ಉಪ್ಪಿನಂಗಡಿ: ವಿದ್ಯಾಸಂಸ್ಥೆಯೊಂದಕ್ಕೆ ತಾನು ಈಗಾಗಲೇ ದಾನವಾಗಿ ನೀಡಿದ್ದ ಭೂಮಿ ಸಾಲದೆಂದು ಹೆಚ್ಚುವರಿಯಾಗಿ 23 ಸೆಂಟ್ಸ್ ಬೆಲೆ ಬಾಳುವ ಭೂಮಿಯನ್ನು ಮತ್ತೆ ದಾನವಾಗಿ ನೀಡುವ ಮೂಲಕ ಸಹೋದರರಿಬ್ಬರು ಗುರುತರ ಕಾರ್ಯವೆಸಗಿದ ಬಗ್ಗೆ ವರದಿಯಾಗಿದೆ.
ಉಪ್ಪಿನಂಗಡಿಯಲ್ಲಿ ಸಂಸ್ಕಾರ ಶಿಕ್ಷಣ ನೀಡುವ ಸಲುವಾಗಿ ಶಿಶು ಮಂದಿರವೊಂದರ ಸ್ಥಾಪನೆಗೆ ಭೂಮಿಯ ಕೊರತೆ ಕಂಡು ಬಂದಾಗ ಕೃಷಿಕರೂ, ಉದ್ಯಮಿಗಳೂ ಆದ ಗೋವಿಂದ ಭಟ್ ಹಾಗೂ ಕೃಷ್ಣಾನಂದ ಭಟ್ ಎಂಬ ಸಹೋದರರಿಬ್ಬರು 5 ಸೆಂಟ್ಸ್ ಭೂಮಿಯನ್ನು ದಾನಪತ್ರದ ಮೂಲಕ ನೀಡಿದ್ದರು. ಸದ್ರಿ ಭೂಮಿಯಲ್ಲಿ ತಲೆ ಎತ್ತಿದ್ದ ಶ್ರೀ ಮಾಧವ ಶಿಶು ಮಂದಿರ ವಿವಿಧ ಕಾರ್ಯಚಟುವಟಿಕೆಗಳೊಂದಿಗೆ ಸಾಗಿದಾಗ ಸ್ಥಳಾವಕಾಶದ ಕೊರತೆಯನ್ನು ಸ್ವತಃ ಕಂಡು ಕೊಂಡ ಅವರು, ಶಿಶು ಮಂದಿರದ ಕಾರ್ಯಚಟುವಟಿಕೆಯನ್ನು ಸಮರ್ಪಕವಾಗಿ ನಡೆಸುವಂತಾಗಲು ಹೆಚ್ಚುವರಿಯಾಗಿ 23 ಸೆಂಟ್ಸ್ ಭೂಮಿಯನ್ನು ಶಿಶು ಮಂದಿರಕ್ಕೆ ದಾನವಾಗಿ ನೀಡಿದ್ದು, ಜು.14 ರಂದು ಪುತ್ತೂರು ರಿಜಿಸ್ಟಾರ್ ಕಚೇರಿಯಲ್ಲಿ ಶಿಶು ಮಂದಿರದ ಮಾತೃ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ದಾನಪತ್ರದ ಮೂಲಕ ವಿದ್ಯುಕ್ತ ಹಸ್ತಾಂತರ ಮಾಡಿದರು.
ಈ ಮೂಲಕ ಸಂಸ್ಕಾರ ಶಿಕ್ಷಣ ಕಾರ್ಯಕ್ಕೆ ಹೆಚ್ಚುವರಿ ಭೂಮಿಯ ಅಗತ್ಯತೆಯನ್ನು ತಾವೇ ಮನಗಂಡು, ಅಗತ್ಯವಿರುವ ಭೂಮಿಯನ್ನು ಅದರ ಮಾರುಕಟ್ಟೆ ಮೌಲ್ಯವಾದ ಲಕ್ಷಾಂತರ ರೂಪಾಯಿ ಗಳಿಕೆಯ ಅವಕಾಶವನ್ನೂ ನಿರ್ಲಕ್ಷಿಸಿ, ಉದಾರವಾಗಿ ಬರೋಬ್ಬರಿ 23 ಸೆಂಟ್ಸ್ ಹೆಚ್ಚುವರಿ ಭೂಮಿಯನ್ನು ದಾನವಾಗಿ ಸಮಾಜಕ್ಕೆ ಸಮರ್ಪಿಸಿರುವ ಮೂಲಕ ಮಾದರಿಯಾಗಿದ್ದಾರೆ.
ಶ್ರೀ ರಾಮ ಶಾಲಾ ಭೂ ದಾನಿಗಳೂ ಕೂಡ ಇವರು:
ಈ ಹಿಂದೆ ಇಲ್ಲಿನ ಶ್ರೀ ರಾಮ ಶಾಲೆಯ ನಿರ್ಮಾಣದ ಸಂಧರ್ಭದಲ್ಲೂ ಇದೇ ಸಹೋದರರು 2 ಎಕ್ರೆ ಭೂಮಿಯನ್ನು ಉದಾರವಾಗಿ ನೀಡಿದ್ದು, ಶಾಲೆಗೆ ಹೆಚ್ಚುವರಿ ಭೂಮಿಯ ಅಗತ್ಯತೆ ಕಂಡು ಬಂದಾಗ ಒಂದು ಎಕ್ರೆ ಭೂಮಿಯನ್ನು ಮಾರುಕಟ್ಟೆ ಧಾರಣೆಗಿಂತ ಗಮನಾರ್ಹ ಕಡಿಮೆ ಬೆಲೆಗೆ ನೀಡಿ, ಸಂಸ್ಕಾರ ಶಿಕ್ಷಣಕ್ಕೆ ಪೂರ್ಣ ಪ್ರಮಾಣದ ಪ್ರೋತ್ಸಾಹವನ್ನು ನೀಡಿದ್ದಾರೆ.
ಈ ಬಗ್ಗೆ ಗೋವಿಂದ ಭಟ್ ರವರನ್ನು ಪತ್ರಿಕೆ ಸಂಪರ್ಕಿಸಿದಾಗ, ದೇವರು ನಮಗೇನು ಕೊಟ್ಟಿದ್ದಾನೋ ಅದರ ಕಿಂಚಿತ್ ಭಾಗವನ್ನು ದೇವರಿಗೆ ಅರ್ಥಾತ್ ಸಮಾಜಕ್ಕೆ ಕೊಟ್ಟಿದ್ದೇವೆ ಅಷ್ಟೆ. ವಿವೇಕಾನಂದ ವಿದ್ಯಾವರ್ಧಕ ಸಂಘ ಅದನ್ನು ಸ್ವೀಕಾರ ಮಾಡಿ ಸದ್ಭಳಕೆ ಮಾಡುತ್ತಿರುವುದಕ್ಕೆ ಧನ್ಯತಾ ಭಾವವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.