ಪ್ರಕರಣ ದಾಖಲು- ಆರೋಪಿಯ ಬಂಧನ
ಪುತ್ತೂರು:ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಜು.22ರಂದು ನಡೆದಿದೆ. ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಮಂಗಳೂರು ಬಂದರು ನಿವಾಸಿ ಮಹಮ್ಮದ್ ತೌಹೀದ್ ಎಂಬಾತನನ್ನು ಪೊಲಿಸರು ಬಂಧಿಸಿದ್ದಾರೆ.
ಮಂಗಳೂರುನಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿರುವ ಪುತ್ತೂರಿನ ಯುವತಿ ಜು.22ರಂದು ಸಂಜೆ ಮಂಗಳೂರುನಿಂದ ಪುತ್ತೂರಿಗೆ ಕೆಎಸ್ಆರ್ಟಿಸಿ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಅದೇ ಬಸ್ಸಿನಲ್ಲಿದ್ದ ಆರೋಪಿ ಕೃತ್ಯ ಎಸಗಿದ್ದಾನೆ.ಬಸ್ಸು ಸಂಜೆ 6.30ರ ವೇಳೆಗೆ ಮಾಣಿ ಬಳಿ ತಲುಪಿದಾಗ ಆಕೆಯ ಹತ್ತಿರ ಕುಳಿತಿದ್ದ ಆರೋಪಿಯು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಲಾರಂಭಿಸಿದ್ದ. ಆರೋಪಿಗೆ ಗದರಿಸಿದ ಯುವತಿ ವಿಚಾರವನ್ನು ಫೋನ್ ಮೂಲಕ ತನ್ನ ತಂದೆಗೆ ತಿಳಿಸಿದ್ದರು.ಅವರು ಇತರ ಸ್ನೇಹಿತರಿಗೆ ತಿಳಿಸಿದರು. ಬಸ್ಸು ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ತಲುಪಿದಾಗ ವಿಚಾರವರಿತ ಆರೋಪಿಯು ಬಸ್ಸಿನ ತುರ್ತು ನಿರ್ಗಮನ ಕಿಟಕಿಯ ಮೂಲಕ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಆದೇಳೆಗಾಗಲೇ ಅಲ್ಲಿ ಸೇರಿದ್ದ ಸಂತ್ರಸ್ತೆಯ ತಂದೆ ಮತ್ತು ಇತರ ಸಾರ್ವಜನಿಕರು ಆರೋಪಿಯನ್ನು ಹಿಡಿದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದರು.ಆ ವೇಳೆಗಾಗಲೇ ಹಲವು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಇದರಿಂದಾಗಿ ಸ್ಥಳದಲ್ಲಿ ತುಸು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ನೀಡಿದ ದೂರಿನ ಮೇರೆಗೆ ಕಲಂ 75 ಬಿಎನ್ ಎಸ್ 2023ರಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ(ಅ.ಕ್ರ 56/2025)ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.