@ ಸಿಶೇ ಕಜೆಮಾರ್
ಪುತ್ತೂರು: ‘ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಾಳೆ ಶಾಲೆ,ಕಾಲೇಜುಗಳಿಗೆ ರಜೆ ಸಾರಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ’ ಇಂಥದೊಂದು ಮಾತು ಕಳೆದೆರಡು ವರ್ಷಗಳಿಂದ ಪ್ರತಿ ಮಳೆಗಾಲದಲ್ಲೂ ಟಿವಿ, ಪತ್ರಿಕೆ, ವೆಬ್ಸೈಟ್ಗಳಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಕೆಲವೊಂದು ಪೋಕರಿಗಳು ಬೇಕಂತಲೇ ಆದೇಶವನ್ನು ತಿರುಚಿ ಮಳೆ ಇಲ್ಲದ ದಿನವೂ ರಜೆ ಇದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದಂತೆ ಮಾಡುವುದು ಇದೆ. ಜೋರು ಮಳೆ ಮತ್ತು ಶಾಲೆಗೆ ರಜೆ ಈ ಪರಿಪಾಠ ಶುರುವಾಗಿದ್ದು ,ಕೆಲವು ವರ್ಷಗಳ ಹಿಂದೆಯಷ್ಟೇ ಅದರಲ್ಲೂ ಮಂಗಳೂರಿಗೆ ಮುಲ್ಲೈ ಮುಹಿಲನ್ರವರು ಜಿಲ್ಲಾಧಿಕಾರಿಯಾಗಿ ಬಂದ ಬಳಿಕವಂತೂ ಮಳೆಯೂ ಜಾಸ್ತಿ, ಶಾಲೆಗೂ ರಜೆಯೂ ಜಾಸ್ತಿ ಅದಕ್ಕಾಗಿಯೇ ಮಕ್ಕಳಿಗೆ ಅಚ್ಚುಮೆಚ್ಚಿನ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಕೆಲವೊಮ್ಮೆ ಮಳೆಯ ಕಾರಣ ನಾಳೆ ಶಾಲೆಗೆ ರಜೆ ಘೋಷಿಸಲಾಗಿದೆ ಎಂಬ ಆದೇಶ ಬಂದ ಮರುದಿನ ಮಳೆಯೇ ಇರದೇ ಬಿಸಿಲು ಮೂಡುವುದು ಇದೆ. ಇಂತಹ ಸನ್ನಿವೇಶಗಳು ಹಲವು ಬಾರಿ ಸಂಭವಿಸಿವೆ. ಇದರಿಂದಾಗಿ ಹಲವು ಬಾರಿ ಶಾಲೆಗೆ ರಜೆ ಕೊಟ್ಟದ್ದು ಟ್ರೋಲ್ ಕೂಡ ಆಗಿದೆ. ‘ಮಳೆಯನ್ನು ನಿಲ್ಲಿಸುವ ಸುಲಭ ಉಪಾಯ ಶಾಲೆಗೆ ರಜೆ ಘೋಷಣೆ ಮಾಡುವುದು..’ ಎಂಬಿತ್ಯಾದಿಯಾಗಿ ಸಾರ್ವಜನಿಕರು ಆಡಿಕೊಂಡದ್ದು ಇದೆ. ಕೆಲವು ಮಂದಿ ಇನ್ನೂ ಮುಂದುವರಿದೂ ಜಿಲ್ಲಾಧಿಕಾರಿಗೆ ಶಾಪ ಹಾಕಿದ್ದು ಉಂಟು. ಮನೆಯಲ್ಲಿ ತಾಯಂದಿರು ಮಾತ್ರ ಮಕ್ಕಳ ಉಪದ್ರ ತಡೆಯಲು ಆಗದೆ ಅದೆಷ್ಟೋ ಶಾಪ ಹಾಕಿದ್ದಾರೋ ಗೊತ್ತಿಲ್ಲ ಆದರೆ ಒಂದಂತೂ ಸತ್ಯ. ಶಾಲೆಗೆ ರಜೆ ಕೊಡುವುದರ ಹಿಂದೆ ಜಿಲ್ಲಾಧಿಕಾರಿಯವರಿಗೂ ಒಂದು ಜವಬ್ದಾರಿ, ಕಾಳಜಿ ಇದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಸುಖಾಸುಮ್ಮನೆ ರಜೆ ಕೊಟ್ಟಿಲ್ಲ, ಹವಾಮಾನ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳ ಅಭಿಪ್ರಾಯ ಪಡೆದುಕೊಂಡೇ ಅವರು ರಜೆ ಘೋಷಣೆ ಮಾಡಿರುತ್ತಾರೆ.

ಅಪಹಾಸ್ಯ ಬೇಡ, ಜಿಲ್ಲಾಧಿಕಾರಿಗೂ ಜವಬ್ದಾರಿ ಇದೆ
ಜಿಲ್ಲಾಧಿಕಾರಿಯವರು ರಜೆ ಘೋಷಣೆ ಮಾಡಿದ ಕೂಡಲೇ ಮಳೆ ನಿಂತು ಬಿಡ್ತು ಎನ್ನುವ ಮೊದಲು ಜಿಲ್ಲಾಧಿಕಾರಿಗಳಿಗೆ ರಜೆ ನೀಡುವಲ್ಲಿ ಜವಾಬ್ದಾರಿ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಒಬ್ಬ ಜಿಲ್ಲಾಧಿಕಾರಿಯಾದವರಿಗೆ ಇಡೀ ಜಿಲ್ಲೆಯ ಜವಬ್ದಾರಿ ಇರುತ್ತದೆ. ಜಿಲ್ಲೆಯಲ್ಲಿ ಯಾವುದೇ ಅವಘಡ ಸಂಭವಿಸಿದರೂ ಅವರ ತಲೆಗೆ ಬರುತ್ತದೆ. ಮಳೆ ರಜೆ ಘೋಷಣೆ ಮಾಡುವ ಮುನ್ನ ಜಿಲ್ಲೆ, ತಾಲೂಕುಗಳಲ್ಲಿ ಬೀಳುವ ಮಳೆಯ ಪ್ರಮಾಣವನ್ನು ಗಮನಿಸುತ್ತಾರೆ. ಹವಾಮಾನ ಇಲಾಖೆಯ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಅವರಿಂದ ಕಾಲಕಾಲಕ್ಕೆ ವರದಿ ಪಡೆದುಕೊಂಡು ಇತರ ಇಲಾಖೆಗಳ ಮಾಹಿತಿ ಪಡೆದುಕೊಂಡು ಕೊನೆಗೆ ರಜೆ ಘೋಷಣೆ ಮಾಡುತ್ತಾರೆ.
ಅಂಗನವಾಡಿ-ಶಾಲೆಗಳಿಗೆ ಪ್ರಥಮ ಆದ್ಯತೆ
ಜಿಲ್ಲಾಧಿಕಾರಿಯವರು ಮೊದಲು ರಜೆ ಕೊಡುವುದು ಅಂಗನವಾಡಿಯಿಂದ ಹತ್ತನೆಯ ತರಗತಿಯವರೆಗೆ ಮಾತ್ರ ಆ ಬಳಿಕ ಮಳೆಯ ತೀವ್ರತೆ ನೋಡಿಕೊಂಡು ಕಾಲೇಜುಗಳಿಗೂ ರಜೆ ವಿಸ್ತರಿಸುತ್ತಾರೆ. ಇಲ್ಲಿ ಇದು ಕೂಡ ಟ್ರೋಲ್, ಕೋಪಕ್ಕೆ ಗುರಿಯಾಗುವುದು ಇದೆ. ಹಾಗಾದರೆ ಕಾಲೇಜಿಗೆ ಹೋಗುವವರು ಮಕ್ಕಳಲ್ಲವೇ? ಎಂಬಿತ್ಯಾದಿ ಮಾತುಗಳು ಬರುತ್ತವೆ. ಸಾಮಾನ್ಯವಾಗಿ ಪ್ರೌಢ ಹಂತದ ಮಕ್ಕಳಿಗೆ ಸ್ವಯಂ, ಸಾಂದರ್ಭಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಚಿಕ್ಕ ಮಕ್ಕಳಿಗೆ ಈ ಹಳ್ಳ, ಕೊಳ್ಳ,ನದಿಗಳನ್ನು ದಾಟಿ ಹೋಗುವುದು ಕಷ್ಟ ಸಾಧ್ಯ. ಈ ವಯಸ್ಸಿನ ಮಕ್ಕಳಿಗೆ ಕೂತೂಹಲ ಕೂಡ ಜಾಸ್ತಿ ಇರುತ್ತದೆ. ಮಳೆ ನೀರು ಹರಿಯುತ್ತಿದ್ದರೆ ಅದಕ್ಕೆ ಕಾಲು ಹಾಕುವುದು, ಮೀನು ಹಿಡಿಯುವುದು ಇತ್ಯಾದಿ ಇದರಿಂದ ಅನಾಹುತ ಸಂಭವಿಸುವ ಸಾಧ್ಯತೆಯೂ ಇದೆ. ಬಾಲ್ಯದಲ್ಲಿ ಏನೇ ಆದರೂ ಮಕ್ಕಳಾಟಿಕೆ ಜಾಸ್ತಿ ಇದು ಅಪಾಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯೂ ಇದೆ. ಆದರೆ ಕಾಲೇಜು ವಿದ್ಯಾರ್ಥಿಗಳಿಗೆ ಬುದ್ದಿ ಶಕ್ತಿ ಸ್ವಲ್ಪಮಟ್ಟಿಗೆ ಬೆಳೆದಿರುತ್ತದೆ. ಆದರೂ ಮಳೆ ಜಾಸ್ತಿ ಇದ್ದರೆ ಕಾಲೇಜಿಗೂ ರಜೆ ಸಾರುತ್ತಾರೆ. ಇಲ್ಲಿ ಮಕ್ಕಳ ಮೇಲಿನ ಕಾಳಜಿ ಹಾಗೂ ಸುರಕ್ಷತೆ ಎದ್ದು ಕಾಣುತ್ತದೆ.
