ರಾಮಕುಂಜ: ಕಡಬ ತಾಲೂಕಿನ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾ.ಮಂಜುನಾಥ ಸಿ.ಅವರು ಖಾಯಂ ವೈದ್ಯಾಧಿಕಾರಿ ನೇಮಕಗೊಂಡಿದ್ದು ಕರ್ತವ್ಯಕ್ಕೆ ಹಾಜರಾಗಿದ್ದು ಇವರಿಗೆ ಜನಪರ ಹೋರಾಟ ಸಮಿತಿ ವತಿಯಿಂದ ಸ್ವಾಗತ ಕೋರಲಾಯಿತು.
7 ಗ್ರಾಮಗಳ ವ್ಯಾಪ್ತಿಗೆ ಬರುವ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಲವಾರು ವರ್ಷಗಳಿಂದ ಖಾಯಂ ವೈದ್ಯಾಧಿಕಾರಿ ಇಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದರು. ಖಾಯಂ ವೈದ್ಯಾಧಿಕಾರಿ ನೇಮಕಗೊಳಿಸಬೇಕೆಂದು ಒತ್ತಾಯಿಸಿ ಈ ಹಿಂದೆ ಗ್ರಾಮಸ್ಥರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ನೆಲ್ಯಾಡಿ ಹಾಗೂ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ವಾರದಲ್ಲಿ ತಲಾ 3 ದಿನ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಲಾಗಿತ್ತು. ಇದೀಗ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ತಿಮ್ಮಯ್ಯ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ ಅವರ ಶಿಫಾರಸ್ಸಿನ ಮೇರೆಗೆ ನೂತನ ಖಾಯಂ ವೈದ್ಯಾಧಿಕಾರಿಯಾಗಿ ಡಾ.ಮಂಜುನಾಥ ಸಿ. ನೇಮಕಗೊಂಡಿದ್ದಾರೆ. ಪ್ರಾಥಮಿಕ ಸುರಕ್ಷಾಧಿಕಾರಿಯಾಗಿ ಮಂಗಳ ಎಂಬವರು ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಜನಪರ ಹೋರಾಟ ಸಮಿತಿಯ ಪದಾಧಿಕಾರಿಗಳು ನೂತನ ವೈದ್ಯಾಧಿಕಾರಿಯವರನ್ನು ಭೇಟಿಯಾಗಿ ಹೂ ಗುಚ್ಚ ನೀಡಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಶ್ ಶೆಟ್ಟಿ, ಜನಪರ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ರಾವ್, ಕಾರ್ಯದರ್ಶಿ ಜುನೈದ್ ಕೆಮ್ಮಾರ, ಸಾಮಾಜಿಕ ಕಾರ್ಯಕರ್ತೆ ಸೆಲಿಕತ್ ರಹಮಾನ್, ಮೋಹನದಾಸ ಶೆಟ್ಟಿ ಬಡಿಲ, ಬಶೀರ್ ಹಲ್ಯಾರ, ಸುಭಾಷ್ ಶೆಟ್ಟಿ, ಹಿರಿಯ ಸುರಕ್ಷಾಧಿಕಾರಿ ಮರಿಯಮ್ಮ, ಹಿರಿಯ ಸುಶ್ರೂಷಣಾಧಿಕಾರಿ ರಹ್ಮತ್, ಆಶಾ ಕಾರ್ಯಕರ್ತೆಯರಾದ ಜಾನಕಿ, ವಿಜಯ ಮತ್ತಿತರರು ಉಪಸ್ಥಿತರಿದ್ದರು.