ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಜು.24ರಂದು ನಡೆಯಲಿದೆ.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ರಾಮದಾಸ ಶೆಟ್ಟಿ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ಸಂಜೆ 4 ಗಂಟೆಗೆ ಕೆಯ್ಯೂರು ದೇರ್ಲದಲ್ಲಿರುವ ಡಾ. ನರೇಂದ್ರ ರೈ ದೇರ್ಲ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಪುತ್ತೂರಿನ ರೋಯಲ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ದಂಬೆಕ್ಕಾನ ಸದಾಶಿವ ರೈ ಸನ್ಮಾನ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜರ್ನಲಿಸ್ಟ್ ಯೂನಿಯನ್ ಸದಸ್ಯರಿಗೆ ಎಸ್‌ಎಲ್‌ವಿ ಬುಕ್‌ಹೌಸ್ ವತಿಯಿಂದ ಲ್ಯಾಪ್‌ಟಾಪ್ ಬ್ಯಾಗ್ ವಿತರಣೆ ನಡೆಯಲಿದೆ. ಜರ್ನಲಿಸ್ಟ್ ಯೂನಿಯನ್ ತಾಲೂಕು ಘಟಕದ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊಟ್ಟೆತ್ತಡ್ಕ, ಉಪಾಧ್ಯಕ್ಷರಾದ ಚೈತ್ರ ಬಂಗೇರ, ಸುಮಿತ್ರಾ ಬಿ., ಕಾರ್ಯದರ್ಶಿ ಕವಿತಾ ಮಾಣಿ, ಜತೆ ಕಾರ್ಯದರ್ಶಿ ಚಿನ್ಮಯಕೃಷ್ಣ ಮತ್ತು ಕೋಶಾಧಿಕಾರಿ ಪ್ರಜ್ವಲ್ ಕೋಟ್ಯಾನ್ ತಿಳಿಸಿದ್ದಾರೆ.

ಡಾ. ದೇರ್ಲರವರಿಗೆ ಜರ್ನಲಿಸ್ಟ್ ಯೂನಿಯನ್‌ನಿಂದ ವಿಶೇಷ ಗೌರವ-ರಾಮದಾಸ್ ಶೆಟ್ಟಿ:
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಪರಿಸರಾಸಕ್ತರು, ಅಂಕಣಕಾರರು ಮತ್ತು ಕೃಷಿಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರನ್ನು ಅವರ ಮನೆಯಲ್ಲಿಯೇ ಸನ್ಮಾನಿಸಿ ಗೌರವಿಸುವ ಮೂಲಕ ವಿಶೇಷ ಗೌರವ ನೀಡಲಾಗುತ್ತಿದೆ ಎಂದು ಯೂನಿಯನ್ ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ತಿಳಿಸಿದ್ದಾರೆ. ತರಂಗ ವಾರಪತ್ರಿಕೆಯಲ್ಲಿ ಏಳು ವರ್ಷಗಳ ಕಾಲ ಸಹಸಂಪಾದಕ ಹುದ್ದೆ ಅಲಂಕರಿಸಿದ್ದಲ್ಲದೆ ಉನ್ನತ ಶಿಕ್ಷಣ ಇಲಾಖೆಯ ರಾಜ್ಯದ ವಿವಿಧ ಸರಕಾರಿ ಪದವಿ ಕಾಲೇಜುಗಳಲ್ಲಿ ೨೮ ವರ್ಷಗಳ ಸೇವೆ ಸಲ್ಲಿಸಿರುವ ಡಾ. ದೇರ್ಲ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಬೇಟೆ ಪರಿಕಲ್ಪನೆ ಮತ್ತು ಧೋರಣೆಗಳು ಎಂಬ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡಿದವರು. ಸಾಹಿತ್ಯ, ಪತ್ರಿಕೋದ್ಯಮ, ಪರಿಸರ, ಕೃಷಿ, ಜಾನಪದ, ಗ್ರಾಮ ಅಧ್ಯಯನ ಇತ್ಯಾದಿಗಳಲ್ಲಿ ಆಸಕ್ತಿ ಹೊಂದಿರುವ ಡಾ. ನರೇಂದ್ರ ರೈ ಅವರಿಗೆ ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಅನುವಾದ ಪ್ರಶಸ್ತಿ, ಪ.ಗೋ.ಪತ್ರಿಕೋದ್ಯಮ ಪ್ರಶಸ್ತಿ, ಅಕ್ಷರ ಪ್ರತಿಷ್ಠಾನ ಪ್ರಶಸ್ತಿ, ಎರಡು ಬಾರಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅತ್ಯುತ್ತಮ ಕೃಷಿ ಪುಸ್ತಕ ಪ್ರಶಸ್ತಿ, ಡಾ. ಹಾ.ಮಾ ನಾಯಕ ಅಂಕಣ ಪ್ರಶಸ್ತಿ ಒಲಿದಿದೆ. ಪ್ರಜಾವಾಣಿಯ ಅಜ್ಜನ ಜಗಲಿ, ವಿಜಯವಾಣಿ ಹಸಿರು ಉಸಿರು, ವಾರ್ತಾಭಾರತಿಯ ತನ್ಮಯ, ವಾರೆ ಕೋರೆ-ಮಣ್ಣು ಮಸಿ ಇವರ ಗಮನ ಸೆಳೆದ ಕೃತಿಗಳಾಗಿದೆ. ಕರಾವಳಿ ಕರ್ನಾಟಕದ ಕೃಷಿ ಪಲ್ಲಟ ಮತ್ತು ಪರಿಣಾಮ ಎಂಬ ಸಂಶೋಧನೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಂಶೋಧನಾ ಫೆಲೋಶಿಪ್ ಪಡೆದಿರುವ ಡಾ. ದೇರ್ಲ ಅವರ 1200ಕ್ಕಿಂತ ಹೆಚ್ಚು ನುಡಿ ಚಿತ್ರಗಳು ರಾಜ್ಯದ ಬೇರೆ ಬೇರೆ ನಿಯತಕಾಲಿಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇವರು ಬರೆದಿರುವ ಸುಮಾರು 18 ಕೃಷಿ ಪರಿಸರ ಪರ ಲೇಖನಗಳು ಕರ್ನಾಟಕ ಮತ್ತು ಕೇರಳದ ಪ್ರೌಢ ಮತ್ತು ಪದವಿ ಪಠ್ಯಗಳಲ್ಲಿ ಪಾಠಗಳಾಗಿ ಸೇರಿವೆ. ಕರ್ನಾಟಕದ ಪಿಯು ಪಠ್ಯ, ಕರ್ನಾಟಕದ ಮಂಗಳೂರು, ಬೆಂಗಳೂರು, ಧಾರವಾಡ ವಿಶ್ವವಿದ್ಯಾನಿಲಯಗಳ ಪದವಿ ಪಠ್ಯಗಳಲ್ಲಿ ಇವರ ಲೇಖನಗಳು ಪಠ್ಯಗಳಾಗಿವೆ.
ಹಂಪಿ ವಿಶ್ವವಿದ್ಯಾನಿಲಯದ ಪಿಎಚ್‌ಡಿ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸುತ್ತಿರುವ ನರೇಂದ್ರ ರೈ ಅವರು ರಾಜ್ಯದ ಬೇರೆ ಬೇರೆ ಕಾಲೇಜುಗಳ ಪಠ್ಯ ರಚನಾ ಸಮಿತಿಯಲ್ಲೂ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಈವರೆಗೆ ಸುಮಾರು 40ಕ್ಕಿಂತ ಹೆಚ್ಚು ಕೃತಿಗಳನ್ನು ಬರೆದು ಸಂಪಾದಿಸಿರುವ ದೇರ್ಲ ಅವರ ತೇಜಸ್ವಿ ಪತ್ರಗಳು ಬಹಳ ಜನಪ್ರಿಯವಾದ ಸಂಪಾದನಾ ಕೃತಿಯಾಗಿದೆ. ಕುವೆಂಪು, ಕಾರಂತ, ತೇಜಸ್ವಿ, ಅನಂತಮೂರ್ತಿ, ಲಂಕೇಶ್, ದೇವನೂರು, ಶಿವರುದ್ರಪ್ಪ ಮೊದಲಾದವರು ಪರಸ್ಪರ ಬರೆದುಕೊಂಡ ಸುಮಾರು 700 ಪತ್ರಗಳು ಈ ಕೃತಿಯಲ್ಲಿ ಸಂಪಾದನೆಗೊಂಡು ಇದು ಒಂದು ಕಾಲದ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯೂ ಆಗಿದೆ. ಕರ್ನಾಟಕ ಕೃಷಿ ಕಥನ ಮಾಲಿಕೆ ದೇರ್ಲ ಅವರ ಒಂದು ವಿಶಿಷ್ಟ ಅಧ್ಯಯನ ದಾಖಲಾತಿಯಾಗಿದ್ದು ಈ ದೇಶದಲ್ಲಿ ಮುತ್ಸದ್ಧಿಗಳ, ರಾಜಕಾರಣಿಗಳ, ಸಮಾಜ ಸುಧಾರಕರ ಸಾಹಿತಿಗಳ, ವಿಜ್ಞಾನಿಗಳ ಆತ್ಮ ಚರಿತ್ರೆಗಳು ಜೀವನ ಚರಿತ್ರೆಗಳು ಯಥೇಚ್ಛವಾಗಿ ಪ್ರಕಟವಾಗುತ್ತವೆ. ಆದರೆ ಎಲ್ಲರ ಹೊಟ್ಟೆ ತುಂಬಿಸುವ ರೈತರ ಸಾಧನೆಯನ್ನು ಯಶೋಗಾಥೆಯನ್ನು ದಾಖಲಿಸುವ ದೃಷ್ಟಿಯಲ್ಲಿ ಈಗಾಗಲೇ ಈ ರಾಜ್ಯದ ಆರು ಜನ ಅನಾಮಿಕ ರೈತರನ್ನು ಪುಸ್ತಕ ರೂಪದಲ್ಲಿ ‘ಕರ್ನಾಟಕ ಕೃಷಿ ಕಥನ ಮಾಲಿಕೆ’ ಎಂಬ ಸರಣಿಯಲ್ಲಿ ನರೇಂದ್ರ ರೈ ಅವರು ಅವರು ದಾಖಲಿಸಿದ್ದಾರೆ. ಈ ಸರಣಿ ಮತ್ತಷ್ಟು ರೈತರ ಜೀವನ ಚರಿತ್ರೆಯನ್ನು ದಾಖಲಿಸಲಿದೆ.
ಈ ಭೂಮಿ ನಮ್ಮದಲ್ಲ ಮುಂದೆ ಹುಟ್ಟಬೇಕಾದ ಮಕ್ಕಳದ್ದು ಎಂಬ ಇರಾದೆಯಿಂದ ನೀರು ಗಾಳಿ ಮಣ್ಣು ಹಾಳಾಗುವ ದಿನಮಾನದಲ್ಲಿ ರೈ ಅವರು ಹೆಚ್ಚು ಬರೆಯುತ್ತಿರುವುದು ಪರಿಸರದ ಬಗ್ಗೆ. ಅವರ 40 ಕೃತಿಗಳ ಪೈಕಿ ಸುಮಾರು 18 ಕೃತಿಗಳು ಪರಿಸರ ಸಂಬಂಧಿಸಿದ ಕೃತಿಗಳೇ ಆಗಿವೆ. ‘ದಿ ಹಿಂದು’ ರಾಷ್ಟ್ರೀಯ ದೈನಿಕ ಪ್ರಕಟಿಸುವ ವಾರ್ಷಿಕ ಕೃಷಿ ವಿಶೇಷಾಂಕದಲ್ಲಿ ‘ಕರ್ನಾಟಕದ ಕೃಷಿ ಸಾಧನೆ ಸಾಧ್ಯತೆ’ ಎನ್ನುವ ವಿಶೇಷ ಲೇಖನ ಪ್ರಕಟವಾಗಿದೆ.
