ಕುಲಾಲ ಸಮಾಜ ಸೇವಾ ಸಂಘದಿಂದ ಆಟಿದ ಕೂಟ, ಸಸಿ ವಿತರಣೆ

0

ಶಿಕ್ಷಣ, ಉದ್ಯೋಗಕ್ಕಾಗಿ ಸಮಾಜದ ಯುವತಿಯರಿಗೆ ಮಂಗಳೂರಿನಲ್ಲಿ ಉಚಿತ ವಸತಿ ನಿಲಯ-ಮಯೂರು ಉಳ್ಳಾಲ್

ಪುತ್ತೂರು: ಕುಲಾಲ ಸಮಾಜದ ಬಡ ಯುವತಿಯರಿಗೆ ಉದ್ಯೋಗ, ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಮಾತೃಸಂಘದಿಂದ ಉಚಿತ ವಸತಿ ನಿಲಯ ನಿರ್ಮಿಸಲಾಗುವುದು. ಮುಂದಿನ ಎರಡು ಮೂರು ವರ್ಷದಲ್ಲಿ ನಡೆಯಲಿರುವ ಮಾತೃ ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ವಸತಿ ನಿಲಯ ಲೋಕಾರ್ಪಣೆಗೊಳ್ಳಲಿದೆ ಎಂದು ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ ಹೇಳಿದರು.


ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ವತಿಯಿಂದ ಜು.20ರಂದು ರೋಟರಿ ಮಣಿಷಾ ಸಭಾಂಗಣದಲ್ಲಿ ನಡೆದ ಆಟಿದ ಕೂಟ ಹಾಗೂ ಸಸಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಸತಿ ನಿಲಯಕ್ಕಾಗಿ ಮಂಗಳೂರು ವೀರ ನಾರಾಯಣ ದೇವಸ್ಥಾನದ ಬಳಿ ಮಂಗಳೂರು ಮಹಾ ನಗರ ಪಾಲಿಕೆಯಿಂದ ಜಾಗ ಮಂಜೂರುಗೊಂಡಿದೆ. ಇದಕ್ಕಾಗಿ ಶೇ.25ರಷ್ಟು ಮೊತ್ತ ಸಿದ್ದವಾಗಿದೆ. ವಸತಿ ನಿಲಯ ಲೋಕಾರ್ಪಣೆಗೊಳಿಸುವ ಮುಖಾಂತರ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಾಂತರ ಪ್ರದೇಶಗಳ ಯುವತಿಯರಿಗೆ ಶಿಕ್ಷಣ, ಉದ್ಯೋಗ ಪಡೆಯವವವರಿಗೆ ಅವಕಾಶ ಕಲ್ಪಿಸಲಾಗುವುದು. ಸಮಾಜದ ದೀಮಂತ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಅಮ್ಮೆಂಬಳ ಬಾಳಪ್ಪ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಅವರ ಹೆಸರನ್ನು ಮಂಗಳೂರಿನ ಮುಖ್ಯ ರಸ್ತೆಗೆ ನಾಮಕರಣಗೊಳಿಸುವಂತೆ ಮನವಿ ಮಾಡಿದ್ದು, 3 ವರ್ಷಗಳ ನಿರಂತರ ಪ್ರಯತ್ನ ಫಲವಾಗಿ ಸರಕಾರ ನಾಮಕರಣ ಮಾಡಿ ಆದೇಶಿಸಿದ್ದು ಆ.10ರಂದು ರಸ್ತೆ ಅಮ್ಮೆಂಬಲ ಬಾಳಪ್ಪ ರಸ್ತೆ ನಾಮಕರಣಗೊಳ್ಳಲಿದೆ. ಸಮಾಜ ಬಾಂಧವರನ್ನು ಐಎಎಸ್, ಐಪಿಎಸ್ ಅಧಿಕಾರಿಗಳನ್ನಾಗಿಸುವ ನಿಟ್ಟಿನಲ್ಲಿ ತರಬೇತಿ, ಕ್ರೀಡಾ ಪ್ರತಿಭೆಗಳಿಗೆ ತರಬೇತಿಯನ್ನು ಆಯೋಜಿಸಲಾಗುವುದು ಎಂದು ಹೇಳಿದ ಅವರು ನಾವು ಮಾಡುವ ಯಾವುದೇ ಕಾರ್ಯಗಳಿದ್ದರೂ ಅದು ಸಮಾಜದ ಒಳಿತಿಗಾಗಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಟೀಕೆ, ಸವಾಲುಗಳಿಗೆ ಉತ್ತರ ನೀಡಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.


