ಶಾಲೆಗಳಲ್ಲಿ ‘ಪೌಷ್ಠಿಕ ವನ’ ದ ಮಹತ್ವ

0


ನಮ್ಮ ದೇಶ ಭಾರತ. ಕೃಷಿ ಪ್ರಧಾನ ದೇಶವೂ ಹೌದು. ನಮ್ಮ ದೇಶದ ಬೆನ್ನೆಲುಬೇ ಕೃಷಿ ಎಂದು ನಮಗೆಲ್ಲಾ ತಿಳಿದಿರುವ ವಿಚಾರ. ಆದ್ದರಿಂದ ಕೃಷಿಕನಿಲ್ಲದೆ ನಮಗೆ ಬದುಕೇ ಇಲ್ಲ.
ಹಾಗಾದರೆ ನಾವೆಲ್ಲಾ ಕೃಷಿಯ ಮಹತ್ವವನ್ನು ತಿಳಿಯುವುದು, ಕೃಷಿಯಲ್ಲಿ ತೊಡಗಿಕೊಳ್ಳೋದು ನಮ್ಮ ಜೀವನದ ಜೀವಾಳ. ಅತ್ಯುತ್ತಮವಾದ ಕೃಷಿ ಪ್ರಧಾನ ದೇಶ ಸೃಷ್ಟಿಯಾಗಬೇಕಾದರೆ ಅದಕ್ಕೆ ಮೊದಲು ಬೇಕಾದುದು ಉತ್ತಮ ಗುಣಮಟ್ಟದ ಶಿಕ್ಷಣ. ನಾವೆಲ್ಲರೂ ಶಿಕ್ಷಣದಲ್ಲಿ ಉತ್ತುಂಗ ಶಿಖರಕ್ಕೇರಿ ಆಗಿದೆ.


ಆದರೆ, ಮನುಷ್ಯ ಈ ಪುಣ್ಯ ಭೂಮಿಯಲ್ಲಿ ಹುಟ್ಟಿ “ಹಕ್ಕಿಯಂತೆ ಆಕಾಶದಲ್ಲಿ ಹಾರಾಡಲು ಕಲಿತಿದ್ದಾನೆ, ಮೀನಿನಂತೆ ನೀರಿನಲ್ಲಿ ಈಜಾಡಲು ಕಲಿತಿದ್ದಾನೆ. ಆದರೆ ಮನುಷ್ಯ ಮನುಷ್ಯನಂತೆ ಬದುಕಲು ಕಲಿತಿಲ್ಲ” ಎಂಬ ಹಿರಿಯರ ನುಡಿಮುತ್ತನ್ನು ಕೇಳಿರಬಹುದು ಹೀಗಿರುವಾಗ ನಾವೆಲ್ಲರೂ ಮೊದಲು ಮನುಷ್ಯತ್ವವನ್ನು ಪಡೆಯಬೇಕು, ನಂತರ ಉತ್ತಮ ಶಿಕ್ಷಣ ಪಡೆಯಬೇಕು. ಇಂದು ನಾವು ಚಂದ್ರನ ನೆಲದಲ್ಲಿ ಬೀಜ ಬಿತ್ತಿ ಸಸಿಯನ್ನು ಬೆಳೆಸಲು ಸಂಶೋಧನೆ ಮಾಡುತ್ತಿದ್ದೇವೆ, ಸಂತೋಷ. ಆದರೆ ಈ ಭೂಮಿಯಲ್ಲಿ ಫಲವತ್ತಾದ ಮಣ್ಣು, ಗೊಬ್ಬರ, ಮತ್ತು ಬೇಕಾದಷ್ಟು ನೀರು ಇರುವ ಈ ನೆಲದಲ್ಲಿ ಒಂದು ಅತ್ಯುತ್ತಮ ಸಸಿ ನೆಡುವುದು ಹೇಗೆ?, ಅದನ್ನು ಶಾಶ್ವತವಾಗಿ ಬದುಕಿಸುವುದು ಹೇಗೆ? ಎಂಬುದನ್ನು ಕಲಿಯಲು ಮರೆತಿದ್ದೇವೆ. ನಾವು ಈ ಭೂಮಿಯಲ್ಲಿ ನಮಗೆ ಹಿರಿಯರು ಬಳುವಳಿಯಾಗಿ ಬಿಟ್ಟು ಹೋದ ಈ ನೆಲದಲ್ಲಿ ಉತ್ತಮವಾದ ಬೆಳೆ ಬೆಳೆಯಲು ಮೊದಲು ಪ್ರಯತ್ನಿಸಬೇಕಾಗಿದೆ.


ಇಂದಿನ ಜನಾಂಗವೇ ಮುಂದಿನ ಪ್ರಜೆಗಳು, ಆ ಪ್ರಜೆಗಳಿಂದಲೇ ಈ ದೇಶದ ಅಳಿವು ಉಳಿವಿನ ಪ್ರಶ್ನೆ. ಆದ್ದರಿಂದ ಮುಂದಿನ ಜನಾಂಗವನ್ನು ‌ಸರಿದಾರಿಗೆ ತಂದು ಈ ಭೂಮಿಯನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ. ಇದಕ್ಕೆ ಪರಿಹಾರವೇ ನಮ್ಮ ಶಾಲಾ ಮಕ್ಕಳಿಗೆ ಉತ್ತಮವಾದ ಕೃಷಿ ಪಾಠವನ್ನು ತಿಳಿಸುತ್ತಾ ಶಿಕ್ಷಣವನ್ನು ನೀಡುವ ಅಗತ್ಯ ಶಿಕ್ಷಕರ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ.
“ಆರೋಗ್ಯವೇ ಭಾಗ್ಯ” ಇದ್ರೆ ನಂತರದ ಭಾಗ್ಯ ಇಲ್ಲ ಎಂಬುದು ಹಿರಿಯರ ಮಾತು. ಹಿಂದಿನ ನಮ್ಮ ಹಿರಿಯರು ಈ ಭೂಮಿಯನ್ನು ಹೇಗೆ ಇಟ್ಟುಕೊಂಡಿದ್ದರು ಎಂಬುವುದನ್ನು ನಾವೆಲ್ಲರೂ ತಿಳಿದ ವಿಷಯ. ಆದರೆ ಇತ್ತೀಚೆಗಿನ (10-15 ವರ್ಷ ಗಳಿಂದ) ಈ ಭೂಮಿಯು ಪ್ಲಾಸ್ಟಿಕ್ ಮಯವಾಗಿ ಬಿಟ್ಟಿದೆ. ಇನ್ನು ಮುಂದಿನ ದಿನಗಳು ಹೀಗೆ ಮುಂದುವರೆದರೆ ನಮ್ಮ ಈ ಪುಣ್ಯ ಭೂಮಿ ಯಾವ ರೀತಿ ಆಗಬಹುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣ ಆಗುವುದರಲ್ಲಿ ಸಂಶಯವವೇ ಇಲ್ಲ. ಇದಕ್ಕೆ ಪರಿಹಾರ ಒಂದೇ. ನಮ್ಮ ದೇಶ ಬಡವರಿಂದ ತುಂಬಿ ತುಳುಕುತ್ತಾ ಇದೆ. ಆದರೆ, ನಾವು ಹೇಳಿಕೊಳ್ಳುತ್ತಿದ್ದೇವೆ, ನಾವು ಬಹಳ ಮುಂದುವರೆದಿದ್ದೇವೆಂದು. ಇಲ್ಲಿ, ನಾವು ತಂತ್ರಜ್ಞಾನದಲ್ಲಿ ಮುಂದುವರೆದಿರಬಹುದು. ಆದರೆ, ಆರೋಗ್ಯದ ಕಾಳಜಿ ಬಹಳ ಬಹಳ ಕಡಿಮೆಯಿದೆ. ನಮ್ಮ ಮಕ್ಕಳಿಗೆ ಅದರಲ್ಲೂ ಸರ್ಕಾರಿ ಶಾಲೆಗೆ ಬರುವ ತುಂಬಾ ಹಿಂದುಳಿದ ಮಕ್ಕಳನ್ನು ಮುಂದೆ ಕೊಂಡು ಹೋಗುವುದು ನಮ್ಮ ಶಿಕ್ಷಕರ ಜವಾಬ್ದಾರಿ ಹೆಚ್ಚಿನದಾಗಿದೆ. ಮಕ್ಕಳಿಗೆ ಎಳವೆಯಿಂದಲೇ ಕೃಷಿ ಪಾಠವನ್ನು ಶಿಕ್ಷಣದ ಮೂಲಕ ಕ್ರಮಬದ್ಧವಾದ ಶಿಕ್ಷಣ ನೀಡುವುದಾಗಿದೆ. ಈ ಹಿಂದಿನವರು ಕೃಷಿಯನ್ನು ಕಲಿತಿದ್ದಾರೆ. ಆದರೆ, ಶಿಕ್ಷಣದೊಂದಿಗೆ ಕೃಷಿಯನ್ನು ಸರಿಯಾದ ಕ್ರಮದಲ್ಲಿ ಎಲ್ಲರೂ ಕಲಿತಿಲ್ಲ.
ಆದ್ದರಿಂದಲೇ ಇತ್ತೀಚಿಗಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ (ಅನುದಾನಿತ, ಖಾಸಾಗಿ ಶಾಲೆಗಳನ್ನು ಸೇರಿಸಿಕೊಂಡು) ಇಕೋ ಕ್ಲಬ್ ಮೂಲಕ ‘ ತಾಯಿಗೊಂದು ಮರ’ ವನ್ನು ಬೆಳೆಸುವ ಮಹತ್ವವನ್ನು ಸಾರಿ ಹೇಳುತ್ತಿದೆ. ಅದರೊಂದಿಗೆ ನಮ್ಮ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ‘ಪೌಷ್ಠಿಕ ವನ’ ದ ಮಹತ್ವವನ್ನೂ ಸಾರಿ ಹೇಳುತ್ತಿದೆ. ಎಲ್ಲಾ ಮಕ್ಕಳು ಆರೋಗ್ಯವಂತರಾಗಿ ಬೆಳೆಯಲಿ ಎಂದು ಸರ್ಕಾರಿ ಶಾಲೆಗಳಲ್ಲಿ ಕ್ಷೀರಭಾಗ್ಯ, ಬಿಸಿಯೂಟ, ಮೊಟ್ಟೆ, ಮೊಟ್ಟೆ ಸೇವಿಸದಿರುವವರಿಗೆ ಬಾಳೆಹಣ್ಣು, ಶಾಯಿ ಶುಗರ್ ರಾಗಿ(ವಾರದ ಎಲ್ಲಾ ದಿನಗಳಲ್ಲೂ) ಇತ್ಯಾದಿ ನೀಡಲು ಪ್ರಾರಂಭಿಸಿರುವುದೇ ಇದೇ ಉದ್ದೇಶದಿಂದ. ಮಕ್ಕಳೆಲ್ಲರೂ ನಿರಂತರ ಹಾಜರಾತಿ ಯೊಂದಿಗೆ ಈ ಎಲ್ಲಾ ಸೌಲಭ್ಯ ಪಡೆಯುತ್ತಾ ಅತ್ತ್ಯುತ್ತಮ ಗುಣಮಟ್ಟದ ಶಿಕ್ಷಣ ಪಡೆದಲ್ಲಿ ಮುಂದಿನ ದಿನಗಳು ಅತ್ಯಂತ ಉತ್ತಮ ದಿನಗಳಾಗಿ ಪರಿವರ್ತನೆ ಆಗುವುದರಲ್ಲಿ ಸಂಶಯವೇ ಇಲ್ಲ.


