ಮೇಳದಲ್ಲಿ ಭಾಗವಹಿಸುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಿ; ಅಶೋಕ್ ರೈ
ಪುತ್ತೂರು; ಆ.1 ಮತ್ತು 2 ರಂದು ಮೂಡಬಿದ್ರೆಯ ಆಳ್ವಾಸ್ನಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸುವ ಮೂಲಕ ಉದ್ಯೋಗಪಡೆದುಕೊಳ್ಳಬೇಕು, ಯಾರೂ ಈ ಅವಕಾಶದಿಂದ ವಂಚಿತರಾಗಬಾರದು ಅದಕ್ಕಾಗಿಯೇ ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಶಾಸಕರ ಭವನದ ಸಭಾಂಗಣದಲ್ಲಿ ನಡೆದ ಉದ್ಯೋಗ ಮೇಳದ ಬಗ್ಗೆ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಳೆದ ಬಾರಿಯೂ ಪುತ್ತೂರಿನಿಂದ ನೂರಾರು ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು, ಈ ಬಾರಿಯೂ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸುವಂತೆ ಎಲ್ಲಾ ವ್ಯವವ್ಥೆಗಳನ್ನು ಮಾಡಲಾಗುವುದು, ಈಗಾಗಲೇ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಪುತ್ತೂರು ಆಸುಪಾಸಿನ ಎಲ್ಲಾ ವಿದ್ಯಾವಂತ ನಿರುದ್ಯೋಗಿಗಳು ಭಾಗವಹಿಸುವಂತೆ ಶಾಸಕರು ವಿನಂತಿಸಿದರು.
ಪುತ್ತೂರಿನಿಂದ 10 ಬಸ್ಸಿನ ವ್ಯವಸ್ಥೆ
ಈ ಬಾರಿ ಮೂಡಬಿದ್ರೆಯ ಆಳ್ವಾಸ್ ಸಂಸ್ಥೆಯಲ್ಲಿ ನಡೆಯಲಿರುವ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ ಅಭ್ಯರ್ಥಿಗಳನ್ನು ಕರದೊಯ್ಯಲು 10 ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಆಕಾಂಕ್ಷಿಗಳು ಮಾಹಿತಿಗಾಗಿ ಶಾಸಕರ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಯಾರೂ ಉದ್ಯೋಗದಿಂದ ವಂಚಿತರಾಗಬಾರದು ಎಂಬುದೇ ನಮ್ಮ ಉದ್ದೇಶವಾಗಿದೆ. ನೂರಾರು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು ಎಸ್ಎಸ್ಎಲ್ಸಿ ಪಾಸಾದವರಿಂದ ಹಿಡಿದು ಇಂಜನಿಯರ್ಗಳ ವರೆಗಿನವರೆಗೂ ಮೇಳದಲ್ಲಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ತಪ್ಪದೇ ಭಾಗವಹಿಸಿ: ವಿವೇಕ್ ಆಳ್ವ
ಉದ್ಯೋಗ ಮೇಳದ ರುವಾರಿ ಮೂಡಬಿದ್ರೆ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥ ವಿವೇಕ್ ಆಳ್ವರವರು ಮಾತನಾಡಿ, ಉದ್ಯೋಗ ಮೇಳದಲ್ಲಿ ಪ್ರತೀ ವರ್ಷ 20 ಸಾವಿರ ಮಂದಿ ಭಾಗವಹಿಸುತ್ತಾರೆ, ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ಇದು ಸುವರ್ಣವಕಾಶವಾಗಿದೆ. ಶಾಸಕರ ನೇತೃತ್ವದಲ್ಲಿ ಪುತ್ತೂರಿನಿಂದ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ ಈ ಅವಕಾಶವನ್ನು ಯಾರೂ ಕಳೆದುಕೊಳ್ಳಬೇಡಿ ಎಂದು ಹೇಳಿದರು.
ಉದ್ಯೋಗ ಮೇಳದಲ್ಲಿ ಭಾಗವಹಿಸುವುದು ಮತ್ತು ಸಂದರ್ಶನವನ್ನು ಹೇಗೆ ಎದುರಿಸುವುದು ಎಂಬುದರ ಬಗ್ಗೆ ಟ್ರಸ್ಟ್ ಸದಸ್ಯರಾದ ನಿಹಾಲ್ ಪಿ ಶೆಟ್ಟಿಯವರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೆಪಿಸಿಸಿ ಪ್ರ. ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಪಿ ಆಳ್ವ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಟ್ರಸ್ಟ್ ಸದಸ್ಯರಾದ ರಿತೇಶ್ ಶೆಟ್ಟಿ ಮಂಗಳೂರು, ವಿಟ್ಲ ಬ್ಲಾಕ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಉಪಸ್ಥಿತರಿದ್ದರು. ಬಾಲಕೃಷ್ಣ ಸ್ವಾಗತಿಸಿ, ಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.

ಆಳ್ವಾಸ್ನಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಪುತ್ತೂರು ಶಾಸಕರ ಕಚೇರಿ ಬಳಿಯಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಕರೆದುಕೊಂಡು ಹೋಗಿ ಸಂಜೆ ಅದೇ ಬಸ್ಸಿನಲ್ಲಿ ಮರಳಿ ಪುತ್ತೂರಿಗೆ ಬಿಡಲಾಗುತ್ತದೆ. ಸಾವಿರಾರು ಉದ್ಯೋಗಗಳು ಮೇಳದಲ್ಲಿ ಇದ್ದು ಪುತ್ತೂರಿನ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗ ಪಡೆದುಕೊಳ್ಳುವಂತೆ ಮನವಿ ಮಾಡುತ್ತಿದ್ದೇನೆ. ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ನಡೆಸಲಿದ್ದೇವೆ.
ಸುದೇಶ್ ಶೆಟ್ಟಿ, ಕಾಯಾಧ್ಯಕ್ಷರು, ರೈ ಚಾರಿಟೇಬಲ್ ಟ್ರಸ್ಟ್