೇ ಗ್ರಾಹಕ ಜನತೆಯ ನಂಬಿಕೆಯನ್ನು ಉಳಿಸಿಕೊಂಡು ರಾಜ್ಯ ಮಟ್ಟದಲ್ಲಿ ಸಂಸ್ಥೆ ಬೆಳಗಲಿ ಎಂದು ಹಾರೈಸಿದರು.
ಉದ್ಯಮಿ ಸಾಜ ಶಿವರಾಮ ಆಳ್ವ ಮಾತನಾಡಿ , ಸಂಸ್ಥೆಯ ಈ ಪರಿಯ ಬೆಳವಣಿಗೆಗೆ ಶಾಖೆಯ ಅದ್ಯಕ್ಷರಾದ ಪುನೀತ್ ವಿ.ಜೆ ಯವರ ಶ್ರಮವು ಕಾರಣ. ನಾನೂ ಕೂಡ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದೆ , ಇಲ್ಲಿ ಗ್ರಾಹಕ ವರ್ಗದ ನಂಬಿಕೆ -ವಿಶ್ವಾಸ ಗಳಿಸುವುದೇ ಸವಾಲು. ವ್ಯವಹಾರ ರೀತಿ ಸರಿಯಾಗಿದ್ದು, ಗ್ರಾಹಕರ ಮನವೊಲಿಸೋ ಕಾರ್ಯವು ಸರಿಯಾದರೇ ಯಶಸ್ಸು ಖಂಡಿತ. ಇಂತಹ ಸಂಸ್ಥೆಯನ್ನು ಹುಟ್ಟು ಹಾಕಿ ಮುನ್ನಡೆಸುವುದು ಏಣಿಯನ್ನು ಸುಲಭವಾಗಿ ಹತ್ತಿ, ಇಳಿಯಲು ಭಯಪಟ್ಟಂತೆ ಎಂದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ , ಪುತ್ತೂರು ಬಹಳ ಸೂಕ್ಷ್ಮ ಪಟ್ಟಣವಾಗಿದ್ದು , ಅನೇಕ ವಾಣಿಜ್ಯ ಉದ್ಯಮಗಳ ಮೂಲಕ ಆರ್ಥಿಕತೆಗೆ ಪ್ರಬಲ ಶಕ್ತಿಯನ್ನು ತುಂಬಿದೆ. ರಾಜ್ಯದ ಜಿ.ಡಿ.ಪಿ ಅಂಶವನ್ನು ಗಮನಿಸಿದರೇ , ಪುತ್ತೂರು ಸದಾ ಮುಂದು. ಸ್ವ ಸಹಾಯ ಸಂಘಗಳ ರಚನೆಯ ಮೂಲಕ ಇಡೀ ದೇಶದಲ್ಲೇ ಆರ್ಥಿಕ ಪುನಶ್ಚೇತನ ಕಾರ್ಯ ನಡೆಯುತ್ತಿವೆ ಎಂದು ಹೇಳಿದ ಅವರು , ಈಗಾಗಲೇ 15 ಶಾಖೆಗಳನ್ನೂ ತೆರದಿರುವ ಸಂಸ್ಥೆಯ ಹೆಜ್ಜೆಯು ಬಲಿಷ್ಠವಾಗಿದೆಯೆಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಮಾತನಾಡಿ , ಪುತ್ತೂರು ಸೂಕ್ಷ್ಮ ಪ್ರದೇಶವಾಗಿರುವುರಿಂದಲೇ ಇಲ್ಲಿನ ಜನತೆ ಎಲ್ಲವನ್ನೂ , ಎಲ್ಲರನ್ನೂ ಅತೀ ಸೂಕ್ಷ್ಮವಾಗಿ ಗಮನಿಸುತ್ತಾರೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಶಾಖೆಯು ಇಪ್ಪತ್ತೈದಕ್ಕೆ ಏರಲಿ ಹಾಗೂ ಇಪ್ಪತ್ತೈದರ ಸಂಭ್ರಮವು ಪುತ್ತೂರಿನಲ್ಲೇ ಅದ್ದೂರಿಯಾಗಿ ನಡೆಯಲಿಯೆಂದರು.
