ಯಾತ್ರೆ ಮುಗಿಸಿ ಊರಿಗೆ ಆಗಮಿಸಿದ ಯುವಕರಿಗೆ ಭರ್ಜರಿ ಸ್ವಾಗತ
ಪುತ್ತೂರು: ಬೈಕ್‌ನಲ್ಲಿ ದೇಶ ಪರ್ಯಟನೆ ನಡೆಸಿದ ಯುವಕರಿಬ್ಬರು ಊರಿಗೆ ಮರಳಿದ್ದು ಅವರನ್ನು ಊರವರು ಸ್ವಾಗತಿಸಿದ್ದಾರೆ.
ಜೂ.24ರಂದು ಕೊಟ್ಯಾಡಿಯಿಂದ ಒಂದು ಬೈಕ್‌ನಲ್ಲಿ ಹೊರಟ ಅನ್ವರ್ ಅಬ್ದುಲ್ಲ ಕೊಟ್ಯಾಡಿ ಹಾಗೂ ಬದ್ರುದ್ದೀನ್ ಕೊಟ್ಯಾಡಿಯವರು ದೇಶದ 17 ರಾಜ್ಯಗಳಲ್ಲಿ ಪರ್ಯಟನೆ ನಡೆಸಿ 72 ಪ್ರಸಿದ್ಧ ಸ್ಥಳಗಳನ್ನು ವೀಕ್ಷಣೆ ನಡೆಸಿದ್ದು 25 ದಿನಗಳ ದೇಶ ಪರ್ಯಟನೆಯಲ್ಲಿ ಅವರು ಸುಮಾರು 8450 ಕಿ.ಮೀ ಪ್ರಯಾಣ ಮಾಡಿದ್ದಾರೆ. ಬಳಿಕ ಜು.18ರಂದು ಮರಳಿ ಊರಿಗೆ ತಲುಪಿದ್ದಾರೆ. ಈ ವೇಳೆ ಅವರನ್ನು ಊರಿನಲ್ಲಿ ಅವರ ಗೆಳೆಯರು, ಹಿತೈಷಿಗಳು ಅಭಿನಂದಿಸಿದರು. ನೆ.ಮುಡ್ನೂರು ಗ್ರಾ.ಪಂ ಸದಸ್ಯ ಮಹಮ್ಮದ್ ರಿಯಾಝ್, ಕೊಟ್ಯಾಡಿ ಮಸೀದಿಯ ಕಾರ್ಯದರ್ಶಿ ಫಾರೂಕ್ ಕೊಟ್ಯಾಡಿ ಮತ್ತಿತರರು ಹಾರ ಹಾಕಿ ಅಭಿನಂದಿಸಿದರು.

ಯಾತ್ರೆಯಲ್ಲಿ ಲಡಾಕ್ ಸೇರಿದಂತೆ ಪ್ರಸಿದ್ದ ಸ್ಥಳಗಳ ವೀಕ್ಷಣೆ ನಡೆಸಿದ ಅನ್ವರ್ ಅಬ್ದುಲ್ಲ ಹಾಗೂ ಬದ್ರುದ್ದೀನ್ ಕೊಟ್ಯಾಡಿಯವರು ವಿವಿಧ ಪ್ರದೇಶಗಳ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ತಿಳಿದುಕೊಂಡಿರುವುದಾಗಿ ತಿಳಿಸಿದ್ದಾರೆ. ಬೈಕ್ ಮೂಲಕ ದೇಶ ಸುತ್ತಿದ ಯುವಕರಿಬ್ಬರ ಸಾಹಸಕ್ಕೆ ಊರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.