ಪುತ್ತೂರಿನಲ್ಲಿ ಹೃದಯ ಬೆಸೆದ ಎಸ್.ವೈ.ಎಸ್ ಸೌಹಾರ್ದ ಜಾಥಾ : ಮಳೆಯ ನಡುವೆಯೂ ಕೈಕೈ ಹಿಡಿದು ಪೇಟೆಯಲ್ಲಿ ಹೆಜ್ಜೆ ಹಾಕಿದ ಸರ್ವಧರ್ಮೀಯರು

0

ಪುತ್ತೂರು: ಕರ್ನಾಟಕ ಸುನ್ನೀ ಯುವಜನ ಸಂಘದ(ಎಸ್‌ವೈಎಸ್) ವತಿಯಿಂದ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷ ವಾಕ್ಯದೊಂದಿಗೆ ವಿವಿಧ ಕಡೆಗಳಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ `ಸೌಹಾರ್ದ ಸಂಚಾರ’ ಪ್ರಯುಕ್ತ ಸರ್ವಧರ್ಮೀಯರನ್ನು ಸೇರಿಸಿಕೊಂಡು ಕಾಲ್ನಡಿಗೆ ಜಾಥಾ ಜು.16ರಂದು ಪುತ್ತೂರಿನಲ್ಲಿ ನಡೆಯಿತು.


ಏಳ್ಮುಡಿ ಬಳಿಯಲ್ಲಿ ಚಾಲನೆಗೊಂಡ ಕಾಲ್ನಡಿಗೆ ಜಾಥಾ ಕಿಲ್ಲೆ ಮೈದಾನದ ವರೆಗೆ ನಡೆಯಿತು. ಹಿಂದೂ-ಮುಸ್ಲಿಂ-ಕ್ರೈಸ್ತ ಮುಖಂಡರು ಪರಸ್ಪರ ಕೈ ಕೈ ಹಿಡಿದುಕೊಂಡು ಜಾಥಾದಲ್ಲಿ ಸಾಗುವ ಮೂಲಕ ನಾಡಿಗೆ ಸೌಹಾರ್ದತೆಯ ಅನಿವಾರ್ಯತೆ ಮತ್ತು ಎಸ್‌ವೈಎಸ್‌ನ ಉದ್ದೇಶದ ಬಗ್ಗೆ ಸಂದೇಶ ನೀಡಿದರು.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಬಶೀರ್ ಸಹದಿ ಬೆಂಗಳೂರು, ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನ ಧರ್ಮಗುರು ಫಾ.ಲಾರೆನ್ಸ್ ಮಸ್ಕರೇನ್ಹಸ್ ಸೇರಿದಂತೆ ನೂರಾರು ಮಂದಿ ಸರ್ವಧರ್ಮೀಯ ಭಾಂಧವರು ಪರಸ್ಪರ ಕೈಕೈ ಹಿಡಿದು ಸೌಹಾರ್ದ ಸಂಚಾರ ಜಾಥಾದಲ್ಲಿ ಹೆಜ್ಜೆ ಹಾಕಿದರು.
ಸುರಿಯುತ್ತಿದ್ದ ಮಳೆಯ ಮಧ್ಯೆಯೂ ಶಿಸ್ತು ಬದ್ದವಾಗಿ ನಡೆದ ಜಾಥಾವು ಪುತ್ತೂರು ಪೇಟೆ ಮೂಲಕ ಸಾಗಿ ಕಿಲ್ಲೆ ಮೈದಾನದಲ್ಲಿ ಸಮಾಪ್ತಿಯಾಯಿತು.

ಕಿಲ್ಲೆ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ಸೌಹಾರ್ದತೆ ಎನ್ನುವುದು ನನಗೆ ಹೊಸತಲ್ಲ, ನಮ್ಮ ಹಿರಿಯರ ಕಾಲದಿಂದಲೂ ಬಂದಿರುವ ಸೌಹಾರ್ದತೆಯ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದೇವೆ, ನಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ ಅದಕ್ಕೆ ಎಲ್ಲ ಧರ್ಮದವರನ್ನು ಆಹ್ವಾನಿಸಿ ಸೌಹಾರ್ದಯುತವಾಗಿ ಆಚರಿಸುತ್ತಿದ್ದೇನೆ, ಅದೇ ರೀತಿ ಇತರ ಧರ್ಮದವರೂ ನನ್ನನ್ನು ಅವರ ಮನೆಯ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ಸೂರ್ಯ, ಗಾಳಿ, ನೀರಿಗೆ ಹೇಗೆ ಬೇಧಭಾವ ಇಲ್ಲವೋ ಅದೇ ರೀತಿ ನಾವೂ ಬೇಧಭಾವ ಮಾಡದೇ ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಜೀವನ ನಡೆಸುವುದೇ ನಿಜವಾದ ಜೀವನ ಎಂದು ಅವರು ಹೇಳಿದರು.