ಇದಕ್ಕಾಗಿ ಸರ್ಕಾರ ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ತಾಜಾ ತರಕಾರಿ ಬೆಳೆಸಲು ತಿಳಿಸುತ್ತಲೇ ಬಂದಿದೆ. ಅದಕ್ಕೇ ಅತ್ಯುತ್ತಮ ಪ್ರೋತ್ಸಾಹ ನೀಡುತ್ತಿದೆ. ಅದೇ ‘ಪೌಷ್ಠಿಕ ವನ’.
ನಾವು ಶಾಲೆಗಳಲ್ಲಿ ‘ಪೌಷ್ಠಿಕ ವನ’ನಿರ್ಮಾಣ ಮಾಡಲು ಅಷ್ಟೇನೂ ಕಷ್ಟದ ವಿಷಯವಲ್ಲ. ಹಿರಿಯರ ಮಾತಿನಂತೆ ‘ ಮನಸ್ಸಿದ್ದರೆ ಮಾರ್ಗ’. ನಾವು ಅದನ್ನು ಇಷ್ಟ ಪಟ್ಟು ಮಾಡುವ ಮನಸ್ಸೊಂದಿದ್ದರೆ ಬಹಳ ಸುಲಭ ಸಾಧ್ಯ. ಅದಕ್ಕೆ ಈ ‘ಮಳೆಗಾಲ’ ಅಂತೂ ಅತ್ಯುತ್ತಮ ಕಾಲ. ಜೂನ್ ಜುಲೈ ತಿಂಗಳಲ್ಲಿ ನಾವು ಬಿತ್ತನೆ ಪ್ರಾರಂಭಿಸಿದರೆ ಸುಮಾರು 5-6 ತಿಂಗಳವರೆಗೆ ನೀರೊದಗಿಸುವ ಶ್ರಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಬಹಳ ಕಡಿಮೆ. ಸರ್ಕಾರಿ ಶಾಲೆಗೆ ಬರುವ ಮಕ್ಕಳೆಲ್ಲಾ ಅದರಲ್ಲೂ ಗ್ರಾಮೀಣ ಭಾಗದ ಪ್ರದೇಶದಿಂದ ಬರುವ ಮಕ್ಕಳಲ್ಲಿ ಬಹುತೇಕ ಸುಮಾರು 75% ದಷ್ಟು ಕೃಷಿಯ ಅನುಭವ ಇರುವವರೇ ಇರುತ್ತಾರೆ. ಯಾಕೆಂದರೆ ಅವರ ಪೋಷಕರೆಲ್ಲಾ ಹೆಚ್ಚಿನವರು ಕೃಷಿಕರೇ. ಆದ್ದರಿಂದ ನಮ್ಮ ಗ್ರಾಮೀಣ ಸರಕಾರಿ ಶಾಲೆಗಳಲ್ಲಿ ‘ಪೌಷ್ಠಿಕ ವನ’ ನಿರ್ಮಾಣ ಮಾಡಲು ಬಹಳ ಸುಲಭ. ಕೃಷಿಗೆ ಬೇಕಾದ ಬೇರೆ ಬೇರೆ ಅತ್ಯುತ್ತಮ ತರಕಾರಿ ಬೀಜಗಳು, ಅದಕ್ಕೆ ರಕ್ಷಣೆಯೊದಗಿಸಲು ಬೇಲಿಯ ವ್ಯವಸ್ಥೆಯನ್ನು ಆ ಶಾಲೆಯ ಪೋಷಕರೇ ವ್ಯವಸ್ಥೆ ಮಾಡುತ್ತಾರೆ. ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಕರು ಸಿಕ್ಕರಂತೂ ಬಹಳ ಖುಷಿಯಿಂದ ಉತ್ತಮ ಬೀಜ ಮಾತ್ರವಲ್ಲ, ಉತ್ತಮ ಪ್ರೆಶ್ ತರಕಾರಿಗಳನ್ನೂ ಶಾಲೆಗೆ, ಅದರೊಂದಿಗೆ ಸ್ವಲ್ಪ ಮನೆಗೂ ಇರ್ಲಿ ಎಂದು ಹೇಳಿ ಸ್ವಲ್ಪ ಬೇರೆಯೇ ತರಕಾರಿಗಳನ್ನು ಬೇಡವೆಂದರೂ ಕೊಟ್ಟು ಶಿಕ್ಷಕರನ್ನು ಮತ್ತಷ್ಟು ಖುಷಿಪಡಿಸಿ ಹೋಗುತ್ತಾರೆ. ಇದಕ್ಕೆಲ್ಲಾ ಬೇಕಾಗಿರುವುದು ಪೋಷಕರಿಗೆ ಜ್ಞಾನದ ಅರಿವನ್ನು ನೀಡುವ ಅತ್ಯುತ್ತಮ ಶಿಕ್ಷಕರು.


