ನೆಲ್ಯಾಡಿ: ಇಲ್ಲಿಗೆ ಸಮೀಪ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ಜು.17ರಂದು ಬೆಳಿಗ್ಗೆ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ಇಲ್ಲಿ ಗುಡ್ಡ ಅಗೆದು ರಸ್ತೆ ನಿರ್ಮಾಣ ಮಾಡಲಾಗಿದೆ. ನೇರವಾಗಿ ಗುಡ್ಡ ಅಗೆದಿರುವುದರಿಂದ ಮಳೆಗೆ ಮಣ್ಣು ಸಡಿಲಗೊಂಡು ಕುಸಿಯುತ್ತಿದೆ. ಈ ಭಾರಿಯ ಮಳೆಗಾಲದಲ್ಲಿ ಈಗಾಗಲೇ ನಾಲ್ಕೈದು ಸಲ ಇಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಬೆಳಿಗ್ಗೆ ಗುಡ್ಡ ಕುಸಿತಗೊಂಡಿದ್ದು ಭಾರೀ ಪ್ರಮಾಣದಲ್ಲಿ ಮಣ್ಣು ಚತುಷ್ಪಥ ರಸ್ತೆ ಮೇಲೆ ಬಿದ್ದಿರುವುದರಿಂದ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ರಸ್ತೆಯ ಎರಡೂ ಕಡೆಯು ವಾಹನಗಳು ಸಾಲುಗಟ್ಟಿ ನಿಂತಿವೆ.

ಮಣ್ಣು ತೆರವು ಆರಂಭ:
ರಸ್ತೆಗೆ ಬಿದ್ದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೂ ಮಣ್ಣು ಕುಸಿಯುತ್ತಲೇ ಇದೆ. ಮಣ್ಣು ತೆರವು ಕಾರ್ಯ ಮಧ್ಯಾಹ್ನದವರೆಗೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.