ಪ್ರತಿಯೊಂದು ಧರ್ಮವನ್ನೂ ನಾವು ಗೌರವಿಸಬೇಕು, ಪರಸ್ಪರ ಪ್ರೀತಿ, ವಿಶ್ವಾಸದಿಂದ ಎಲ್ಲರೂ ಒಗ್ಗಟ್ಟಾಗಿ ಜೀವನ ನಡೆಸಬೇಕು ಎಂದ ಅವರು ಸೌಹಾರ್ದ ಸಮಾಜಕ್ಕಾಗಿ ಎಸ್‌ವೈಎಸ್ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.

ಸಹೋದರ ಧರ್ಮದವರು ಸಹಕಾರ ನೆನೆದ ಈಶ್ವರ ಭಟ್
ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆ ಬಳಿ ಹಿಂದೆ ಹೊಂಡ ಇತ್ತು, ಆಗ ನಸೀಬ್ ಬೋರ್‌ವೆಲ್ಸ್‌ನ ಅಬೂಬಕ್ಕರ್ ಅವರು ೫೦೦ ಲೋಡ್‌ಗಿಂತ ಹೆಚ್ಚು ಮಣ್ಣು ಗದ್ದೆಗೆ ಹಾಕಿ ಲೆವೆಲ್ ಮಾಡಿದ್ದಲ್ಲದೇ ಒಂದು ಬೋರ್‌ವೆಲ್ ಕೂಡಾ ಉಚಿತವಾಗಿ ಕೊಟ್ಟಿದ್ದಾರೆ, ಅದೇ ನೀರನ್ನು ನಾವು ಇಂದು ಕುಡಿಯುತ್ತಿದ್ದೇವೆ. ಅದೇ ರೀತಿ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಯೂಸುಫ್ ಸಾಜ ಅವರು ಎಷ್ಟೋ ಲೋಡ್ ಕಟ್ಟಿಗೆಯನ್ನು ಉಚಿತವಾಗಿ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.


ಮುಸ್ಲಿಂ ಬಾಂಧವರು, ಕ್ರೈಸ್ತ ಬಾಂಧವರು ನಮ್ಮ ರಥಬೀದಿಗೆ ಎಷ್ಟೋ ಗೋಣಿ ಸಿಮೆಂಟ್ ಕೊಟ್ಟಿದ್ದಾರೆ, ಕಂಬಳ ನಡೆಯವ ವೇಳೆಯೂ ಸರ್ವಧರ್ಮೀಯರೂ ಸಹಕರಿಸಿದ್ದಾರೆ, ಜೋಸೆಫ್, ಅಬ್ದುಲ್ ಅವರೆಲ್ಲರೂ ಸಹಕಾರ ನೀಡಿದ್ದಾರೆ, ಇದು ನಿಜವಾದ ಧರ್ಮ ಎಂದು ಅವರು ಹೇಳಿದರು.

ಡಾ.ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ ಮಾತನಾಡಿ ಐಕ್ಯತೆ ಈ ದೇಶದ ಉಸಿರಾಗಿದ್ದು ಹಿಂದೂ-ಮುಸ್ಲಿಂ-ಕ್ರೈಸ್ತ ಒಂದುಗೂಡಿ ಪರಸ್ಪರ ನಂಬಿಕೆಯೊಂದಿಗೆ, ಸೌಹಾರ್ದತೆಯೊಂದಿಗೆ ಜೀವನ ನಡೆಸುವುದು ಕಾಲದ ಬೇಡಿಕೆಯಾಗಿದೆ ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಹೆಚ್ಚುತ್ತಿದ್ದು ಅದನ್ನು ಇಲ್ಲದಾಗಿಸಲು ಸರ್ವಧರ್ಮೀಯರು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನ ಉಪಾಧ್ಯಕ್ಷ ಜೆರಾಲ್ಡ್ ಡಿಕಾಸ್ಟಾ ಮಾತನಾಡಿ ಈ ದೇಶದಲ್ಲಿ ಬದುಕುತ್ತಿರುವ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಸಹೋದರ ಸಹೋದರಿಯಂತೆ ಜೀವನ ನಡೆಸಿದರೆ ಈ ಸಮಾಜ ಸುಂದರವಾಗಿರಲು ಸಾಧ್ಯ ಎಂದು ಹೇಳಿದರು. ಪರಸ್ಪರ ನಂಬಿಕೆಯ ಜೀವನ ಪ್ರತಿಯೊಬ್ಬರೂ ನಡೆಸಿದರೆ ಇಲ್ಲಿ ಯಾವುದೇ ಕೋಮುಗಲಭೆ ನಡೆಯಲು ಸಾಧ್ಯವಿಲ್ಲ, ಪ್ರತೀ ಮನೆಯಲ್ಲೂ, ಪ್ರತಿಯೊಬ್ಬರ ಹೃದಯದಲ್ಲೂ ಸೌಹಾರ್ದತೆಯ ದೀಪ ಹಚ್ಚುವ ಮೂಲಕ ಸುಂದರ ನಾಡನ್ನು ನಾವೆಲ್ಲರೂ ಸೇರಿ ಕಟ್ಟೋಣ ಎಂದು ಅವರು ಹೇಳಿದರು.

