ಪುತ್ತೂರಿನಿಂದ ಕನಿಷ್ಠ ಹತ್ತು ಮಂದಿ ಐಎಎಸ್, ಐಪಿಎಸ್ ಗಳ ಸೃಷ್ಟಿಯೇ ನನ್ನ ಗುರಿ: ಅಶೋಕ್ ರೈ
ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ಜಿಲ್ಲೆಯ ಯುವಕರ ಭಾಗವಹಿಸುವಿಕೆ ಕಡಿಮೆಯಾಗಿದೆ, ಜಿಲ್ಲೆಯಲ್ಲಿರುವ ಹೆಚ್ಚಿನ ಎಲ್ಲಾ ಐಎಎಸ್ ಅಧಿಕಾರಿಗಳು ಉತ್ತರ ಭಾರತದವರೇ ಆಗಿದ್ದಾರೆ. ದ ಕ ಜಿಲ್ಲೆ ಅದರಲ್ಲೂ ನನ್ನ ಕ್ಷೇತ್ರವಾದ ಪುತ್ತೂರಿನಿಂದ ಕನಿಷ್ಠ ಹತ್ತು ಮಂದಿಯಾದರೂ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸೃಷ್ಟಿ ಮಾಡಬೇಕೆಂಬುದೇ ನನ್ನ ಉದ್ದೇಶವಾಗಿದ್ದು ಇದಕ್ಕಾಗಿ ತನ್ನ ಟ್ರಸ್ಟ್ ಮೂಲಕ ತರಬೇತಿ ಕಾರ್ಯಾಗಾರವನ್ನು ಪ್ರಾರಂಭಿಸಿದ್ದೇನೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಪುತ್ತೂರು ತಾಲೂಕಿನ ಆಸಕ್ತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಇಲ್ಲಿನ ಪ್ರತೀಯೊಬ್ಬ ವಿದ್ಯಾರ್ಥಿಯೂ ಕಲಿಯಬೇಕು ಆ ಮೂಲಕ ಉನ್ನತ ಸ್ಥಾನವನ್ನು ಪಡೆಯಬೇಕು. ಕಲಿಕೆಗೆ ಪ್ರಾಯದ ಅಡ್ಡಿಯಿಲ್ಲ, ಯುವ ವಿದ್ಯಾರ್ಥಿಗಳು ಕಲಿಕೆಯತ್ತ ತಮ್ಮ ಗಮನವನ್ನು ಹರಿಸುವ ಮೂಲಕ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಗುರಿಯನ್ನು ಇಟ್ಟುಕೊಳ್ಳಬೆಕು, ದುಶ್ಚಟಗಳಿಂದ ಮುಕ್ತವಾಗಿ ಮುಂದೆ ತಾನೊಬ್ಬ ಉತ್ತಮ ನಾಗರಿಕನಾಗಿ ಬದುಕಬೇಕು ಎಂಬ ಕನಸು ಕಾಣುವಂತಾಗಬೇಕು ಎಂದು ಹೇಳಿದರು.
ಸೋತರೂ ಪರವಾಗಿಲ್ಲ ಪರೀಕ್ಷೆ ಎದುರಿಸಿ
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸುವುದು ಎಂಬ ಭಯ ಹಲವರಲ್ಲಿದೆ, ಪರಿಕ್ಷೆಯಲ್ಲಿ ಫೇಲಾದರೆ ಎಂಬ ಚಿಂತೆ ಬಹುತೇಕರಲ್ಲಿದೆ ಈ ಬಗ್ಗೆ ಯಾವುದೇ ಚಿಂತೆ ಬೇಡ, ಸೋತರೆ ಸೋಲಲಿ ನೀವು ಪರಿಕ್ಷೆಯಲ್ಲಿ ಭಾಗವಹಿಸಬೇಕು ಎಂದು ಶಾಸಕರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಕಲಿಕೆಗೆ ಸರಕಾರದಿಂದ ನೆರವು ದೊರೆಯುತ್ತಿದೆ ಅದನ್ನು ಬಳಕೆ ಮಾಡಿಕೊಳ್ಳಬೇಕು, ಆರ್ಥಿಕವಾಗಿ ತೀರಾ ಅಶಕ್ತರಿದ್ದಲ್ಲಿ ತನ್ನ ಟ್ರಸ್ಟ್ ಮೂಲಕ ನೆರವು ನೀಡಲು ಸಿದ್ದ ಎಂದು ಶಾಸಕರು ಭರವಸೆ ನೀಡಿದರು. ತನ್ನ ಟ್ರಸ್ಟ್ ಮೂಲಕ ತನ್ನ ಕ್ಷೇತ್ರದ ಜನತೆಗೆ, ವಿದ್ಯಾರ್ಥಿಗಳಿಗೆ, ಅಸಕ್ತರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಜನತೆ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಜನಮೆಚ್ಚುವ ಕಾರ್ಯವಾಗಿದೆ: ಬಡಗನ್ನೂರು
ಶಾಸಕರು ತನ್ನ ಟ್ರಸ್ಟ್ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ಭಾಗವಹಿಸಲು ಸಹಕಾರವಾಗುವಂತೆ ಕಾರ್ಯಾಗಾರವನ್ನು ಮಾಡಿದ್ದು, ಜನ ಮೆಚ್ಚುವ ಕೆಲಸವಾಗಿದೆ. ರಾಜಕೀಯ ವ್ಯಕ್ತಿಗಳು ಯುವ ಸಮೂಹವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುವ ಇಂದಿನ ಕಾಲಘಟ್ಟದಲ್ಲಿ ಯುವ ಸಮೂಹಕ್ಕೆ ದಾರಿದೀಪವಾಗುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಹೇಳಿದರು.