ಸಂಪನ್ಮೂಲ ವ್ಯಕ್ತಿಯಾಗಿದ್ದ ಉಡುಪಿ ಕಟಪಾಡಿ ಶ್ರೀಶಾ ವಿದ್ಯಾ ಕಾಲೇಜಿನ ಉಪನ್ಯಾಸಕ ಧೀರಜ್ ಬೆಳ್ಳಾರೆ ಮಾತನಾಡಿ, ಆಟಿ ಆಚರಣೆಯು ಸಂಭ್ರಮಿಸುವ ದಿನವಲ್ಲ. ಅದು ಅಂದಿನ ಜೀವನ ಪದ್ದತಿಯಾಗಿತ್ತು. ಹಿರಿಯರು ಅಚರಣೆಯಲ್ಲಿಯೂ ವೈಜ್ಞಾನಿಕ ಕಾರಣವಿದೆ. ಅದನ್ನು ಮೂಡನಂಬಿಕೆಯಾಗಿ ಮಾಡಬಾರದು. ನಮ್ಮಲ್ಲಿ ನಂಬಿಕೆಗಳು ಹೆಚ್ಚಾಗಬೇಕು.ಮಣ್ಣಿನ ಸಂಸ್ಕೃತಿ ಉಳಿಸುವ ಮುಖಾಂತರ ಹಿರಿಯರು ನೀಡಿದ ಕೊಡುಗೆಗಳನ್ನು ಉಳಿಸಿ, ಬೆಳೆಸಬೇಕು ಎಂದರು.


ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಣಪ್ಪ ಮೂಲ್ಯ ಕಜೆ ಮಾತನಾಡಿ, ಹಿಂದಿನ ಕಾಲದ ಕಷ್ಟದ ದಿನಗಳನ್ನು ಸಮಾಜ ಬಾಂಧವರಿಗೆ ತಿಳಿಸುವ ಕಾರ್ಯಕ್ರಮ ಸಂಘದ ಮೂಲಕ ಆಯೋಜಿಸಲಾಗುತ್ತಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್ ಮಾತನಾಡಿ, ಸಂಘದ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಕೈಜೋಡಿಸಿದಾಗ ಅಭಿವೃದ್ಧೀ ಸಾಧ್ಯ. ಸಂಘ ಮುಖಾಂತರ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸಿದ ಪ್ರತಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸಿದರು.


ಶಿಕ್ಷಣ ಇಲಾಖೆಯ ನಿವೃತ್ತ ದ್ವಿತೀಯ ದರ್ಜೆ ಸಹಾಯಕ ಕೃಷ್ಣಪ್ಪ ಮೂಲ್ಯ ಬೆಳ್ಳಾರೆ, ಅನಡ್ಕ ಹಿ.ಪ್ರಾ ಶಾಲಾ ಸಹ ಶಿಕ್ಷಕಿ ಮಾಲತಿ ಚರಣ್, ಸಂಘದ ನಿಕಟಪೂರ್ವ ಅಧ್ಯಕ್ಷ ನವೀನ್ ಕುಲಾಲ್ ಮಾತನಾಡಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ಬಹುಮಾನ ವಿತರಣೆ:
ಬೆದ್ರಾಳದಲ್ಲಿ ನಡೆದ ಮೂಲ್ಯರೆ ಕೆಸರ್‌ದ ಗೊಬ್ಬು ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಹರಿಣಾಕ್ಷಿ ಬಹುಮಾನ ವಿಜೇತರ ಪಟ್ಟಿ ಓದಿದರು.
ಚೈತಾಲಿ ಬಾರಿಕೆ ಪ್ರಾರ್ಥಿಸಿದರು. ಜತೆ ಕಾರ್ಯದರ್ಶೀ ತೇಜ ಕುಮಾರ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಕುಲಾಲ್ ಮುಕ್ವೆ, ಕ್ರೀಡಾ ಕಾರ್ಯದರ್ಶಿ ಹರೀಶ್ ಕುಲಾಲ್ ಶೇವಿರೆ, ಕೋಶಾಧಿಕಾರಿ ಚಿತ್ರಲೇಖಾ, ಪ್ರವೀಣ್ ಕುಲಾಲ್ ನಡುವಾಲ್, ಅನಿತಾ ಚಂದ್ರ ಕುಲಾಲ್ ಕೊಡಿಮರ, ಜಯಾನಂದ ಸಿ.ಎಚ್. ಹಾಗೂ ವಸಂತ ಸಿಟಿಗುಡ್ಡೆ ಅತಿಥಿಗಳನ್ನು ತಾಂಬೂಲ ನೀಡಿ ಶಾಲು ಹಾಕಿ ಸ್ವಾಗತಿಸಿದರು. ಯತೀಶ್ ಕುಲಾಲ್ ಕೋರ್ಮಂಡ ಕಾರ್ಯಕ್ರಮ ನಿರೂಪಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಸುಧಾಕರ ಕುಲಾಲ್ ವಂದಿಸಿದರು.


ಸಭಾ ಕಾರ್ಯಕ್ರಮದ ಬಳಿಕ ನವೀನ ಕುಲಾಲ್ ನೇತೃತ್ವದಲ್ಲಿ ಮನರಂಜನಾ ಆಟಗಳು ನಡೆಯಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮನೆಯಲ್ಲಿ ತಯಾರಿಸಿ ತಂದಿದ್ದ ಆಟಿ ತಿಂಗಳ ವಿಶೇಷತೆಯನ್ನು ಸಾರುವ ಮೂವತ್ತಕ್ಕೂ ಅಧಿಕ ಬಗೆ ಬಗೆಯ ತಿನಿಸುಗಳೊಂದಿಗೆ ನಡೆದ ಮಧ್ಯಾಹ್ನದ ಭೋಜನವು ಗಮನ ಸೆಳೆಯಿತು.

LEAVE A REPLY

Please enter your comment!
Please enter your name here