ತರಂಗದಲ್ಲಿ ಇವರು ಸಹಸಂಪಾದಕರಾಗಿದ್ದಾಗ ಕನ್ನಡದ ಸಾಹಿತ್ಯ ದಿಗ್ಗಜರಾದ ತೇಜಸ್ವಿ, ಪುತಿನ, ಕೆಎಸ್ ನರಸಿಂಹಸ್ವಾಮಿ, ಎಸ್‌ಎಲ್ ಭೈರಪ್ಪ, ಚದುರಂಗ ಚೆನ್ನವೀರ ಕಣವಿ, ವೈಎನ್ಕೆ, ಕೈಯಾರ ಮೊದಲಾದವರ ವಿಶೇಷ ಸಂದರ್ಶನವನ್ನು ನಡೆಸಿದ್ದರು. ಇವರ ಕೃತಿಗಳಲ್ಲಿ ನೆಲದವರು, ಕೃಷಿ-ದೇಸೀ ಚಿಂತನೆ, ಹಸಿರು-ಉಸಿರು (ಅತ್ಯುತ್ತಮ ಕೃಷಿ ಪುಸ್ತಕ-ಬೆಂಗಳೂರು ಕೃಷಿ ವಿವಿ ಪ್ರಶಸ್ತಿ)., ನೆಲಮುಖಿ (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ. ಹಾ.ಮಾ. ನಾಯಕ ಅಂಕಣ ಪ್ರಶಸ್ತಿ ಪಡೆದ ಕೃತಿ) ಬೀಜಧ್ಯಾನ, ಹಳ್ಳಿಯ ಆತ್ಮಕಥೆ, ಬೇರು-ಬದುಕು (ಅತ್ಯುತ್ತಮ ಕೃಷಿ ಪುಸ್ತಕ ಬೆಂಗಳೂರು ಕೃಷಿ ವಿವಿ ಪ್ರಶಸ್ತಿ), ಕೊರೋನಾ ನಂತರದ ಗ್ರಾಮ ಭಾರತ, ಕಾಂಕ್ರೀಟ್ ಕಾಡಿನ ಪುಟ್ಟ ಕಿಟಕಿ, ಬೊಗಸೆ ತುಂಬಾ ಬೀಜ, ಸಾವಯವ ಕೃಷಿ (8ನೇ ಮುದ್ರಣ), ಹಸಿರು ಕೃಷಿಯ ನಿಟ್ಟುಸಿರುಗಳು (2ನೇ ಮುದ್ರಣ) ನಂದನವನ ಚೌಟರ ತೋಟ ಹಣ್ಣುಗಳ ಆಗರ-ಸಸ್ಯಕಾಶಿ ಸೋನ್ಸ್‌ಫಾರ್ಮ್, ಮನಮೋಹನ-ಜೇನೇ ಜೀವನ, ಬಿ.ಕೆ. ದೇವರಾವ್-ಅನ್ನದಾರಿಯ ಅನಂತ ಹೆಜ್ಜೆ, ಬದನಾಜೆ ಶಂಕರ ಭಟ್-ಅಡಿಕೆ ಮೌಲ್ಯವರ್ಧನೆಯ ನೆಲವಿಜ್ಞಾನಿ, ಎಂಟು ಲೋಕ, ವಿಶುಕುಮಾರ್ ಬದುಕು ಬರಹ, ಹೊನ್ನಯ್ಯ ಶೆಟ್ಟಿ ಬದುಕು ಬರಹ ಡಾ. ಮೋಹನ ಆಳ್ವ, ಬದುಕು ಬರಹ ತೇಜಸ್ವಿಯೊಳಗೊಬ್ಬ ಕಲಾವಿದ, ಕೃಷಿಕ ಕವಿ, ಮೇಧಾವಿ ಕಯ್ಯಾರ ಕಿಂಞ್ಞಣ್ಣ ರೈ, ಬೇಟೆಗಾರನ ಹುಲಿಹೆಜ್ಜೆ ಕೆದಂಬಾಡಿ ಬದುಕು ಬರಹ ತೊದಲು, ಬೆಳ್ಳಿ ಗುರುತು, ಇದೂ ಪತ್ರಿಕೋದ್ಯಮ, ಕನ್ನಡದಲ್ಲಿ ಬೇಟೆ ಸಾಹಿತ್ಯ, ಕರ್ವಾಲೊ (ತುಳು ಅನುವಾದ) (ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಾಶನ)-ಕುವೆಂಪು ಭಾಷಾಭಾರತಿ ಪ್ರಶಸ್ತಿ ಪಡೆದ ಕೃತಿ, ಕರಾವಳಿ ಕನ್ನಡದ ಪತ್ರ ಸಾಹಿತ್ಯ, ಪೂರ್ಣಚಂದ್ರ ತೇಜಸ್ವಿ ನಮ್ಮೆಲ್ಲರ ತೇಜಸ್ವಿ, ಹಸಿರು ಅಧ್ಯಾತ್ಮ ಪ್ರಮುಖವಾಗಿದೆ. ಲಂಕೇಶ್ ನೆನಪು, ನೆಲೆ, ಶ್ರೀದುರ್ಗಾ, ಪಂಚದುರ್ಗಾ, ಮಂಟಮೆ, ರಥಲೋಕ, ಸಿರಿ ಹೆಜ್ಜೆ, ಅಮೃತಬಿಂದು-ಶಾಶ್ವತಿ, ಬಾಳ್ವೆಯೇ ಬೆಳಕು. ಅಜಾತಶತ್ರು ಪಾಲ್ತಾಡಿ ನೆನಪು ಇವುಗಳು ಡಾ. ದೇರ್ಲ ಅವರ ಸಂಪಾದನೆಗಳಾಗಿದೆ. ಇಂತಹ ಸಾಧಕರನ್ನು ಗೌರವಿಸಲು ಜರ್ನಲಿಸ್ಟ್ ಯೂನಿಯನ್ ಸಂತಸ ಪಡುತ್ತದೆ ಎಂದು ರಾಮದಾಸ್ ಶೆಟ್ಟಿ ತಿಳಿಸಿದ್ದಾರೆ.