ಶಾಲೆಗಳಲ್ಲಿ ‘ತರಕಾರಿ ತೋಟ’ ಗಳನ್ನು ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಪ್ರತಿನಿತ್ಯ ತರಕಾರಿಗಳನ್ನು ಪೇಟೆಯಿಂದ ಹೊತ್ತು ಕೊಂಡು ಬರುವ ಶಿಕ್ಷಕರನ್ನು ಕಣ್ಣಾರೆ ಕಾಣುತ್ತಿದ್ದೇವೆ. ಅಷ್ಟು ಕಷ್ಟ ಪಟ್ಟರೂ ಶಿಕ್ಷಕರಂತೂ ಉದ್ದಾರವಾಗುವುದು ಖಂಡಿತಾ ಸಾಧ್ಯವಿಲ್ಲ. ಪೇಟೆಯಲ್ಲಿ ಸಿಗುವ ಆಹಾರ ಪದಾರ್ಥಗಳೆಲ್ಲಾ ವಿಷಮಯವಾಗಿದ್ದು, ಈ ಕಾರಣದಿಂದಲೇ ನಾವು ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯವಾಗಿಲ್ಲ. ‘ಬೆಳ್ಳಗೆ ಕಾಣುವುದೆಲ್ಲಾ ಹಾಲಲ್ಲ’ ಎಂಬ ಗಾದೆಯಂತೆ ಪೇಟೆಯಲ್ಲಿ ಆಕರ್ಷಣೀಯವಾದ ತರಕಾರಿಗಳು ನಮಗೆ ಕಂಡರೂ ಅದನ್ನು ಕೊಂಡವರೆಲ್ಲಾ ತಮ್ಮ ಇದ್ದ ಆರೋಗ್ಯವನ್ನೂ ಕಳೆದುಕೊಳ್ಳುವಂತಾಗಿದೆ. ಆದ್ದರಿಂದಲೇ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಉತ್ತಮವಾದ’ಪೌಷ್ಠಿಕ ವನ’ ನಿರ್ಮಾಣ ಮಾಡಲು ಪ್ರೋತ್ಸಾಹಿಸುತ್ತಿದೆ. ನಾವು ನಮ್ಮ ಶಾಲೆಗಳಲ್ಲಿ ನಮ್ಮಲ್ಲೇ ಇರುವ ಕೃಷಿಕ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ವಿಷಮುಕ್ತ ಆಹಾರವನ್ನು ಪಡೆಯೋಣ, ಮುಂದಿನ ಜನಾಂಗ ಆರೋಗ್ಯವಂತ ಜನಾಂಗವಾಗಲಿ ಎಂಬುದೇ ನಮ್ಮೆಲ್ಲರ ಆಶಯ.
✍🏻. ಜಗನ್ನಾಥ ಎಸ್. ಪುಂಡಿಕಾಯಿ, ಶಿಕ್ಷಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮೈ

LEAVE A REPLY

Please enter your comment!
Please enter your name here