ಉಪ್ಪಿನಂಗಡಿ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನಿಂದ ನಡೆಸಲ್ಪಡುತ್ತಿರುವ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಸೈಬರ್ ಕ್ರೈಂ, ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮ ಹಾಗೂ ರಸ್ತೆ ನಿಯಮಗಳ ಪಾಲನೆಯ ಕುರಿತಂತೆ ಮಾಹಿತಿ ಕಾರ್ಯಾಗಾರ ನಡೆಯಿತು.
ಉಪ್ಪಿನಂಗಡಿ ಠಾಣೆಯ ಎಎಸ್ಐ ಕವಿತಾ ಅವರು ಮಾಹಿತಿ ನೀಡಿ, ಮಕ್ಕಳಿಂದ ದೊಡ್ಡವರವರೆಗೆ ಹಣದ ಆಮಿಷವೊಡ್ಡಿ ವಂಚಿಸುವ ಜಾಲ ಒಂದೆಡೆಯಾದರೆ, ಹದಿಹರೆಯದ ವಯಸ್ಸಿನಲ್ಲಿ ಆಗುವ ಬದಲಾವಣೆಯಲ್ಲಿ ಮನಸ್ಸಿನ ನಿಯಂತ್ರಣವನ್ನು ಇಟ್ಟುಕೊಂಡು ಶಾಲೆಯ ಹಾಗೂ ನಿಮ್ಮ ಹೆತ್ತವರ ಹೆಸರನ್ನು ಬೆಳಗುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕೆಂದು ಹೇಳಿದರು. ಮಾದಕ ವಸ್ತುವಿನ ವಿವಿಧ ಬಗೆಗಳು ಹಾಗೂ ಆಕರ್ಷಣೆಗೊಳಿಸುವ ರೀತಿಯಿಂದ ವಿದ್ಯಾರ್ಥಿಗಳು ದೂರವಿರಬೇಕೆಂದು ಹಾಗೂ ರಸ್ತೆ ನಿಯಮಗಳನ್ನು ಪಾಲನೆಯೊಂದಿಗೆ ನಿಮ್ಮ ರಕ್ಷಣೆಯ ಜವಾಬ್ದಾರಿ ನೀವೇ ಕಾಪಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹಲವು ಉದಾರಣೆಯೊಂದಿಗೆ ಮನವರಿಕೆ ಮಾಡಿದರು.
ಪೊಲೀಸ್ ಸಿಬ್ಬಂದಿ ಅಭಿಜಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಲಕ್ಷ್ಮಿ ಪಿ., ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಸವಿತಾ ಪಿ.ಸಿ ವಂದಿಸಿದರು. ಶಿಕ್ಷಕಿ ನಿತ್ಯಾ ಬಿ.ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಶಕುಂತಲಾ ಕೆ., ಮೋಹನ್ ಹೆಚ್., ಡೊಂಬಯ ಗೌಡ, ಭವ್ಯ ವೈ ಸಹಕರಿಸಿದರು.