ಮುಖ್ಯ ಭಾಷಣ ಮಾಡಿದ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಮಾತನಾಡಿ, ನಾಡಿನಲ್ಲಿ ಕಲುಷಿತಗೊಂಡ ವಾತಾವರಣವನ್ನು ಸಂಪೂರ್ಣವಾಗಿ ತೊಡೆದುಹಾಕುವ ಉದ್ದೇಶದೊಂದಿಗೆ ಸೌಹಾರ್ದ ನಡಿಗೆ ಹಮ್ಮಿಕೊಂಡಿದ್ದು ಸಮಾಜದ ಧಾರ್ಮಿಕ ಮುಖಂಡರು ಸೌಹಾರ್ದತೆಯ ರಾಯಭಾರಿಗಳಾಗಬೇಕು, ಮಾನವೀಯತೆಗಿಂತ ಶ್ರೇಷ್ಠವಾದ ಧರ್ಮ ಇನ್ನೊಂದಿಲ್ಲ, ಹಾಗಾಗಿ ಪರಸ್ಪರ ಹೃದಯದಿಂದ ಒಬ್ಬರನ್ನೊಬ್ಬರು ಪ್ರೀತಿಸುವ, ಗೌರವಿಸುವ ಮೂಲಕ ಸೌಹಾರ್ದ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಅವರು ಹೇಳಿದರು.


ಜು.16ರಂದು ಯೆಮೆನ್‌ನಲ್ಲಿ ಕೇರಳದ ನಿಮಿಷಾ ಪ್ರಿಯಾ ಎಂಬ ಮಹಿಳೆಗೆ ಗಲ್ಲು ಶಿಕ್ಷೆಗೆ ನೀಡಲು ಸಿದ್ದತೆ ನಡೆಸಲಾಗಿದ್ದು ಅವರನ್ನು ಬಚಾವ್ ಮಾಡುವ ವಿಚಾರದಲ್ಲಿ ಸರಕಾರಕ್ಕೂ ಕೂಡಾ ಸಾಧ್ಯವಾಗದೇ ಇದ್ದಾಗ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದರು ಮಧ್ಯಸ್ಥಿಕೆ ವಹಿಸಿ ಗಲ್ಲು ಶಿಕ್ಷೆ ವಿಧಿಸುವುದನ್ನು ತಪ್ಪಿಸಲು ಪ್ರಾಥಮಿಕವಾಗಿ ಯಶಸ್ವಿಯಾಗಿದ್ದು ಇದು ನಿಜವಾದ ಮಾನವೀಯತೆ ಮತ್ತು ಭಾರತೀಯತೆಯಾಗಿದೆ ಎಂದು ಅವರು ಹೇಳಿದರು.

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ ಮಾತನಾಡಿ ಕೋಮುದ್ವೇಷ ಭಾಷಣ ಮಾಡುವವರನ್ನು ಬಹಿಷ್ಕರಿಸಿ, ಕೋಮು ಸೌಹಾರ್ದತೆಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಬೇಕು, ಎಲ್ಲ ಧರ್ಮದವರು ಸೇರಿಕೊಂಡು ಕೋಮುವಾದವನ್ನು ಸೋಲಿಸಲು ಸಿದ್ದರಾಗಬೇಕು ಎಂದು ಅವರು ಹೇಳಿದರು. ಎಸ್‌ವೈಎಸ್ ಸೌಹಾರ್ದ ಸಂಚಾರ ಅತ್ಯುತ್ತಮ ಸಂದೇಶವನ್ನು ಈ ಸಮಾಜಕ್ಕೆ ನೀಡುತ್ತಿದ್ದು ಇಂದು ಕೈಕೈ ಹಿಡಿದು ನಡೆದಂತೆ ನಮ್ಮ ಮರಣದ ವರೆಗೂ ಇದೇ ರೀತಿಯ ವಾತಾವರಣ ಇರಲು ನಾವೆಲ್ಲರೂ ಪ್ರಯತ್ನಿಸೋಣ ಎಂದು ಅವರು ಹೇಳಿದರು.