ಕಲಿಕೆಗೆ ತೊಂದರೆಯಾಗಲಿದೆಯಾ…?
ಹೀಗೊಂದು ಪ್ರಶ್ನೆ ಕೂಡ ಹಲವರಲ್ಲಿ ಮೂಡುತ್ತದೆ. ಮಳೆಗೆ ಹೀಗೆ ಸಾಲು ಸಾಲು ರಜೆ ಕೊಟ್ಟರೆ ಮಕ್ಕಳು ಓದುವುದು ಯಾವಾಗ? ಕಲಿಕೆಗೆ ಸಮಯ ಕಡಿಮೆಯಾಗುವುದಿಲ್ಲವೇ ಎಂದು ಕೇಳುವವರಿದ್ದಾರೆ. ಮಳೆಯ ತೀವ್ರತೆ,ಭೀಕರತೆಯನ್ನು ಅರ್ಥ ಮಾಡಿಕೊಂಡೇ ಅಧಿಕಾರಿಗಳು ರಜೆ ಘೋಷಣೆ ಮಾಡುತ್ತಾರೆ ಅದು ಬಿಟ್ಟು ಇಲ್ಲಿ ಕಲಿಕೆಗೆ ತೊಂದರೆಯಾಗುತ್ತದೆ ಎನ್ನುವುದಕ್ಕಿಂತಲೂ ಮಕ್ಕಳ ಜೀವದ ಸುರಕ್ಷತೆ ಬಹಳ ಮುಖ್ಯವಾಗುತ್ತದೆ. ಮಳೆಗಾಲ ಮುಗಿದ ಮೇಲೆ ಮಳೆಯಿಂದ ನಷ್ಟವಾದ ದಿನವನ್ನು ಶನಿವಾರ ಇಡೀ ದಿನ ತರಗತಿ ಮಾಡುವ ಮೂಲಕವೂ ಭರ್ತಿ ಮಾಡಿಕೊಳ್ಳಬಹುದಾಗಿದೆ ಅದೇನಿದ್ದರೂ ಶಿಕ್ಷಕರಿಗೆ ಬಿಟ್ಟ ವಿಚಾರವಾಗಿದೆ. ಅದೇನೇ ಇರಲಿ ಜಿಲ್ಲಾಧಿಕಾರಿಗಳು ಅಥವಾ ತಾಲೂಕು ದಂಡಾಧಿಕಾರಿಗಳು ಮಳೆ ರಜೆ ಘೋಷಣೆ ಮಾಡಿದರೆ ಅದರ ಬಗ್ಗೆ ವ್ಯಂಗ್ಯ, ಅಪಹಾಸ್ಯ, ಟ್ರೋಲ್ ಮಾಡುವ ಬದಲು ಅವರಿಗೂ ಜವಬ್ದಾರಿ, ಕಾಳಜಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಮಳೆಯಿಂದ ವಿದ್ಯಾರ್ಥಿಗಳಿಗೆ, ಶಾಲೆಗಳಿಗೆ ತೊಂದರೆಯಾದರೆ ನಾವು ಕೂಡ ಸಹಾಯ ಹಸ್ತ ಚಾಚೋಣ….
ರಜೆ ಕೊಟ್ಟರೆ ಮಳೆ ನಾಪತ್ತೆ…!?
ಹಲವು ಬಾರಿ ಹೀಗೆ ಆಗಿದ್ದು ಉಂಟು…
ಜಿಲ್ಲಾಧಿಕಾರಿಗಳಿಗೆ ಮಕ್ಕಳ ಮೇಲಿನ ಕಾಳಜಿ ಮತ್ತು ಸುರಕ್ಷತೆಗೆ ಹ್ಯಾಟ್ಸ್ಅಫ್ ಹೇಳಲೇಬೇಕಾಗಿದೆ ಹಾಗಿದ್ದರೂ ಒಂದಂತು ಸತ್ಯ. ಹಿಂದಿನ ಜಡಿಮಳೆ ಸುರಿಯುತ್ತಿದ್ದು ನಾಳೆ ಶಾಲೆಗೆ ರಜೆ ಅಂತ ಘೋಷಣೆ ಮಾಡಿದ್ದೆ ತಡ ಮರುದಿನ ಮಳೆಯೇ ನಾಪತ್ತೆಯಾಗಿ ಬಿಟ್ಟದ್ದು ಇದೆ. ಹವಾಮಾನ ಇಲಾಖೆಯು ಮುಂದಿನ ಎರಡು ದಿನ ಭಾರೀ ಮಳೆ ಎಂದು ಘೋಷಣೆ ಮಾಡಿದರೆ ಮುಂದಿನೆರಡು ದಿನ ಬಿಸಿಲೇ ಬರುವುದು ಉಂಟು. ಇದಕ್ಕೇನೂ ಮಾಡಲು ಸಾಧ್ಯವಿಲ್ಲ ಏಕೆಂದರೆ ಪ್ರಕೃತಿಯ ಮುಂದೆ ನಾವು ಏನೇನೂ ಅಲ್ಲ…