ಶಾಸಕರು ಆಯೋಜಿಸುವ ತರಬೇತಿ ಕಾರ್ಯಗಾರ, ಉದ್ಯೋಗ ಮೇಳವನ್ನು ಯುವ ಸಮೂಹ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಶಾಸಕರ ಉದ್ದೇಶ ಸಫಲವಾಗುವಲ್ಲಿ ಸಹಕಾರ ನೀಡಬೇಕು, ಇಂತಹ ಒಬ್ಬ ಶಾಸಕರನ್ನು ಕರ್ನಾಟಕ ರಾಜ್ಯದಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲ, ಇನ್ನೊಬ್ಬರ ಅಭಿವೃದ್ದಿಯಾಗಬೇಕು ಎಂಬ ದೊಡ್ಡ ಮನಸ್ಸು ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಮಾತನಾಡಿ, ಶಾಸಕ ಅಶೋಕ್ ರೈ ಅವರ ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವುದು ಮತ್ತು ಅದನ್ನು ಹೇಗೆ ಎದುರಿಸುವ ಕುರಿತು ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಟ್ರಸ್ಟ್ ಮೂಲಕ ನೀಡಿದ ತರಬೇತಿಯಲ್ಲಿ ಕನಿಷ್ಟ 10 ಮಂದಿಯಾದರೂ ಐಎಎಸ್ ಅಥವಾ ಐಪಿಎಸ್ ಪಾಸ್ ಮಾಡಿದರೆ ಅದುವೇ ನಮಗೆ ಅತ್ಯಂತ ಸಂತೋಷದಾಯಕ ವಿಚಾರವಾಗಿದೆ, ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಟ್ರಸ್ಟ್ ಮೂಲಕ ಆಯೋಜನೆ ಮಾಡಲಿದ್ದು, ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಶಿವಮೊಗ್ಗದ ಐಎಎಸ್ ದರ್ಶನ ಸಂಸ್ಥೆ ಮುಖ್ಯಸ್ಥ ದರ್ಶನ್ ಗರ್ತಿಕೆರೆ ಐಎಎಸ್, ಐಪಿಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಕಾರ್ಯಾಗಾರ ನಡೆಸಿದರು.
ವೇದಿಕೆಯಲ್ಲಿ ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್, ಟ್ರಸ್ಟ್ ಸದಸ್ಯರಾದ ಯೋಗೀಶ್ ಸಾಮಾನಿ, ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ದರ್ಶನ ಸಂಸ್ಥೆಯ ನಿರ್ದೇಶಕರಾದ ನೇಹಾ ಸುಧಾಕರ್, ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ನೆಲ್ಲಿಕಟ್ಟೆ, ಗುತ್ತಿಗೆದಾರರಾದ ಸಾಹಿರಾ ಬನ್ನೂರು ಉಪಸ್ಥಿತರಿದ್ದರು.
ಬಾಲಕೃಷ್ಣ ಪೂಜಾರಿ ಸ್ವಾಗತಿಸಿದರು. ನಿಹಾಲ್ ಪಿ ಶೆಟ್ಟಿ ವಂದಿಸಿದರು. ಟ್ರಸ್ಟ್ ಮೆನೆಜರ್ ಲಿಂಗಪ್ಪ ಕುದ್ಮಾನ್, ಸಿಬಂದಿ ರಚನಾ ವಿವಿಧ ಕಾರ್ಯಕ್ರಮ ನಿರೂಪಿಸಿದರು.