ಪುತ್ತೂರು ಸತ್ಯಸಾಯಿ ಆಸ್ಪತ್ರೆಯ ಎಲುಬು ತಜ್ಞ ಡಾ.ಸತ್ಯ ಸುಂದರ ರಾವ್ ಮಾತನಾಡಿ ಎಲ್ಲರನ್ನೂ ನಾವು ಪ್ರೀತಿಸಬೇಕು ಮತ್ತು ಗೌರವಿಸಬೇಕು, ನಾನು ದೊಡ್ಡವ ಎನ್ನುವ ಭಾವನೆ ನಮ್ಮಲ್ಲಿರಬಾರದು, ಪರಸ್ಪರ ಸಹಕಾರ ಮನೋಭಾವದಿಂದ ಜೀವನ ನಡೆಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಹೇಳಿದರು. ಎಲ್ಲರಲ್ಲೂ ಕೆಂಪು ರಕ್ತ ಹರಿಯುತ್ತಿದೆ, ಯಾರ ರಕ್ತ ಯಾರಿಗೆ ಬೇಕಾದರೂ ಆಗುತ್ತದೆ, ಹಾಗಾಗಿ ನಮ್ಮೊಳಗೆ ಬೇಧಭಾವ ಬೇಡ, ಪರಸ್ಪರ ಒಗ್ಗಟ್ಟಿನ ಮೂಲಕ ನಾವು ಮುಂದುವರಿದರೆ ಎಲ್ಲವೂ ಚೆನ್ನಾಗಿರುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ.ಶ್ರೀಕಾಂತ್, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್ಸೈ ಆಂಜನೇಯ ರೆಡ್ಡಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಆಝಾದ್, ಪ್ರ.ಕಾರ್ಯದರ್ಶಿ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಡಾ.ರಾಮ್‌ಮೋಹನ್, ಡಾ.ಈಶ್ವರ್ ಪ್ರಕಾಸ್, ಡಾ.ಯದುರಾಜ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಸ್ವಾಗತ ಸಮಿತಿ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಆರ್ಥಿಕ ಕಾರ್ಯದರ್ಶಿ ಯುಸುಫ್ ಹಾಜಿ ಕೈಕಾರ, ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಬೋಳೋಡಿ ಚಂದ್ರಹಾಸ ರೈ, ಜೋಕಿಂ ಡಿಸೋಜಾ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಎಸ್‌ಡಿಪಿಐ ತಾಲೂಕು ಅಧ್ಯಕ್ಷ ಅಶ್ರಫ್ ಬಾವು, ಹಮೀದ್ ಸಾಲ್ಮರ, ಮೋನು ಬಪ್ಪಳಿಗೆ, ಅಬ್ದುಲ್ ಖಾದರ್ ಹಾಜಿ ಮೇರ್ಲ, ಅಬೂಬಕ್ಕರ್ ಆರ್ಲಪದವು, ಹಸನ್ ಹಾಜಿ ಸಿಟಿ ಬಜಾರ್, ರಝಾಕ್ ಬಪ್ಪಳಿಗೆ, ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ, ಸಿರಾಜುದ್ದೀನ್ ಸಖಾಫಿ, ಅದ್ದು ಪಡೀಲ್, ಹನೀಫ್ ಬಗ್ಗುಮೂಲೆ ಸ್ವಾಗತ ಸಮಿತಿ ಪ್ರ.ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ, ಸಂಚಾಲಕ ಅಬೂಶಝ ಕೂರ್ನಡ್ಕ, ವೈಸ್ ಚೇರ್‌ಮೆನ್ ಖಾಸಿಂ ಹಾಜಿ ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು.


ಎಸ್.ವೈ.ಎಸ್ ರಾಜ್ಯ ಪ್ರ.ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಶಫೀಕ್ ಮಾಸ್ಟರ್ ತಿಂಗಳಾಡಿ ಸ್ವಾಗತಿಸಿದರು. ಸ್ವಾಗತ ಸಮಿತಿ ಕನ್ವೀನರ್ ಸ್ವಾಲಿಹ್ ಮುರ ವಂದಿಸಿದರು. ಹಸೈನಾರ್ ಹಾಗೂ ಹಾರಿಸ್ ಮದನಿ ಪಾಟ್ರಕೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here