ಬಳಿಕ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಅಲ್ವಿನ್ ಜೊಯೆಲ್ ನೊರೊನ್ಹ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿ , ಬಳಿಕ ಮಾತನಾಡಿದ ಅವರು , ಯಾವುದೇ ಒಂದು ಸಂಸ್ಥೆ ಅಥವಾ ಉದ್ಯಮವನ್ನು ಆರಂಭಿಸಲು ಒಬ್ಬ ವ್ಯಕ್ತಿಯಿಂದ ಮಾತ್ರ ಅಸಾಧ್ಯ.
ಆ ಸಾಧನೆಗೆ ಒಂದು ತಂಡವಿರಬೇಕು. ಅಂತಹ ತಂಡದ ಪ್ರಯತ್ನದಿಂದ ಹಾಗೂ ಪ್ರಾಮಾಣಿಕತೆಯಿಂದ ಇಂದು ಅದೆಲ್ಲಾ ಸಾಧ್ಯವಾಗಿದೇ , ಜೊತೆಗೆ ಗ್ರಾಹಕ ಜನತೆಯ ಆಶೀರ್ವಾದ , ಸರಕಾರದ ಹಾಗೂ ಅಧಿಕಾರಿಗಳ ಸಹಕಾರವೂ ಸಂಸ್ಥೆಯ ಏಳಿಗೆಗೆ ನಿರಾಯಾಸವಾಗಿ ಸಿಕ್ಕಿದೆ. ಮುಂದಿನ ತಿಂಗಳಲ್ಲಿ ಇನ್ನಷ್ಟೂ ಶಾಖೆಗಳನ್ನು ತೆರೆಯಲಿದ್ದು , ವಾರ್ಷಾಂತ್ಯಕ್ಕೆ ಎಂಟು ಜಿಲ್ಲೆಗಳಲ್ಲಿ 25 ಶಾಖೆಗಳನ್ನು ಹೊಂದುವ ಗುರಿ ಇಟ್ಟಿದ್ದೇವೆ ಎಂದರು. ಸುಮಾರು 50 ಕೋಟಿ ಮೇಲೆ ವ್ಯವಹಾರ ನಡೆಸುತ್ತಾ 2025-26ನೇ ಸಾಲಿಗೆ 60 ಕೋಟಿಯಷ್ಟು ವ್ಯವಹಾರ ನಡೆಸುವ ಭರವಸೆ ನೀಡುತ್ತೇವೆ ಎಂದು ಹೇಳಿದರು.
ಈ ವೇಳೆ ಉದ್ಯಮಿಗಳಾದ ನರಸಿಂಹ ಪ್ರಸಾದ್, ದೀಪಕ್ ಮಿನೇಜಸ್, ಶಾಖೆಯ ಅಧ್ಯಕ್ಷ ಪುನೀತ್ ವಿ.ಜೆ ಹಾಗೂ ಉಪಾಧ್ಯಕ್ಷೆ ಮಾಲತಿ ವೇದಿಕೆಯಲ್ಲಿದ್ದರು.
ಆನಾರೋಗ್ಯಕ್ಕೆ ತುತ್ತಾದ ಬಾಬು ಎಂಬವರ ಕುಟುಂಬ ಸದಸ್ಯರಿಗೆ ಧನ ಸಹಾಯ ಮೊತ್ತವನ್ನು ಅತಿಥಿಗಳ ಮುಖೇನ ಹಸ್ತಾಂತರ ಮಾಡಲಾಯಿತು. ಬಳಿಕ ಎಲ್ಲಾ ಅತಿಥಿಗಳನ್ನೂ, ಸಂಸ್ಥೆಯ ವಿವಿಧ ಸ್ತರದ ಸಿಬ್ಬಂದಿಗಳನ್ನೂ ಹಾಗೂ ಇನ್ ಲ್ಯಾಂಡ್ ಮಯೂರ ಸಂಕೀರ್ಣದ ವ್ಯವಸ್ಥಾಪಕ ಮಹೇಶ್ ಇವರುಗಳನ್ನು ಗೌರವಿಸಲಾಯಿತು.
ಪುನೀತ್ ಕೆ.ವಿ ಸ್ವಾಗತಿಸಿ , ಬಿಂದ್ಯಶ್ರೀ ಮತ್ತು ಸುಶಿತ್ಮಾ ಪ್ರಾರ್ಥನೆ ನೆರವೇರಿಸಿದರು. ಯುಟ್ಯೂಬರ್ ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.